Last Updated:
ಭಾರತದ ಶೂಟರ್ ನೀರೂ ಧಂಡಾ ಮಂಗಳವಾರ ದಾಖಲೆ ಪ್ರದರ್ಶನದೊಂದಿಗೆ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆ ಬರೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ವೈಯಕ್ತಿಕ ಚಿನ್ನದ ಪದಕದ ಕಾಯುವಿಕೆ ಕೊನೆಗೊಂಡಿದೆ. ಭಾರತದ ಶೂಟರ್ ನೀರೂ ಧಂಡಾ ಮಂಗಳವಾರ ದಾಖಲೆ ಪ್ರದರ್ಶನದೊಂದಿಗೆ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ವಿಭಾಗದಲ್ಲಿ ಹೊಸ ಏಷ್ಯನ್ ದಾಖಲೆ ಬರೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ನೀರೂ ಧಂಡಾ ಅವರು ಫೈನಲ್ನಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದರು. 26 ವರ್ಷದ ಹರಿಯಾಣದ ಈ ಶೂಟರ್, ಈ ಹಿಂದೆ ಇದ್ದ 24 ಅಂಕಗಳ ಏಷ್ಯನ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಭದ್ರಪಡಿಸಿಕೊಂಡರು. ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ನ ಮಹಿಳೆಯರ ಟ್ರ್ಯಾಪ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ನೀರೂ ಪಾತ್ರರಾಗಿದ್ದಾರೆ.
ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಯಾವುದೇ ಮಹಿಳಾ ಶೂಟರ್ ಈ ಹಿಂದೆ ಟ್ರ್ಯಾಪ್ ಅಥವಾ ಸ್ಕೀಟ್ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದಿರಲಿಲ್ಲ. ನೀರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಭಾರತಕ್ಕೆ ಈ ಹಿಂದೆ ಟ್ರ್ಯಾಪ್ ಶೂಟಿಂಗ್ನಲ್ಲಿ ಬಂದಿದ್ದ ವೈಯಕ್ತಿಕ ಚಿನ್ನದ ಪದಕಗಳು ಪುರುಷರ ವಿಭಾಗದಲ್ಲಿ ಮಾತ್ರ ಬಂದಿದ್ದವು. 1978ರಲ್ಲಿ ರಣಧೀರ್ ಸಿಂಗ್ (ವೈಯಕ್ತಿಕ ಟ್ರ್ಯಾಪ್) ಮತ್ತು 2010ರಲ್ಲಿ ರಂಜನ್ ಸೋಧಿ (ಡಬಲ್ ಟ್ರ್ಯಾಪ್) ಚಿನ್ನ ಗೆದ್ದಿದ್ದರು.
ಇದೇ ವರ್ಷ ಜುಲೈನಲ್ಲಿ ಇಟಲಿಯ ಲೊನಾಟೊದಲ್ಲಿ ನಡೆದ ಶೂಟಿಂಗ್ ವಿಶ್ವಕಪ್ನಲ್ಲಿ ನೀರೂ ಧಂಡಾ ಚಿನ್ನ ಗೆದ್ದಿದ್ದರು. ಆ ಮೂಲಕ ಟ್ರ್ಯಾಪ್ ವಿಭಾಗದಲ್ಲಿ ವಿಶ್ವಕಪ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು. ಅಲ್ಲದೆ ಕಜಕಿಸ್ತಾನ್ನ ಅಲ್ಮಾಟಿಯಲ್ಲಿ ನಡೆದ ವಿಶ್ವಕಪ್ನಲ್ಲಿ ಮಿಶ್ರ ಟ್ರ್ಯಾಪ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
ಮಂಗಳವಾರ ನಡೆದ ಎಂಟು ಶೂಟರ್ಗಳ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಅರ್ಹತಾ ಸುತ್ತಿನಲ್ಲಿ ನೀರೂ ಧಂಡಾ ಅವರು ಕತಾರ್ನ ರೇ ಬಾಸಿಲ್ ಅವರೊಂದಿಗೆ ಜಂಟಿಯಾಗಿ 118 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದ್ದರು. ಇದು ಏಷ್ಯನ್ ಗೇಮ್ಸ್ನ ಹೊಸ ಅರ್ಹತಾ ಸುತ್ತಿನ ದಾಖಲೆಯಾಗಿದೆ.
ವೈಯಕ್ತಿಕ ಚಿನ್ನದ ಪದಕ ಗೆಲ್ಲುವ ಮುನ್ನ ನೀರೂ ಧಂಡಾ ಅವರು ಮಹಿಳೆಯರ ಟ್ರ್ಯಾಪ್ ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನೀರೂ, ಆಶಿಮಾ ಅಹ್ಲಾವತ್ ಮತ್ತು ಮನೀಶಾ ಕೀರ್ ಅವರನ್ನೊಳಗೊಂಡ ಭಾರತ ತಂಡ 328 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯಿತು. ಈ ವಿಭಾಗದಲ್ಲಿ ಚೀನಾ ತಂಡ (346 ಅಂಕ) ಚಿನ್ನದ ಪದಕ ಗೆದ್ದುಕೊಂಡಿತು. ತಂಡದ ಇತರ ಆಟಗಾರ್ತಿಯರಾದ ಆಶಿಮಾ (16ನೇ ಸ್ಥಾನ) ಮತ್ತು ಮನೀಶಾ (23ನೇ ಸ್ಥಾನ) ವೈಯಕ್ತಿಕ ಫೈನಲ್ ತಲುಪಲು ವಿಫಲರಾಗಿದ್ದರು.
2022ರ ಐಎಸ್ಎಸ್ಎಫ್ (ISSF) ವಿಶ್ವ ಚಾಂಪಿಯನ್ಶಿಪ್ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನೀರೂ ಧಂಡಾ, 2025ರ ಏಷ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದರು. ಈಗ 2026ರ ಏಷ್ಯನ್ ಗೇಮ್ಸ್ನಲ್ಲೂ ಚಿನ್ನ ಗೆದ್ದು ದೇಶದ ಹೆಮ್ಮೆಯ ಶೂಟರ್ ಆಗಿ ಹೊರಹೊಮ್ಮಿದ್ದಾರೆ.














