Last Updated:
Mother Promise Review: ಡಾಲಿ ಧನಂಜಯ್ ಅವರ ಮದರ್ ಪ್ರಾಮಿಸ್ ಸಿನಿಮಾ ಹೇಗಿದೆ? ಏನಿದರ ಸ್ಟೋರಿ? ಎಮೋಷನಲ್ ಆಗಿದ್ಯಾ? ಕಾಮಿಡಿಯಾ?
‘ಚಾಲೆಂಜ್ ಮಾಡ್ತಾ ಇಲ್ಲ ಧನರಾಜ್, ಪ್ರಾಮಿಸ್ ಮಾಡ್ತಾ ಇದ್ದೀನಿ’ ಇದು ಸಾಂಗ್ಲಿಯಾನ ಡೈಲಾಗ್. ಆದರೆ ಪ್ರಾಮಿಸ್ ಸಿನಿಮಾ ‘ಪ್ರಾಮಿಸ್, ನಿಮ್ಮನ್ನ ನಕ್ಕೇ ನಗಿಸ್ತೀವಿ ಅಂತ ಪ್ರಾಮಿಸ್ ಮಾಡ್ತಾ ಪ್ರಾಮಿಸಿಂಗ್ ಆದ ಸಿನಿಮಾ ಹೊತ್ತು ಬಂದಿದ್ದಾರೆ ಧನಂಜಯ್ (Dali Dhananjay) ಅಂಡ್ ಕೋ.
ಈ ಸಿನಿಮಾ ಮಾದರಿ ಕನ್ನಡಕ್ಕೆ ಹೊಸದು ಅಂತ ಹೇಳಿದರೆ ತಪ್ಪಾಗಲ್ಲ. ತೆಲುಗಿನ ಡಿಜೆ ಟಿಲ್ಲು, ಜಾತಿ ರತ್ನಾಲು, ಮಲಯಾಳಂನ ಆವೇಶಂ, ತಲ್ಲುಮಾಲಾ, ವಾಳ ತರದ ಸಿನಿಮಾ ಕನ್ನಡದಲ್ಲಿ ಬಂದಿದೆ.
ಇಂತದ್ದೊಂದು ಸ್ಕ್ರಿಪ್ಟ್ ನ ಸಿನಿಮಾ ಮಾಡಬಹುದು ಅಂತ ಜಡ್ಜ್ ಮಾಡಿ ಹಣ ಹಾಕಿದ ಧನಂಜಯ್ ಅವ್ರಿಗೆ ಸಲಾಮ್ ಹೇಳಲೇಬೇಕು. ಹಾಗೆ ತಮ್ಮ ಮೊದಲ ನಿರ್ದೇಶನದಲ್ಲೇ ಇಂತದ್ದೊಂದು ಸ್ಕ್ರಿಪ್ಟ್ ನ ನಾ ಸಿನಿಮಾ ಮಾಡ್ತೀನಿ ಅಂತ ಧೈರ್ಯ ಮಾಡಿದ ಪೂರ್ಣ ಚಂದ್ರ ಮೈಸೂರು ಅವರಿಗೂ ಶಹಬಾಸ್ ಹೇಳಲೇಬೇಕು.
ಇಲ್ಲಿ ಕಥೆ ಅಂತ ಬಂದರೆ ಅದನ್ನ ಪದಗಳಲ್ಲಿ ಹೇಳೋದು ಕಷ್ಟ. ಒಬ್ಬ ಬೈಕ್ ರೈಡರ್. ಅವನು ಸ್ಪ್ಲೆಂಡರ್ ಬೈಕ್ನಲ್ಲೇ ಇರೋ ಬರೋ ಕಾಂಪಿಟೇಷನ್ಗಳನ್ನೆಲ್ಲಾ ಗೆದ್ದಿರುತ್ತಾನೆ. ಆ ಬೈಕ್ ಒಂದು ದಿನ ಕಳೆದೋಗುತ್ತೆ. ಅದನ್ನು ಹುಡುಕೋದೇನಾ ಇಲ್ಲಿರುವ ಕಥೆ ?
