Last Updated:
PM Modi: NEET ಮರುಪರೀಕ್ಷೆಯ ಕಾರಣ ವಿಐಪಿ ಕಲ್ಚರ್ಗೆ ಗುಡ್ಬೈ ಹೇಳಿದ ನಮೋ! ಮಕ್ಕಳಿಗೆ ದಾರಿ ಬಿಡಲು ಏರ್ಪೋರ್ಟ್ನಲ್ಲಿ 45 ನಿಮಿಷ ಕಾದ ಪ್ರಧಾನಿ ಮೋದಿ
ನವದೆಹಲಿ: ರಾಷ್ಟ್ರದ ಪ್ರಧಾನ ಮಂತ್ರಿಗಳ (Prime Minister) ವಿವಿಐಪಿ ಬೆಂಗಾವಲು ಪಡೆ (VVIP Convoy) ರಸ್ತೆಗಿಳಿದರೆ ಸಾಕು, ಭದ್ರತಾ ಕಾರಣಗಳಿಗಾಗಿ ಇಡೀ ರಸ್ತೆಯ ಸಂಚಾರವನ್ನೇ ಸಂಪೂರ್ಣ ಸ್ಥಗಿತಗೊಳಿಸುವುದು ಸಾಮಾನ್ಯ ನಿಯಮ. ಆದರೆ, ಜೂನ್ 21, 2026ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭದ್ರತಾ ನಿಯಮಗಳಿಗಿಂತ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಹಿತವೇ ಮುಖ್ಯ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ಸಾಬೀತುಪಡಿಸಿದ್ದಾರೆ. ಹೌದು, ದೇಶಾದ್ಯಂತ ನಡೆದ ನೀಟ್-ಯುಜಿ (NEET-UG 2026) ಮರು ಪರೀಕ್ಷೆಯ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳಿಗೆ ಯಾವುದೇ ಸಂಚಾರ ದಟ್ಟಣೆಯ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರಧಾನಿಯವರು ದೆಹಲಿ ವಿಮಾನ ನಿಲ್ದಾಣದಲ್ಲೇ (Delhi Airport) 45 ನಿಮಿಷಗಳ ಕಾಲ ಕಾಯ್ದು ಹಲವು ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 1:15 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಿಯಮಗಳ ಪ್ರಕಾರ ವಿಮಾನ ನಿಲ್ದಾಣದಿಂದ ಅವರು ನೇರವಾಗಿ ತಮ್ಮ ಅಧಿಕೃತ ನಿವಾಸಕ್ಕೆ ತೆರಳಬೇಕಿತ್ತು. ಆದರೆ, ಇದೇ ದಿನ ಮಧ್ಯಾಹ್ನ ಸರಿಯಾಗಿ 2 ಗಂಟೆಗೆ ದೇಶಾದ್ಯಂತ ನೀಟ್ ಯುಜಿ ಮರುಪರೀಕ್ಷೆಗಳು ಆರಂಭವಾಗಲಿದ್ದವು. ಈ ಸಮಯದಲ್ಲಿ ದೆಹಲಿಯ ಅನೇಕ ಭಾಗಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಧಾವಿಸುತ್ತಿದ್ದರು.
ಕಳೆದ ತಿಂಗಳು ನಡೆದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆದ ಕಾರಣ, ಅದನ್ನ ರದ್ದು ಮಾಡಿದ ಕೇಂದ್ರ ಸರ್ಕಾರ, ಇಂದು ಭಾರತದಲ್ಲಿ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳಲ್ಲಿ 14 ಕೇಂದ್ರಗಳಲ್ಲಿ ನೀಟ್-ಯುಜಿ ಮರು ಪರೀಕ್ಷೆಯನ್ನು ದೇಶಾದ್ಯಂತ ಬಿಗಿ ಭದ್ರತೆಯಲ್ಲಿ ನಡೆಸಿದೆ. ಇದರೊಂದಿಗೆ, ಸುಮಾರು 2.2 ಮಿಲಿಯನ್ಗಿಂತಲೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎನ್ಟಿಎ ನೀಟ್-ಯುಜಿಗಾಗಿ ವ್ಯಾಪಕವಾದ ಭದ್ರತಾ ಜಾಲವನ್ನು ಸ್ಥಾಪಿಸಿದೆ.
New Delhi,Delhi













