Last Updated:
ಆಸ್ಟ್ರೇಲಿಯಾದ ನಾಯಕರಾಗಿ, ಪ್ಯಾಟ್ ಕಮಿನ್ಸ್ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಭಾರತಕ್ಕೂ ಕೆಲವು ಮರೆಯಲಾಗದ ನೋವಿನ ಸೋಲುಗಳನ್ನು ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ತಮ್ಮ ಸುದೀರ್ಘ ಕ್ರಿಕೆಟ್ ಪಯಣದಲ್ಲಿ ತಾವೆದುರಿಸಿದ ಭಾರತದ ಅತ್ಯಂತ ಕಠಿಣ ಬ್ಯಾಟರ್ ಯಾರೆಂದು ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ತಾವು ಎದುರಿಸಿದ ಅತ್ಯಂತ ಕಠಿಣ ಭಾರತೀಯ ಬ್ಯಾಟರ್ ಯಾರೆಂದು ಬಹಿರಂಗಪಡಿಸಿದ್ದಾರೆ. ಭಾರತ ತಂಡದಲ್ಲಿ ರೋಹಿತ್ ಹಾಗೂ ವಿರಾಟ್ ಕೊಹ್ಲಿ (Rohit Sharma-Virat Kohli) ಹಲವಾರು ಸಾಧನೆ ಮಾಡಿದ್ದಾರೆ. ದಾಖಲೆಗಳ ಸರಮಾಲೆಯನ್ನೆ ಹೊಂದಿದ್ದಾರೆ. ಆದರೆ ಕಮಿನ್ಸ್ ತಮಗೆ ಅತ್ಯಂತ ಸವಾಲು ಎಸೆದ ಭಾರತೀಯ ಬ್ಯಾಟರ್ ಚೇತೇಶ್ವರ್ ಪೂಜಾರ (Cheteshwar Pujara) ಎಂದು ತಿಳಿಸಿದ್ದಾರೆ. ಪೂಜಾರ ತಮ್ಮ ವಿಕೆಟ್ ಬಿಟ್ಟುಕೊಡದೇ ಎದುರಾಳಿ ತಂಡದ ಬೌಲರ್ಗಳಿಗೆ ನಿರಾಶೆ ನೀಡುತ್ತಾರೆ ಮತ್ತು ಒಂದೂ ರನ್ ಗಳಿಸದೆ 100 ಎಸೆತಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕಮಿನ್ಸ್ ಉಲ್ಲೇಖಿಸಿದ್ದಾರೆ.
ಆಸ್ಟ್ರೇಲಿಯಾದ ನಾಯಕರಾಗಿ, ಪ್ಯಾಟ್ ಕಮಿನ್ಸ್ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಭಾರತಕ್ಕೂ ಕೆಲವು ಮರೆಯಲಾಗದ ನೋವಿನ ಸೋಲುಗಳನ್ನು ನೀಡಿದ್ದಾರೆ. ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಎರಡರಲ್ಲೂ ಭಾರತವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಬೌಲರ್ ಆಗಿ, ಕಮಿನ್ಸ್ ದಿಗ್ಗಜ ಬ್ಯಾಟರ್‌ಗಳನ್ನು ಎದುರಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಂತಹ ಭಾರತೀಯ ತಾರೆಗಳ ವಿರುದ್ಧ ಅನೇಕ ಪಂದ್ಯಗಳನ್ನು ಆಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ತಾವು ಎದುರಿಸಿದ ಅತ್ಯಂತ ಕಠಿಣ ಬ್ಯಾಟರ್ ಯಾರು ಎಂದು ಕೇಳಿದಾಗ, ಕಮಿನ್ಸ್ ರೋಹಿತ್ ಅಥವಾ ಕೊಹ್ಲಿ ಬದಲಿಗೆ ಪೂಜಾರರನ್ನ ಆಯ್ಕೆ ಮಾಡಿಕೊಂಡರು. “ನಾನು ಎದುರಿಸಿದ ಅತ್ಯಂತ ಕಠಿಣ ಭಾರತೀಯ ಬ್ಯಾಟರ್ ಚೇತೇಶ್ವರ್ ಪೂಜಾರ. ಅವರನ್ನು ಔಟ್ ಮಾಡುವುದು ಅತ್ಯಂತ ಕಷ್ಟಕರ. ಒಂದು ರೀತಿಯಲ್ಲಿ, ಅವರಿಗೆ ಬೌಲಿಂಗ್ ಮಾಡುವುದು ಸಂಪೂರ್ಣ ನರಕಯಾತನೆಯಂತೆ ಭಾಸವಾಗುತ್ತದೆ. ಅಗತ್ಯವಿದ್ದರೆ, ಅವರು ಒಂದೂ ರನ್ ಗಳಿಸದೆ 100 ಎಸೆತಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ತಮ್ಮ ವಿಕೆಟ್ ಪಡೆಯಲು ಸಣ್ಣ ಅವಕಾಶವನ್ನೂ ನೀಡದೆ ಅವರು ನಿಮ್ಮನ್ನು ಹತಾಶೆಗೊಳಿಸುತ್ತಾರೆ.” ಎಂದು ತಿಳಿಸಿದ್ದಾರೆ.
ಮುಂದುವರಿಸಿ ” ಪೂಜಾರ ಅವರೊಂದಿಗೆ, ಅಲಸ್ಟೇರ್ ಕುಕ್ (ಇಂಗ್ಲೆಂಡ್), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್), ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ) ಮತ್ತು ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) ನಾನು ಎದುರಿಸಿದ ಅತ್ಯಂತ ಕಠಿಣ ಬ್ಯಾಟರ್‌ಗಳು ” ಎಂದು ಕಮಿನ್ಸ್ ಹೇಳಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ತಾವು ಎದುರಿಸಿದವರಲ್ಲಿ ಪಾಕಿಸ್ತಾನದ ಸ್ಪಿನ್ನರ್ ಸಯೀದ್ ಅಜ್ಮಲ್ ಅವರನ್ನು ಅತ್ಯಂತ ವಿಶಿಷ್ಟ ಬೌಲರ್ ಎಂದು ಅವರು ಬಣ್ಣಿಸಿದ್ದಾರೆ. “ಪಾಕಿಸ್ತಾನದ ವಿಷಯಕ್ಕೆ ಬಂದರೆ ಸಯೀದ್ ಅಜ್ಮಲ್, ವಿಶೇಷ ಬೌಲರ್, ಒಂದು ಪಂದ್ಯದಲ್ಲಿ, ನಾನು ಓವರ್‌ನ ಅಂತಿಮ ಎಸೆತಕ್ಕೆ ಬ್ಯಾಟಿಂಗ್ ಮಾಡಲು ಬಂದಿದ್ದೆ. ಅಜ್ಮಲ್ ಒಂದು ಎಸೆತವನ್ನು ಹಾಕಿದರು, ಅಷ್ಟೇ—ಏನಾಯಿತು ಎಂಬುದೇ ನನಗೆ ತಿಳಿಯಲಿಲ್ಲ. ನಾನು ಕ್ಲೀನ್ ಬೌಲ್ಡ್ ಆಗಿದ್ದೆ. ನನ್ನ ಜೀವನದಲ್ಲಿ ಅಂತಹ ಬೌಲಿಂಗ್ ಅನ್ನು ನಾನು ಎಂದಿಗೂ ನೋಡಿರಲಿಲ್ಲ,” ಎಂದು ಕಮಿನ್ಸ್ ನೆನಪಿಸಿಕೊಂಡರು.














