Last Updated:
Padma Awards: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ರ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಿಬು ಸೊರೆನ್ಗೆ ಮರಣೋತ್ತರ ಪದ್ಮಭೂಷಣ, ಅಲ್ಕಾ ಯಾಗ್ನಿಕ್, ಮಮ್ಮುಟ್ಟಿ, ವಿಜಯ್ ಅಮೃತರಾಜ್ಗೆ ಪದ್ಮಭೂಷಣ, ರೋಹಿತ್ ಶರ್ಮಾಗೆ ಪದ್ಮಶ್ರೀ. 65 ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ.
ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳ (Padma Award) ಪ್ರದಾನ ಸಮಾರಂಭವು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದಿದ್ದು, ಮಾಜಿ ಕೇಂದ್ರ ಸಚಿವ ಶಿಬು ಸೊರೆನ್ಗೆ (Shibu Soren) ಪದ್ಮಭೂಷಣ (Padma Bhushan), ರೋಹಿತ್ ಶರ್ಮಾ (Rohit Sharma) ಹಾಗೂ ಮಾಧವನ್ಗೆ ಪದ್ಮಶ್ರೀ (Padma Shri) ಸೇರಿದಂತೆ, 65 ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಲಯಾಳಂ ಪತ್ರಕರ್ತ ಪಿ. ನಾರಾಯಣನ್ ಮತ್ತು ಸಾರ್ವಜನಿಕ ವ್ಯವಹಾರ ಹಾಗೂ ಕಾನೂನು ಕ್ಷೇತ್ರದಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಸ್ಥಾಪಕ ಹಾಗೂ ಮಾಜಿ ಕೇಂದ್ರ ಸಚಿವ ಶಿಬು ಸೊರೇನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಅವರ ಪರವಾಗಿ ಪತ್ನಿ ರೂಪಿ ಸೊರೇನ್ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನು, ಚಲನಚಿತ್ರ ರಂಗದ ದಿಗ್ಗಜರಾದ ಗಾಯಕಿ ಅಲ್ಕಾ ಯಾಗ್ನಿಕ್ ಹಾಗೂ ಮಲಯಾಳಂ ಚಿತ್ರರಂಗದ ನಟ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ, ಕ್ರೀಡಾ ಲೋಕದ ಸಾಧನೆಗಾಗಿ ಖ್ಯಾತ ಟೆನಿಸ್ ಆಟಗಾರ ವಿಜಯ್ ಅಮೃತರಾಜ್ ಅವರು ಪದ್ಮಭೂಷಣ ಪಡೆದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಚಲನಚಿತ್ರ ನಟ ಆರ್. ಮಾಧವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಡುಗೆಮನೆ ದೊರೆ ಎಂದು ಖ್ಯಾತರಾದ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ನೀಡಲಾಯಿತು. ಇದರೊಂದಿಗೆ ಕಲಾಮಂಡಲಂ ವಿಮಲಾ ಮೆನನ್, ತರುಣ್ ಭಟ್ಟಾಚಾರ್ಯ, ಜ್ಯೋತಿಶ್ ದೇಬನಾಥ್, ಬ್ರಿಜ್ ಲಾಲ್ ಭಟ್, ತಿರುವಾರೂರ್ ಭಕ್ತವತ್ಸಲಂ, ಕೃಷ್ಣಮೂರ್ತಿ ಬಾಲಸುಬ್ರಹ್ಮಣ್ಯಂ, RAV ಮಣಿ, ರಾಮರೆಡ್ಡಿ ಮಾಮಿಡಿ, ಜೋಗೇಶ್ ದೆಯುರಿ, ಶಶಿ ಶೇಖರ್ ವೆಂಪತಿ ಮತ್ತು ಪಶ್ಚಿಮ ಬಂಗಾಳದ ಪ್ರೊಫೆಸರ್ ಮಹೇಂದ್ರ ನಾಥ್ ರಾಯ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.
ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅಸಾಧಾರಣ ಸಾಮಾಜಿಕ ಕೊಡುಗೆಗಾಗಿ ಕೆ.ಎಲ್.ಇ. ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇದರೊಂದಿಗೆ ಪ್ರಸಾರ ಭಾರತಿಯ ಮಾಜಿ ಸಿಇಒ ಶಶಿ ಶೇಖರ್ ವೆಂಪತಿ, ರಂಗ ಕಲಾವಿದ ನೂರುದ್ದೀನ್ ಅಹ್ಮದ್, ಕರ್ಬಿ ಜಾನಪದ ಗಾಯಕಿ ಪೋಖಿಲ ಲೆಕ್ಟೇಪಿ ಸೇರಿದಂತೆ ಹಲವು ತಳಮಟ್ಟದ ಸಾಧಕರಿಗೆ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಬಾರಿಯ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಜಾಗತಿಕ ಮಟ್ಟದ ಸಾಧಕರು ಸ್ಥಾನ ಪಡೆದಿರುವುದು ವಿಶೇಷವಾಗಿತ್ತು. ಅಮೆರಿಕದ ಖ್ಯಾತ ವೈದ್ಯ ಡಾ. ದತ್ತಾತ್ರೇಯುಡು ನೋರಿ ಅವರಿಗೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ ನೀಡಲಾಯಿತು. ಅಮೆರಿಕದ ಪ್ರೊಫೆಸರ್ ಪ್ರತೀಕ್ ಶರ್ಮಾ ಅವರಿಗೆ ಪದ್ಮಶ್ರೀ ಒಲಿದಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಷ್ಯಾದ ಲ್ಯುಡ್ಮಿಲಾ ಖೋಖ್ಲೋವಾ ಅವರಿಗೆ ಪದ್ಮಶ್ರೀ ಹಾಗೂ ಜಾರ್ಜಿಯಾದ ವ್ಲಾಡಿಮಿರ್ ಮೆಸ್ಟ್ವಿರಿಶ್ವಿಲಿ ಅವರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
New Delhi,Delhi