ಒಬ್ಬ ಗ್ಯಾಂಬ್ಲರ್ ಬೆಟ್ಟಿಂಗ್ ದಂಧೆಯಲ್ಲಿ 20 ಲಕ್ಷ ಕಳೆದುಕೊಳ್ಳುತ್ತಾನೆ. ಅದನ್ನು ಗಳಿಸೋಕೆ ಅವನು ಎಷ್ಟೆಲ್ಲಾ ಪರಿಪಾಟಲು ಪಡುತ್ತಾನೆ ಅನ್ನೋದನ್ನೇ ಕಥೆ ಅನ್ಬೇಕಾ? ಅಥವಾ ಒಬ್ಬ ದೊನ್ನೆ ಬಿರಿಯಾನಿ ಅನ್ನೋ ಡಾನ್. ಅವ್ನು ಯಾವ್ದೋ ಒಂದು ಡಿಲೆವರಿಯನ್ನು ಮೂವರು ಹುಡುಗರಿಗೆ ಒಪ್ಪಿಸುತ್ತಾನೆ. ಅವರು ಡಿಲೆವರಿ ಮಾಡಿದ್ರಾ ಇಲ್ವಾ ಅನ್ನೋದೆ ಕಥೆ ಅಂತ ಹೇಳೋದಾ? ಇಲ್ಲ, ಇಲ್ಲಿ ಕಥೆಗಿಂತ ಸ್ಕ್ರೀನ್ ಪ್ಲೇ ತುಂಬಾ ಮುಖ್ಯವಾಗಿದೆ.

ಪಾತ್ರಗಳನ್ನ ಹೆಣೆದಿರೋ ರೀತಿ, ಅವುಗಳನ್ನ ಮುಂದುವರಿಸಿಕೊಂಡು ಹೋಗಿರುವ ರೀತಿಯಿಂದ ನಗು ತರಿಸುತ್ತೆ. ಇಲ್ಲಿ ನೀವು ಲಾಜಿಕ್ ಎಲ್ಲಾ ನೋಡಲೇಬಾರದು. ಓನ್ಲಿ ಮ್ಯಾಜಿಕ್, ನಗುವಿನ ಮ್ಯಾಜಿಕ್! ಹೌದು, ಇಡೀ ಸಿನಿಮಾ ನಿಮ್ಮನ್ನ ಹೊಟ್ಟೆ ಉಣ್ಣಾಗಿಸುವಷ್ಟು ನಗಿಸುತ್ತದೆ. ಅದಂತೂ ಗ್ಯಾರಂಟಿ. ನೀವು ಲಾಜಿಕ್ನ ತಲೆಯಲ್ಲಿ ಇಟ್ಟುಕೊಂಡು ಸಿನಿಮಾ ಅಂದರೆ ಹಿಂಗೇ ಇರಬೇಕು ಅನ್ನೋ ಸಿದ್ದ ಸೂತ್ರಗಳನ್ನ ಇಟ್ಟುಕೊಂಡು ಹೋದರೆ ನಿರಾಸೆಯಾಗಬಹುದು.
ಇಲ್ಲಿ ಧನಂಜಯ್ ಇದ್ದಾರೆ. ಆದರೆ ಅವರು ಹೀರೋ ಅಲ್ಲ. ಅವರಿಗೆ ಸಿಕ್ಕಿರೋದೆ 25 ರಿಂದ 30 ನಿಮಿಷ ಅಷ್ಟೇ. ದೊನ್ನೆ ಬಿರಿಯಾನಿ ಪಾತ್ರದಲ್ಲಿ ಮಾಡಿರೋ ಮಹದೇವ ಪ್ರಸಾದ್, ಪೂರ್ಣಚಂದ್ರ, ಶ್ರೀವತ್ಸ, ಗುರುದತ್, ಯಶವಂತ ಹೀಗೆ ಪ್ರತಿ ಪಾತ್ರಗಳು ಸಹ ಇಲ್ಲಿ ಹೀರೋಗಳೇ. ಎಲ್ಲಕ್ಕಿಂತ ಹೆಚ್ಚಾಗಿ ಸ್ಕ್ರಿಪ್ಟ್ ಇದರ ಹೀರೋ ಅಂದ್ರೂ ತಪ್ಪಾಗಲಾರದು.
ವರದಿ: ಆನಂದ್ ಸಾಲುಂಡಿ, ಫಿಲ್ಮ್ ಬ್ಯೂರೋ ಹೆಡ್, ನ್ಯೂಸ್18 ಕನ್ನಡ, ಬೆಂಗಳೂರು
Bangalore [Bangalore],Bangalore,Karnataka
Jul 10, 2026 11:44 AM IST














