Last Updated:
Nandini Bosmia: ಲವ್ ಜಿಹಾದ್ಗೆ AAP ನಾಯಕಿ ಬಲಿ? ಮನೆಯಲ್ಲಿ ಬೇಡ ಅಂದ್ರೂ ಆತನೊಂದಿಗೆ ಲವ್! ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ್ರಾ AAP ಯುವ ನಾಯಕಿ ನಂದಿನಿ ಬೋಸ್ನಿಯಾ; ಪ್ರೇಮ ಬಲೆಗೆ ಸಿಲುಕಿ ಆತ್ಮಹತ್ಯೆ?
ರಾಜ್ಕೋಟ್ (ಗುಜುರಾತ್): ಗುಜರಾತ್ನ (Gujarat) ರಾಜ್ಕೋಟ್ನಿಂದ (Rajkot) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ಯುವ ನಾಯಕಿ 23 ವರ್ಷದ ನಂದಿನಿ ಬೋಸ್ಮಿಯಾ (Nandini Bosmia) ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಕೋಟ್ನ ಬಾಡಿಗೆ ಫ್ಲಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಂದಿನಿ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರು ಲವ್ ಜಿಹಾದ್ (Love Jihad) ಎಂದು ಆರೋಪಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ರಾಜ್ಕೋಟ್ನ ಗೊಂಡಲ್ ಚೌಕಡಿ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ಜೂನ್ 24ರ ರಾತ್ರಿ 23 ವರ್ಷದ ಆಮ್ ಆದ್ಮಿ ಪಕ್ಷದ ಯುವ ನಾಯಕಿ ನಂದಿನಿ ಬೋಸ್ಮಿಯಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂಲತಃ ಜೆಟ್ಪುರದವರಾದ ನಂದಿನಿ ಕಾಲೇಜು ಮುಗಿಸಿ ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಧುಮುಕಿದ್ದರು. ಜೆಟ್ಪುರ ನವಗಢ್ ಪುರಸಭೆ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ನಂದಿನಿ ಬೋಸ್ಮಿಯಾ ಅವರ ಕುಟುಂಬವು ಇದನ್ನು ಲವ್ ಜಿಹಾದ್ ಮತ್ತು ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. ವಿವಾಹಿತ ವ್ಯಕ್ತಿ ಅಸ್ಲಂ ಹುಸೇನ್ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ ನಂದಿನಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತರ ಸಹೋದರಿ ಮತ್ತು ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಮರಣೋತ್ತರ ವರದಿಗಾಗಿ ಕಾಯಲಾಗುತ್ತಿದೆ.
ಏತನ್ಮಧ್ಯೆ, ಅಸ್ಲಾಂ ವಿರುದ್ಧ ಆರೋಪಗಳನ್ನ ನಂದಿನಿ ಕುಟುಂಬ ಮಾಡಿದೆ. ಅದರಂತೆ, ನಂದಿನಿ ಸಹೋದರಿ ರೂಪಾಲಾ ಬೋಸ್ಮಿಯಾ ಪ್ರಕಾರ, ಅಸ್ಲಂ ಅಕ್ರಮ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಜೊತೆಗೆ, ಆತ ನಂದನಿಯೊಂದಿಗೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ, ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಕ್ಷುಲ್ಲಕ ಕಾರಣಕ್ಕೂ, ಹಲ್ಲೆ ಮಾಡುತ್ತಿದ್ದ. ಅದರಲ್ಲೂ, ಜುನಾಗಢದಲ್ಲಿ ಇದ್ದಾಗಲೇ ಅಸ್ಲಂ ಕುಟುಂಬದವರು ನಂದನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಇದರೊಂದಿಗೆ, ನಂದಿನಿಯದ್ದು ಕೊಲೆ ಎಂದಿರುವ ಆಕೆಯ ಸಹೋದರಿ, “ನಂದಿನಿಯನ್ನ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ನೇತು ಹಾಕಿದ್ದಾನೆ” ಎಂದು ದೂರಿದೆ. ಹಾಗಾಗಿ, ಈ ಘಟನೆಯನ್ನು ನೇರವಾಗಿ ಲವ್ ಜಿಹಾದ್ ಎಂದು ಕರೆದಿರುವ ನಂದಿನಿ ಕುಟುಂಬ, “ಹಿಂದೂ ಯುವತಿಯನ್ನು ಆಮಿಷವೊಡ್ಡಿ ಶೋಷಿಸಿ ಕೊನೆಗೆ ಕೊಲೆ ಮಾಡಲಾಗಿದೆ” ಎಂದು ಆರೋಪಿಸಿದೆ.
ಇನ್ನು, ಈಗಾಗಲೇ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಧಿವಿಜ್ಞಾನ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಉಸಿರುಗಟ್ಟಿ ಸಾವೋ ಅಥವಾ ಕೊಲೆ ಮಾಡಿದ ನಂತರ ನೇಣು ಹಾಕಲಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿ ಅಸ್ಲಂ ಹುಸೇನ್ ವಿರುದ್ಧ ಕುಟುಂಬ ನೀಡಿದ ದೂರಿನ ಆಧಾರದಲ್ಲಿ ಎಲ್ಲಾ ಆಯಾಮಗಳಲ್ಲಿ ವಿಚಾರಣೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.













