Last Updated:
ಬಾಲಿವುಡ್ ನಟ ನಾನಾ ಪಾಟೇಕರ್ ಅವರು ಪ್ರಹಾರ ಸಿನಿಮಾಕ್ಕಾಗಿ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ ಕಮಾಂಡೋ ತರಬೇತಿ ಪಡೆದಿದ್ದರು. ಅವರ ಸರಳತೆ ಮತ್ತು ರೈತಪರ ಕಾಳಜಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ಬೆಳಗಾವಿ (Belagavi) ಎಂದರೆ ಕೇವಲ ಸಾಂಸ್ಕೃತಿಕ ನಗರಿಯಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜರ ಸಾಹಸಗಳಿಗೆ ಸಾಕ್ಷಿಯಾದ ಭೂಮಿ. ಅದರಲ್ಲೂ ಬಾಲಿವುಡ್‌ನ ದಿಗ್ಗಜ ನಟ ನಾನಾ ಪಾಟೇಕರ್ (Nana Patekar) ಅವರಿಗೂ ಬೆಳಗಾವಿಗೂ (Belagavi) ಇರುವ ನಂಟು ಅಷ್ಟಿಷ್ಟಲ್ಲ. ತಮ್ಮ ವೃತ್ತಿಜೀವನದ ಮೈಲಿಗುಲ್ಲಾದ ‘ಪ್ರಹಾರ’ (Prahaar) ಚಲನಚಿತ್ರಕ್ಕಾಗಿ ಅವರು ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ನಲ್ಲಿ (Maratha Light Infantry) ಕಮಾಂಡೋ ತರಬೇತಿ ಪಡೆದ ರೋಚಕ ಹಿನ್ನೆಲೆ ಇಲ್ಲಿದೆ.
ಕೇವಲ ಬೆಳ್ಳಿತೆರೆಯ ನಟನಾಗಿ ಮಾತ್ರವಲ್ಲದೆ, ನಾನಾ ಪಾಟೇಕರ್ ನಿಜ ಜೀವನದಲ್ಲೂ ಒಬ್ಬ ರಿಯಲ್ ಹೀರೋ. ತಮ್ಮ ‘ನಾಮ್’ ಫೌಂಡೇಶನ್ ಮೂಲಕ ಸಂಕಷ್ಟದಲ್ಲಿರುವ ರೈತರು ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಅವರು ನಿರಂತರವಾಗಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಾ ಬಂದಿದ್ದಾರೆ. ಸಮಾಜಮುಖಿ ಚಿಂತನೆ ಮತ್ತು ಬಡವರ ಮೇಲಿನ ಅವರ ಕಾಳಜಿ ಹಲವರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಕೆಎಲ್‍ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೇರಿದಂತೆ ಅನೇಕ ಗಣ್ಯರು ಸ್ಮರಿಸಿಕೊಂಡಿದ್ದಾರೆ.
ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಹಲವು ಬಾರಿ ಬೆಳಗಾವಿಗೆ ಭೇಟಿ ನೀಡಿರುವ ನಾನಾ ಪಾಟೇಕರ್, ಭಾರತೀಯ ಚಿತ್ರರಂಗದ ಅಭಿನಯ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಆಯಾಮ ನೀಡಿದ್ದಾರೆ. ಕಮಾಂಡೊ ತರಬೇತಿಯ ಕಠಿಣ ಹಾದಿಯಿಂದ ಹಿಡಿದು ರೈತರ ಕಣ್ಣೀರು ಒರೆಸುವವರೆಗೆ ಅವರ ಬದುಕು ಎಲ್ಲರಿಗೂ ಮಾದರಿಯಾಗಿದೆ. ಬೆಳಗಾವಿಯ ಮಣ್ಣಿನಲ್ಲಿ ಅವರು ಬಿಟ್ಟುಹೋದ ಆ ದಿನಗಳ ಸವಿನೆನಪುಗಳು ಇಂದಿಗೂ ಇಲ್ಲಿನ ಜನರ ಮನಸ್ಸಿನಲ್ಲಿ ಹಚ್ಚಹಸಿರಾಗಿವೆ.













