Last Updated:
ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ.
ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ (Karnataka Rains) ಇನ್ನೆರಡು ದಿನದಲ್ಲಿ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 4ರ ಸಂಜೆಯಿಂದ ಜೂನ್ 10 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಲಭ್ಯವಾಗಿದೆ. ವಿಶೇಷವಾಗಿ ಜೂನ್ 5 ರಿಂದ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿರಲಿದ್ದು, ಮೀನುಗಾರರು ಮತ್ತು ನದಿ ತೀರದ ನಿವಾಸಿಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ.
ಬೇಸಿಗೆಯ ಧಗಧಗಿಸುವ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಕೊನೆಗೂ ವರುಣದೇವ ಕರುಣೆ ತೋರಿದ್ದಾನೆ. ಭಾರತದ ಪಾಲಿಗೆ ಅತ್ಯಂತ ಪ್ರಮುಖವಾಗಿರುವ ನೈಋತ್ಯ ಮುಂಗಾರು (Southwest Monsoon) ಗುರುವಾರ (ಜೂನ್ 4) ಕೇರಳಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ. ಮುಂದಿನ ನಾಲ್ಕು ತಿಂಗಳುಗಳ ಕಾಲ (ಜೂನ್‌ನಿಂದ ಸೆಪ್ಟೆಂಬರ್ ವರೆಗೆ) ದೇಶಾದ್ಯಂತ ಮಳೆಗಾಲ ಇರಲಿದ್ದು, ಕೇರಳದ ಬೆನ್ನಲ್ಲೇ ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಿಗೂ ಮಾನ್ಸೂನ್ ವ್ಯಾಪಿಸಿದೆ.
ಸಾಮಾನ್ಯವಾಗಿ ಜೂನ್ 1ಕ್ಕೆ ಬರಬೇಕಿದ್ದ ಮುಂಗಾರು, ಈ ಬಾರಿ ಮೇ 26ಕ್ಕೆ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕೊಂಚ ತಡವಾಗಿ, ಜೂನ್ 4ರಂದು ಕೇರಳಕ್ಕೆ ಹಾಗೂ ಲಕ್ಷದ್ವೀಪಕ್ಕೆ ಅಪ್ಪಳಿಸಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಆವರಿಸುತ್ತಿದೆ.
ಮುಂಗಾರು ಆಗಮನದ ಖುಷಿಯ ನಡುವೆಯೇ ಐಎಮ್‌ಡಿ (IMD) ಒಂದು ಬ್ಯಾಡ್ ನ್ಯೂಸ್ ಕೂಡ ಕೊಟ್ಟಿದೆ. ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ಬದಲಿಸಿದೆ. ಸಾಮಾನ್ಯವಾಗಿ ಕಳೆದ 30 ರಿಂದ 50 ವರ್ಷಗಳ ಮಳೆಯ ಸರಾಸರಿಯನ್ನು ಎಲ್‌ಪಿಎ (Long Period Average) ಎನ್ನಲಾಗುತ್ತದೆ. ಈ ಬಾರಿ ದೇಶದಲ್ಲಿ ಕೇವಲ ಶೇಕಡಾ 90 ರಷ್ಟು ಮಾತ್ರ ಮಳೆಯಾಗುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆಯ ನಿಯಮಗಳ ಪ್ರಕಾರ, ಮಳೆಯ ಪ್ರಮಾಣ ಶೇಕಡಾ 90ಕ್ಕಿಂತ ಕಡಿಮೆಯಾದರೆ ಅದನ್ನು ಖೋತಾ (Deficient) ಎಂದು ಕರೆಯಲಾಗುತ್ತದೆ. 1971 ರಿಂದ 2020 ರವರೆಗಿನ ಲೆಕ್ಕಾಚಾರದ ಪ್ರಕಾರ ನಮ್ಮ ದೇಶದ ಸರಾಸರಿ ಮಳೆಯ ಪ್ರಮಾಣ 87CM ಇರಬೇಕು. ಆದರೆ ಈ ಬಾರಿ ಅದಕ್ಕಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರಲ್ಲಿ ಆತಂಕ ಮೂಡಿದೆ.
ಈ ಬಾರಿ ಮಳೆ ಕಡಿಮೆಯಾಗಲು ಪೆಸಿಫಿಕ್ (Pacific) ಮಹಾಸಾಗರದಲ್ಲಿ ಉಂಟಾಗುತ್ತಿರುವ ‘ಎಲ್ ನೀನೊ’ (El Nino) ಪರಿಸ್ಥಿತಿಯೇ ಮುಖ್ಯ ಕಾರಣ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಸದ್ಯಕ್ಕೆ ಹವಾಮಾನದ ಸ್ಥಿತಿ ಸಾಧಾರಣವಾಗಿದ್ದರೂ, ಅದು ನಿಧಾನವಾಗಿ ‘ಎಲ್ ನೀನೊ’ ಕಡೆಗೆ ಬದಲಾಗುತ್ತಿದೆ.
Bangalore [Bangalore],Bangalore,Karnataka













