Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ | ACTPnews

Pet Cat Missing: 4 ಮಕ್ಕಳಿಗೆ ಜನ್ಮ ನೀಡಿ ಕಾಣೆಯಾದ ತಾಯಿ ಬೆಕ್ಕು! ಹುಡುಕಿ ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ ಕುಟುಂಬ | ಟ್ರೆಂಡಿಂಗ್ ಸುದ್ದಿ


ಆದರೆ ಅವುಗಳು ಇದ್ದಕ್ಕಿದ್ದಂತೆ ನಮ್ಮ ಕಣ್ತಪ್ಪಿಸಿ ಒಂದು ಕ್ಷಣ ಮರೆಯಾದರೂ ಏನೋ ಕಳೆದುಕೊಂಡ ಭಾವ ನಮ್ಮನ್ನು ಆವರಿಸಿಬಿಡುತ್ತೆ. ಇಲ್ಲಿ ಕೂಡ ಅದೇ ಆಗಿರೋದು.. ನಾಲ್ಕು ಮರಿಗಳಿಗೆ ಜನ್ಮ ನೀಡಿದ ಬಳಿಕ ಮರೆಯಾದ ಬೆಕ್ಕೊಂದನ್ನು ಆ ಮನೆಯವರು ತುಂಬಾ ಮಿಸ್ ಮಾಡ್ಕೊಳ್ತಿದ್ದಾರೆ. ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ಕಾಯ್ತಾನೇ ಕೂತಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಂತಹುದೊಂದು ಕರುಣಾಜನಕ ಘಟನೆ ನಡೆದಿದ್ದು, ಅಲ್ಲಿ ಒಂದು ಕುಟುಂಬವು ತಮ್ಮ ಕಾಣೆಯಾದ ಸಾಕು ಬೆಕ್ಕನ್ನು ಹಗಲು ರಾತ್ರಿ ಹುಡುಕುತ್ತಿದೆ. ‘ಬಬ್ಲಿ’ ಎಂಬ ಹೆಸರಿನ ಬೆಕ್ಕು ಕಳೆದ ಎರಡು ವರ್ಷಗಳಿಂದ ಕುಟುಂಬದೊಂದಿಗೆ ವಾಸಿಸುತ್ತಿತ್ತು, ಆ ಮನೆಯವರೆಲ್ಲ ಆ ಬೆಕ್ಕನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಬೆಕ್ಕು ಕೂಡ ಮನೆಯವರ ಪ್ರೀತಿಗೆ ಒಂದಿನಿತು ಕೊರತೆ ಮಾಡಿರಲಿಲ್ಲ. ಆದರೆ ಸುಮಾರು 25 ದಿನಗಳ ಹಿಂದೆ ಇದ್ದಕ್ಕಿದ್ದಂತೆ ಮನೆಯಿಂದ ಹೊರಟು ಹೋದ ಬೆಕ್ಕು ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ. ಇದೀಗ ಆ ಕುಟುಂಬವು ಕಾಣೆಯಾದ ಬಬ್ಲಿಯನ್ನು ಹುಡುಕಲು ಊರಿಡೀ ಸುತ್ತುತ್ತಿದ್ದಾರೆ.

ಬಬ್ಲಿ ಬೆಕ್ಕಿಗಾಗಿ ಮನೆಯವರು ಸುತ್ತಮುತ್ತಲಿನ ಪ್ರದೇಶವನ್ನು ಹುಡುಕಿದ್ದು ಮಾತ್ರವಲ್ಲದೇ, ಬೆಕ್ಕಿನ ಚಿತ್ರವಿರುವ ಪೋಸ್ಟರ್‌ಗಳನ್ನು ಸಹ ಮುದ್ರಿಸಿ ಊರಿಡೀ ಪೋಸ್ಟರ್ ಹಾಕಿದ್ದಾರೆ. ಬಬ್ಲಿ ಬಗ್ಗೆ ಮಾಹಿತಿ ನೀಡಿದವರಿಗೆ 5,000 ರೂಪಾಯಿಗಳ ಬಹುಮಾನವನ್ನು ನೀಡುವುದಾಗಿಯೂ ಘೋಷಿಸಿದ್ದಾರೆ. ಕೆಲವು ತಿಂಗಳ ಹಿಂದೆ ಬಬ್ಲಿ ನಾಲ್ಕು ಮಕ್ಕಳ ತಾಯಿಯಾಗಿದ್ದಳು. ಆದರೆ ಆಕೆಯ ಹಠಾತ್ ಕಣ್ಮರೆಯು ಅವಳ ಮಕ್ಕಳನ್ನು ಮಾತ್ರವಲ್ಲದೇ ನಮ್ಮನ್ನೂ ದಿಗ್ಭ್ರಮೆಗೊಳಿಸಿದೆ. ಆಕೆಯ ಬರುವಿಕೆಗಾಗಿ ಕಾಯುತ್ತಲೇ ಇದ್ದೇವೆ ಎಂದು ಮನೆಯವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಮನೆಗೆ ಬಂದಿದ್ದ ಬಬ್ಲಿ

