Last Updated:
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ (Raj B. Shetty) ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಟ, ನಿರ್ದೇಶಕ ಹಾಗೂ ಬರಹಗಾರನಾಗಿ ಈಗಾಗಲೇ ತನ್ನದೇ ಆದ ಛಾಪು ಮೂಡಿಸಿರುವ ರಾಜ್ , ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ (Actor Sivakarthikeyan) ಅಭಿನಯದ ‘ಸೆಯಾನ್’ (Seyan) ಚಿತ್ರತಂಡವನ್ನು ಅಧಿಕೃತವಾಗಿ ಸೇರಿದ್ದಾರೆ.
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ (Raj B. Shetty) ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಟ, ನಿರ್ದೇಶಕ ಹಾಗೂ ಬರಹಗಾರನಾಗಿ ಈಗಾಗಲೇ ತನ್ನದೇ ಆದ ಛಾಪು ಮೂಡಿಸಿರುವ ರಾಜ್ , ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ (Actor Sivakarthikeyan) ಅಭಿನಯದ ‘ಸೆಯಾನ್’ (Seyan) ಚಿತ್ರತಂಡವನ್ನು ಅಧಿಕೃತವಾಗಿ ಸೇರಿದ್ದಾರೆ. ಕಮಲ್ ಹಾಸನ್ (Kamal Haasan) ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದು (ಜುಲೈ 5ರಂದು) ರಾಜ್ ಬಿ. ಶೆಟ್ಟಿ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಸೆಯಾನ್’ ಚಿತ್ರದ ನಿರ್ಮಾಪಕರು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ . ಈ ಪೋಸ್ಟರ್ ಮೂಲಕ ರಾಜ್ ಬಿ. ಶೆಟ್ಟಿ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಯಿತು. ಪೋಸ್ಟರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
ಬಿಡುಗಡೆಯಾದ ಪೋಸ್ಟರ್ನಲ್ಲಿ ರಾಜ್ ಬಿ. ಶೆಟ್ಟಿ ಅವರ ಮುಖವನ್ನು ಸಂಪೂರ್ಣವಾಗಿ ತೋರಿಸಿಲ್ಲ. ಆದರೆ ರಾಜ್ ರಗಡ್ ಲುಕ್ನಲ್ಲಿ ಧಮ್ ಎಳೆಯುತ್ತಿರುವ ದೃಶ್ಯ ಮಾತ್ರ ಕಾಣಿಸಿಕೊಂಡಿದೆ. ಈ ವಿಭಿನ್ನ ಪೋಸ್ಟರ್ ಶೆಟ್ರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಶಿವಕಾರ್ತಿಕೇಯನ್ ಅಭಿನಯದ ‘ಪರಾಶಕ್ತಿ’ ಚಿತ್ರದ ಬಳಿಕ ಬರುತ್ತಿರುವ ‘ಸೆಯಾನ್’ ಸಿನಿಮಾ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದೀಗ ರಾಜ್ ಬಿ. ಶೆಟ್ಟಿ ಸೇರ್ಪಡೆಯಿಂದ ಚಿತ್ರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈ ಚಿತ್ರವನ್ನು ‘ಥಾಯ್ ಕಿಝವಿ’ ಖ್ಯಾತಿಯ ನಿರ್ದೇಶಕ ಶಿವಕುಮಾರ್ ಮುರುಗೇಶನ್ ನಿರ್ದೇಶಿಸುತ್ತಿದ್ದಾರೆ.
ರಾಜ್ ಬಿ. ಶೆಟ್ಟಿ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲೂ ತಮ್ಮ ಅಭಿನಯದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ತಮಿಳಿನ ‘ಪಾಕೆಟ್ ನಾವೆಲ್’ ಚಿತ್ರದಲ್ಲಿಯೂ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿಗೆ ರಿಲೀಸ್ ಆದ ಬಾಲಿವುಡ್ ಚಿತ್ರ ‘ಬಂದರ್’ ನಲ್ಲಿ ಶೆಟ್ರು ಎಲ್ಲರ ಮನಸ್ಸು ಗೆದ್ದಿದ್ದರು. ಅದರ ನಡುವೆಯೇ ಇದೀಗ ‘ಸೆಯಾನ್’ ಚಿತ್ರಕ್ಕೆ ಸೇರ್ಪಡೆಯಾಗಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
‘ಸೆಯಾನ್’ ಚಿತ್ರದಲ್ಲಿ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದು, ಬಾಲ ಸರವಣನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜೊತೆಗೆ ಈ ಚಿತ್ರವು ತಮಿಳು ಚಿತ್ರರಂಗದ ದಿಗ್ಗಜ ನಟ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲಂಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.
ಒಟ್ಟಾರೆಯಾಗಿ ಈ ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ಸೇರ್ಪಡೆಯಿಂದ ಈ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದ್ದು, ಕನ್ನಡದ ಪ್ರತಿಭಾವಂತ ನಟ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
Bangalore [Bangalore],Bangalore,Karnataka













