Last Updated:
ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ, ನದಿ ಪಾತ್ರದ ಸುತ್ತಮುತ್ತಲಲ್ಲಿದ್ದ ಹತ್ತಾರು ಹಳ್ಳಿಗಳು ಜಲಾವೃತಗೊಂಡಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ಪ್ರಮುಖ ಸಂಪರ್ಕ ರಸ್ತೆಗಳು ಕಡಿದುಹೋಗಿದ್ದು, ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ದುರಂತ ಸಂಭವಿಸಿದಾಗಿನಿಂದ ನೂರಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಠ್ಮಂಡು: ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ (Flash Floods) ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ ಪ್ರಮುಖ ಉಪನದಿಯಾದ ಲ್ಹೆಂಡೆ ಖೋಲಾ (Lhende Khola) ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಅಣೆಕಟ್ಟು ನೀರಿನ ಒತ್ತಡಕ್ಕೆ ತಡೆಯಲಾರದೆ ಒಮ್ಮೆಲೇ ಒಡೆದಿದೆ. ಇದರಿಂದಾಗಿ ಸಂಗ್ರಹವಾಗಿದ್ದ ಲಕ್ಷಾಂತರ ಲೀಟರ್ ನೀರು ಮತ್ತು ಕೆಸರು ಒಟ್ಟಿಗೆ ಅತ್ಯಂತ ವೇಗವಾಗಿ ಕೆಳಭಾಗಕ್ಕೆ ನುಗ್ಗಿ ಜಲಪ್ರಳಯವನ್ನು ಸೃಷ್ಟಿಸಿದೆ. ಪ್ರವಾಹ ಪೀಡಿತ ದುರಂತ ವಲಯಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನೇಪಾಳ ಸೇನೆಯು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಸದ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯು ಬರೋಬ್ಬರಿ 15 ಹೆಲಿಕಾಪ್ಟರ್ಗಳನ್ನು ಕಣಕ್ಕಿಳಿಸಿದೆ ಎಂದು ನೇಪಾಳ ಸೇನೆಯ ಬ್ರಿಗೇಡಿಯರ್ ಜನರಲ್ ರಾಜಾ ರಾಮ್ ಬಸ್ನೆಟ್ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.