ಈ ಬೆಕ್ಕಿನ ಮಾಲೀಕ ಕಮಲ್ ಕಿಶೋರ್ ಹೇಳುವಂತೆ, ಸುಮಾರು ಎರಡು ವರ್ಷಗಳ ಹಿಂದೆ ಒಂದು ರಾತ್ರಿ ಬಬ್ಲಿ ತಮ್ಮ ಮನೆಯ ಹೊರಗೆ ಕಾಣಿಸಿಕೊಂಡಿತು. ಅದು ತುಂಬಾ ಹಸಿದಿರುವಂತೆ ಕಾಣುತ್ತಿತ್ತು. ಆಗ ಮನೆಯ ಮಕ್ಕಳು ಅದಕ್ಕೆ ಹಾಲು ಕುಡಿಸಿದ್ದಾರೆ. ಆ ಬಳಿಕ ಮನೆಯ ಒಳಗೆ ಬಂದ ಬೆಕ್ಕು ಮನೆಯಲ್ಲಿ ಒಬ್ಬ ಸದಸ್ಯನಂತೆ ಮನೆಯವರಿಗೆ ಹೊಂದಿಕೊಂಡು ಬದುಕುತ್ತಿತ್ತು ಎಂದು ಹೇಳಿದ್ದಾರೆ.

‘ಮನೆಗೆ ಬಂದ ದಿನದಿಂದ, ಬಬ್ಲಿ ನಮ್ಮ ಮನೆಯ ಮಕ್ಕಳೊಂದಿಗೆ ಬೆರೆತು ಬೇಗನೆ ನಮ್ಮ ಕುಟುಂಬದ ಭಾಗವಾದಳು. ನಮ್ಮ ಮಕ್ಕಳು ಅವಳ ಆಹಾರ, ಪಾನೀಯ ಮತ್ತು ವಸತಿಗಾಗಿ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದರು. ಬಬ್ಲಿ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ನಮ್ಮ ಮನೆಯವರ ಜೊತೆ ತುಂಬಾ ಪ್ರೀತಿಯಿಂದ ಇರುತ್ತಿದ್ದಳು. ಹೀಗಾಗಿಯೇ ಅವಳು ಕ್ರಮೇಣ ನಮ್ಮೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಳು’ ಎಂದು ಕಮಲ್ ಕಿಶೋರ್ ಹೇಳುತ್ತಾರೆ.

ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಕಣ್ಮರೆ!

