Last Updated:
ಬೆಂಗಳೂರು ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ, ಇಳಯರಾಜ ಆಶ್ರಯದ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಸ್ಥಾಪನೆ, ಸಂಗೀತ ಆರೋಗ್ಯ ಸಂಶೋಧನೆಗೆ ಒತ್ತು.
ಬೆಂಗಳೂರು: ಐಟಿ ಸಿಟಿ, ಗಾರ್ಡನ್ ಸಿಟಿ (Bengaluru) ಎಂದು ವಿಶ್ವ ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು ಅದೆಷ್ಟೋ ಮೊದಲ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಸದ್ಯ ಭಾರತದಲ್ಲಿಯೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿರುವ ಸಂಗೀತ ಆರೋಗ್ಯ ಕೇಂದ್ರವೂ (Music-Brain Health Centre ) ಬೆಂಗಳೂರಿನಲ್ಲಿಯೇ ಆರಂಭವಾಗುತ್ತಿರುವುದು ಹೆಮ್ಮೆಗೆ ಕಾರಣವಾಗಿದೆ. ಹೌದು, ನಿಮ್ಹಾನ್ಸ್ ಮತ್ತು ಮರ್ಕ್ಯುರಿ ಫೌಂಡೇಶನ್ ಸಹಯೋಗದಲ್ಲಿ ಸೆಂಟರ್ ಫಾರ್ ಮ್ಯೂಸಿಕ್ ಬ್ರೈನ್ ಮೈಂಡ್ ಆ್ಯಂಡ್ ಹೆಲ್ತ್ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ. ಪದ್ಮವಿಭೂಷಣ ಡಾ. ಇಳಯರಾಜ (Isaignani Ilaiyaraaja) ಅವರ ಆಶ್ರಯದಲ್ಲಿ ಈ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು, ನರವಿಜ್ಞಾನ, ಮಾನಸಿಕ ಆರೋಗ್ಯ, ಸಂಗೀತ ಮತ್ತು ಮಾನವ ಯೋಗಕ್ಷೇಮವನ್ನು ಒಟ್ಟುಗೂಡಿಸುವ ಕೇಂದ್ರವಾಗಲಿದೆ.
ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಇಳಯರಾಜ ಅವರ ಸಂಗೀತ, ಮನುಷ್ಯನ ಅನುಭವಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದು, ಸಂಗೀತ ಆರೋಗ್ಯ ಕೇಂದ್ರದ ಸ್ಥಾಪನೆಯೂ ಈ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿಯನ್ನು ನೀಡಲಿದೆ. ಅಲ್ಲದೇ, ಸಂಗೀತ, ಮೆದುಳು, ಮನಸ್ಸು ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಸಂಗೀತವೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಆಗಿದ್ದು, ಕಲೆ ಮತ್ತು ನರವಿಜ್ಞಾನದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.
ಆರೋಗ್ಯ ಕ್ಷೇತ್ರದಲ್ಲಿ ಈಗಾಗಲೇ ಮ್ಯೂಸಿಕ್ ಥೆರಪಿ ಬಳಕೆ ಆಗುತ್ತಿದ್ದು, ಹಲವು ಪ್ರಕರಣಗಳಲ್ಲಿ ರೋಗಿಯೂ ವೈದ್ಯರ ಚಿಕಿತ್ಸೆಗೆ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ಸಂಗೀತದ ಮೂಲಕ ರೋಗಿಯನ್ನು ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಈ ಹಿಂದೆ ಕೋವಿಡ್ ಸಮಯದಲ್ಲಿ ಗಾಯಕ ಎಸ್ಪಿಬಿ ಅವರಿಗೆ ಚಿಕಿತ್ಸೆ ನೀಡಲು ಈ ಸಂಗೀತ ಥೆರಪಿಯನ್ನು ಬಳಕೆ ಮಾಡಲಾಗಿತ್ತು. ಅಲ್ಲದೇ, ಕೊಲೊನೋಸ್ಕೋಪಿ, ಅಂಜಿಯೋಗ್ರಫಿ, ಮಂಡಿ ಹಾಗೂ ಮೆದುಳು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕೆಲವು ಕಡೆ ಮ್ಯೂಸಿಕ್ ಥೆರಪಿ ನೀಡುವ ವಿಡಿಯೋಗಳು ಕಾಣಬಹುದಾಗಿದೆ. ಮ್ಯೂಸಿಕ್ ಥೆರಪಿಯ ಬಳಿಕ ಹಲವರು, ದೈಹಿಕ ಚಲನೆ, ಮಾನಸಿಕ ಸ್ಥಿತಿ, ಅರಿವಿನ ಸಾಮರ್ಥ್ಯ, ಭಾವನಾತ್ಮಕ ಪ್ರತಿಕ್ರಿಯೆ ಉತ್ತಮವಾಗಿ ಸ್ಪಂದಿಸಲು ನೆರವಾದ ಸಾವಿರಾರು ನಿದರ್ಶನಗಳು ಲಭ್ಯವಿದೆ.
ಇನ್ನು, ಇಳಯರಾಜ ಅವರು ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಈ ವೇಳೆ ‘ನಾನು ಕರ್ನಾಟಕಕ್ಕೆ ಅತಿಥಿ ಅಲ್ಲ, ನಾನು ಇಲ್ಲಿಯವನೇ. ಕೊಲ್ಲೂರು ಮೂಕಾಂಬಿಕೆ ನನ್ನ ಅವ್ವ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ 82ನೇ ವಸಂತಕ್ಕೆ ಕಾಲಿಟ್ಟ ಇಳಯರಾಜ ಅವರು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 8 ಸಾವಿರಕ್ಕೂ ಅಧಿಕ ಹಾಡುಗಳನ್ನು ಸೃಷ್ಟಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಅವರು, ಸಂಗೀತ ಆರೋಗ್ಯ ಕೇಂದ್ರಕ್ಕೆ ಸಾಥ್ ನೀಡಿದ್ದಾರೆ.













