Last Updated:
Narendra Modi Temple: ಪ್ರಧಾನಿ ನರೇಂದ್ರ ಮೋದಿಗೆ ದೇವಾಲಯವೇ? ಹೌದು, ಬಿಹಾರದ ರಾಜ್ಯ ತೃತೀಯ ಲಿಂಗಿ ಕಲ್ಯಾಣ ಮಂಡಳಿಯು ಮೋದಿ ಮಂದಿರ ನಿರ್ಮಿಸಲು ಬಯಸುತ್ತಿದೆ. ಈಗಾಗಲೇ ಗಮನ ಸೆಳೆದಿರುವ ಈ ಕ್ರಮದಲ್ಲಿ, ಪ್ರಧಾನ ಮಂತ್ರಿಗೆ ದೇವಾಲಯವನ್ನು ಅರ್ಪಿಸುವ ಪ್ರಸ್ತಾಪವನ್ನು ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.
ಬಿಹಾರ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET question paper leak) ಪ್ರಕರಣದಲ್ಲಿ ದೇಶಾದ್ಯಂತ ತಿರುಗಿ ಬಿದ್ದಿರುವ ಪ್ರತಿಭಟನಾಕಾರರು, ಪ್ರಧಾನಿ ಮೋದಿಯವರನ್ನೂ (Prime Minister Narendra Modi) ವೈಯಕ್ತಿಕ ಟಾರ್ಗೆಟ್ ಮಾಡಿ, ಟೀಕಿಸಿದ್ದರು. ಮತ್ತೊಂದೆಡೆ ಮಂಗಳಮುಖಿಯರೂ (Mangalamukhi) ನೀಟ್ ಹೋರಾಟಕ್ಕೆ ಬೆಂಬಲಿಸಿದ್ದ ವಿಡಿಯೋ, ಫೋಟೋ ಇಟ್ಟುಕೊಂಡು, ಲಿಂಗತ್ವ ಅಲ್ಪಸಂಖ್ಯಾತರೂ (Transgenders) ಮೋದಿಯವರ ವಿರುದ್ಧ ಇದ್ದಾರೆ ಎನ್ನುವಂತೆ ಬಿಂಬಿಸಲಾಗಿತ್ತು. ಇದೀಗ ಅದೇ ಮಂಗಳಮುಖಿಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವಸ್ಥಾನ (Modi Temple) ಕಟ್ಟಿ, ಪೂಜಿಸಲು ಮುಂದಾಗಿದ್ದಾರೆ!
ಪ್ರಧಾನಿ ನರೇಂದ್ರ ಮೋದಿಗೆ ದೇವಾಲಯವೇ? ಹೌದು, ಬಿಹಾರದ ರಾಜ್ಯ ತೃತೀಯ ಲಿಂಗಿ ಕಲ್ಯಾಣ ಮಂಡಳಿಯು ಮೋದಿ ಮಂದಿರ ನಿರ್ಮಿಸಲು ಬಯಸುತ್ತಿದೆ. ಈಗಾಗಲೇ ಗಮನ ಸೆಳೆದಿರುವ ಈ ಕ್ರಮದಲ್ಲಿ, ಪ್ರಧಾನ ಮಂತ್ರಿಗೆ ದೇವಾಲಯವನ್ನು ಅರ್ಪಿಸುವ ಪ್ರಸ್ತಾಪವನ್ನು ಮಂಡಳಿಯು ಸರ್ವಾನುಮತದಿಂದ ಅಂಗೀಕರಿಸಿದೆ.
ಪ್ರಧಾನಿ ಮೋದಿಯವರು ತೃತೀಯ ಲಿಂಗಿ ಸಮುದಾಯದವರಿಗೆ “ಗೌರವ ಮತ್ತು ಹಕ್ಕುಗಳನ್ನು” ನೀಡುವ ಮೂಲಕ ಅವರ ಜೀವನವನ್ನು ಪರಿವರ್ತಿಸಿದ್ದಾರೆ ಎಂದು ತೃತೀಯ ಲಿಂಗಿ ಕಲ್ಯಾಣ ಮಂಡಳಿ ಅಭಿಪ್ರಾಯಪಟ್ಟಿದೆ. ಬಿಹಾರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆದ ಮಂಡಳಿಯ ಮೊದಲ ಸಭೆಯಲ್ಲಿ ಮಂಡಳಿಯ ಸದಸ್ಯ ರಂಜನ್ ಸಿಂಗ್ ಅವರು ಈ ಪ್ರಸ್ತಾವನೆಯನ್ನು ಮಂಡಿಸಿದರು.
ಬಿಹಾರದಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸ್ವಂತ ದೇವಾಲಯವಿಲ್ಲದ ಕಾರಣ, ನರೇಂದ್ರ ಮೋದಿ ಅವರಿಗೆ ದೇವಾಲಯ ನಿರ್ಮಿಸಲು ನಾನು ಪ್ರಸ್ತಾಪಿಸಿದ್ದೆ. ಏಕೆಂದರೆ ಅವರು ನಮಗೆ ಗೌರವ ಮತ್ತು ಹಕ್ಕುಗಳನ್ನು ನೀಡಿದ್ದಾರೆ. ಈ ಪ್ರಸ್ತಾಪಕ್ಕೆ ಎಲ್ಲಾ ಸದಸ್ಯರ ಬೆಂಬಲ ಸಿಕ್ಕಿತು ಮತ್ತು ಮಂಡಳಿಯು ಅದನ್ನು ಅನುಮೋದಿಸಿತು” ಎಂದು ರಂಜನ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾಗಿ ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.
ರಂಜನ್ ಸಿಂಗ್ ಅವರ ಪ್ರಕಾರ, ರಾಜ್ಯದಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸಾಂಸ್ಥಿಕ ಪ್ರಾತಿನಿಧ್ಯವನ್ನು ಒದಗಿಸುವ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣಾ ಕಾಯ್ದೆ 2019 ಜಾರಿಗೆ ಬಂದ ನಂತರ ಬಿಹಾರ ರಾಜ್ಯ ಟ್ರಾನ್ಸ್ಜೆಂಡರ್ ಕಲ್ಯಾಣ ಮಂಡಳಿಯ ಮೊದಲ ಸಭೆ ಇದಾಗಿದೆ. ಮಂಡಳಿಯು ಪ್ರಸ್ತಾವನೆಯನ್ನು ಅನುಮೋದಿಸಿದ್ದರೂ, ಪ್ರಸ್ತಾವಿತ ದೇವಾಲಯದ ಸ್ಥಳ, ಹಣಕಾಸು, ಕಾಲಮಿತಿ ಮತ್ತು ನಿರ್ಮಾಣದ ಕುರಿತು ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ. ಮುಂಬರುವ ತಿಂಗಳುಗಳಲ್ಲಿ ಈ ಪ್ರಸ್ತಾವನೆಯನ್ನು ಮತ್ತಷ್ಟು ಆಡಳಿತಾತ್ಮಕ ಪರಿಗಣನೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಪ್ರಧಾನಿ ಹುದ್ದೆಯಲ್ಲಿರುವವರಿಗೆ ದೇವಾಲಯ ನಿರ್ಮಾಣ ಪ್ರಸ್ತಾವನೆ ಸಲ್ಲಿಕೆಯಾಗುತ್ತಿರುವುದು ಇದೇ ಮೊದಲಲ್ಲ. 2015 ರ ಆರಂಭದಲ್ಲಿ, ಪ್ರಧಾನಿ ಮೋದಿ ಅವರ ಅನುಯಾಯಿಗಳು ಗುಜರಾತ್ನ ರಾಜ್ಕೋಟ್ನ ಹೊರವಲಯದಲ್ಲಿರುವ ಕೊಥಾರಿಯಾ ಗ್ರಾಮದಲ್ಲಿ ಅವರಿಗಾಗಿ ದೇವಾಲಯ ನಿರ್ಮಿಸಿದ್ದರು.
ಆದರೆ ಗುಜರಾತ್ನಲ್ಲಿ ತಮ್ಮ ದೇವಾಲಯ ನಿರ್ಮಿಸೋದಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಒಪ್ಪಿರಲಿಲ್ಲ. ದೇವಾಲಯಗಳನ್ನು ರಾಜಕಾರಣಿಗಳಿಗೆ ಅಲ್ಲ, ದೇವರುಗಳಿಗೆ ಅರ್ಪಿಸಬೇಕು ಎಂದು ಹೇಳಿದ್ದ ಪ್ರಧಾನಿ ಮೋದಿ, ಈ ಕ್ರಮವನ್ನು ಸಾರ್ವಜನಿಕವಾಗಿ ನಿರಾಕರಿಸಿದ್ದರು. ಇದರಿಂದಾಗಿ ಮೋದಿ ದೇವಾಲಯಗಲ್ಲಿದ್ದ ಮೋದಿ ವಿಗ್ರಹವನ್ನು ತೆಗೆದುಹಾಕಲಾಗಿತ್ತು ಎಂದು ವರದಿಯಾಗಿದೆ.