ಸುಮಾರು ಮೂರು ತಿಂಗಳ ಹಿಂದೆ, ಬಬ್ಲಿಯ ನಡವಳಿಕೆ ಬದಲಾಗತೊಡಗಿತು ಎಂದು ಕಮಲ್ ಕಿಶೋರ್ ಹೇಳುತ್ತಾರೆ. ‘ಅವಳು ಸುರಕ್ಷಿತ ಸ್ಥಳವನ್ನು ಹುಡುಕುತ್ತಿರುವಂತೆ ನಮಗೆ ಕಾಣುತ್ತಿತ್ತು. ಆಗ ಅವಳು ಗರ್ಭಿಣಿಯಾಗಿದ್ದಾಳೆಂದು ನಮ್ಮ ಮನೆಯವರು ಗಮನಿಸಿದರು. ಆಗ ನಮ್ಮ ಮನೆಯವರು ಅವಳಿಗೆ ಮನೆಯಲ್ಲೇ ಸುರಕ್ಷಿತ ಸ್ಥಳದ ವ್ಯವಸ್ಥೆ ಮಾಡಿದರು. ಸ್ವಲ್ಪ ಸಮಯದ ನಂತರ, ಅವಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದಳು. ಕುಟುಂಬವು ಆಕೆಯ ಮಕ್ಕಳನ್ನು ನೋಡಿಕೊಳ್ಳುವಲ್ಲಿ ನಿರತವಾಗಿತ್ತು, ಆದರೆ ಇದ್ದಕ್ಕಿದ್ದಂತೆ ಒಂದು ರಾತ್ರಿ ಬಬ್ಲಿ ಮನೆಯಿಂದ ಹೊರಟುಹೋದವಳು ಮತ್ತೆ ಮನೆಗೆ ಹಿಂತಿರುಗಲೇ ಇಲ್ಲ. ನಾವೆಲ್ಲ ಅವಳು ಇಂದಲ್ಲ ನಾಳೆ ಮತ್ತೆ ಬರುತ್ತಾಳೆ ಎಂದೇ ಕಾಯುತ್ತಿದ್ದೆವು, ಆದರೆ ಎಷ್ಟೇ ದಿನವಾದರೂ ಆಕೆ ಬರದೇ ಇದ್ದಾಗ ನಮಗೆ ಆತಂಕ ಆಯಿತು ಎಂದು ಕಮಲ್ ಕಿಶೋರ್ ಹೇಳಿದ್ದಾರೆ.

ಪೋಸ್ಟರ್‌ಗಳನ್ನು ಅಂಟಿಸಿ ₹5000 ಬಹುಮಾನ ಘೋಷಣೆ

ಏನೇ ಮಾಡಿದರೂ ಬಬ್ಲಿ ಪತ್ತೆಯಾಗದಿದ್ದಾಗ, ಮನೆಯವರು ಆಕೆಯ ಹುಡುಕಾಟವನ್ನು ತೀವ್ರಗೊಳಿಸಿದರು. ಅವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ ಜನರಿಂದ ಮಾಹಿತಿ ಪಡೆದರು. ಯಾವುದೇ ಸುಳಿವು ಸಿಗದಿದ್ದಾಗ, ಆಕೆಯ ಫೋಟೋವಿರುವ ಪೋಸ್ಟರ್‌ಗಳನ್ನು ಮುದ್ರಿಸಿ ವಿವಿಧ ಸ್ಥಳಗಳಲ್ಲಿ ಅಂಟಿಸಿದರು. ಬಬ್ಲಿ ಇರುವಿಕೆಯ ಬಗ್ಗೆ ನಿಖರವಾದ ಮಾಹಿತಿ ನೀಡಿದವರಿಗೆ 5,000 ರೂಪಾಯಿಗಳ ಬಹುಮಾನವನ್ನೂ ಸಹ ಅವರು ಘೋಷಿಸಿದರು.

‘ತಾಯಿಯನ್ನು ಹುಡುಕುತ್ತಿರುವ ಮಕ್ಕಳು’

ಬಬ್ಲಿ ಕಣ್ಮರೆಯಾದ ನಂತರ ಮನೆಯ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಅದರ ಮರಿಗಳು ನಿರಂತರವಾಗಿ ತಮ್ಮ ತಾಯಿಯನ್ನು ಹುಡುಕುತ್ತಿವೆ ಎಂದು ಕಮಲ್ ಕಿಶೋರ್ ಪತ್ನಿ ಕವಿತಾ ಹೇಳಿದ್ದಾರೆ.

ಯಾರೋ ಬಬ್ಲಿಯನ್ನು ಸೆರೆಹಿಡಿದು ಬೇರೆಡೆ ಬಿಟ್ಟು ಹೋಗಿರಬಹುದು ಅಥವಾ ಅವಳು ದಾರಿ ತಪ್ಪಿರಬಹುದು ಎಂದು ಕವಿತಾ ಹೇಳುತ್ತಾರೆ. ಕುಟುಂಬದವರು ಹತ್ತಿರದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಅವಳನ್ನು ಹುಡುಕಿದ್ದಾರೆ, ಆದರೆ ಇನ್ನೂ ಅವಳು ಪತ್ತೆಯಾಗಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed