ಜುಲೈ 20 ರಂದು ದೆಹಲಿಯಲ್ಲಿ ಸಿಜೆಪಿ ನಡೆಸಿದ “ಸಂಸತ್ ಚಲೋ” ಮೆರವಣಿಗೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರು ಮತ್ತು ದೆಹಲಿ ಪೊಲೀಸರ ನಡುವೆ ಘರ್ಷಣೆಗಳು ಮತ್ತು ಹಿಂಸಾಚಾರ ಭುಗಿಲೆದ್ದವು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುಮಾರು 20 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪ್ರಕರಣಗಳಲ್ಲಿ ಹದಿನಾಲ್ಕು ಪ್ರಕರಣಗಳು ಪ್ರತಿಭಟನೆಗಳು ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿವೆ ಮತ್ತು ಒಂದು ಪ್ರಕರಣ ಅನುಮತಿಯಿಲ್ಲದೆ ಡ್ರೋನ್ ಹಾರಾಟಕ್ಕೆ ಸಂಬಂಧಿಸಿದೆ. ಸಿಜೆಪಿ ನಿಯೋಗ ಮತ್ತು ಸರ್ಕಾರ ವಿದ್ಯಾರ್ಥಿಗಳ ನಡುವಿನ ಎಲ್ಲಾ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಒಪ್ಪಂದ ಮಾಡಿಕೊಂಡಿವೆ. ಆದರೆ, ಸೋಮವಾರ, ದೆಹಲಿ ಪೊಲೀಸರು ಈ ವಿಷಯದಲ್ಲಿ ಯಾವುದೇ ಅಧಿಕೃತ ಸೂಚನೆಗಳನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಹೇಳಿದ ನಂತರ ಈ ವಿಷಯ ಹೊಸ ತಿರುವು ಪಡೆದುಕೊಂಡಿದೆ.
ದೆಹಲಿ ಪೊಲೀಸರ ಪ್ರಕಾರ, ಸರ್ಕಾರದ ಆದೇಶದ ನಂತರವೇ ಪ್ರಕರಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಇದರ ನಂತರ, ಲೆಫ್ಟಿನೆಂಟ್ ಗವರ್ನರ್ ಮೂಲಕ ಪ್ರಕರಣಗಳನ್ನ ಹಿಂಪಡೆಯುವಿಕೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ರಾಜ್ಯ ಸರ್ಕಾರವು ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗುತ್ತದೆ. ಏಕೆಂದರೆ ಪೊಲೀಸರು ಹಿಂಸಾಚಾರ ಮತ್ತು ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲಿಸಿದರೆ, ಅದರಲ್ಲಿ ಭಾಗಿಯಾಗಿರುವ ಪಕ್ಷವು ಪೊಲೀಸರಲ್ಲ, ರಾಜ್ಯವಾಗಿರುತ್ತದೆ. ದೆಹಲಿ ಕೇಂದ್ರಾಡಳಿತ ಪ್ರದೇಶ, ಆದ್ದರಿಂದ, ಕೇಸ್ ಹಿಂಪಡೆಯುವಿಕೆಯ ಆದೇಶವು ಕೇಂದ್ರ ಸರ್ಕಾರದಿಂದ ಬರಬೇಕಿರುತ್ತದೆ.
ಕೇಂದ್ರ ಸರ್ಕಾರವು ನೇರವಾಗಿ ಪ್ರಕರಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಕಾನೂನಿನಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಫಾಲೋ ಮಾಡಬೇಕಿರುತ್ತದೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 360ರ ಅಡಿಯಲ್ಲಿ, ಸರ್ಕಾರವು ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯುವುದು ಅಗತ್ಯವೆಂದು ಭಾವಿಸಿದರೆ, ಅದು ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು, ಆದರೆ ಇದು ನ್ಯಾಯಾಲಯದ ಅನುಮತಿಯೊಂದಿಗೆ ಮಾತ್ರ ಸಾಧ್ಯ. ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆ ಇದೆ.
1. ಸಂಬಂಧಿತ ರಾಜ್ಯ ಸರ್ಕಾರವು ಮೊದಲು ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸುತ್ತದೆ. ದೆಹಲಿಯ ಪ್ರಕರಣದಲ್ಲಿ, ಈ ಅಧಿಕಾರವು ಕೇಂದ್ರ ಸರ್ಕಾರದ ಮೇಲಿರುತ್ತದೆ. ಈ ಸಂದರ್ಭದಲ್ಲಿ, ಸರ್ಕಾರವು ಪ್ರಕರಣವನ್ನು ಹಿಂಪಡೆಯಲು ದೆಹಲಿ ಪೊಲೀಸರಿಗೆ ಶಿಫಾರಸು ಮಾಡುತ್ತದೆ.
2. ದೆಹಲಿ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ಮೊದಲು ನ್ಯಾಯಾಲಯದಲ್ಲಿ ಯಾವ ಪ್ರಕರಣಗಳನ್ನು ಹಿಂಪಡೆಯಬಹುದು ಎಂಬುದನ್ನು ಪರಿಶೀಲಿಸಿ ನಿರ್ಧರಿಸುತ್ತದೆ. ಆದರೆ, ಅವರು ನೇರವಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ರಿಂದ ಅನುಮೋದನೆಯನ್ನು ಪಡೆಯಬೇಕು.
3. ಲೆಫ್ಟಿನೆಂಟ್ ಗವರ್ನರ್ ಅನುಮೋದನೆಯ ನಂತರ, ಪಬ್ಲಿಕ್ ಪ್ರಾಸಿಕ್ಯೂಟರ್ ಕೇಸ್ ಹಿಂಪಡೆಯುವಿಕೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದಲ್ಲದೆ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕರಣಗಳನ್ನ ಹಿಂಪಡೆಯುತ್ತಿರುವುದು ನ್ಯಾಯದ ಹಿತದೃಷ್ಟಿಯಿಂದ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು.
ಆರೋಪಗಳನ್ನು ಹೊರಿಸುವ ಮೊದಲು ನ್ಯಾಯಾಲಯವು ಕೇಸ್ಗಳನ್ನ ಹಿಂಪಡೆಯಲು ಅನುಮತಿ ನೀಡಿದರೆ, ಆರೋಪಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆರೋಪಗಳನ್ನು ಈಗಾಗಲೇ ಹೊರಿಸಿದ್ದರೆ, ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ನಿಯಮಿತ ಪ್ರತಿಭಟನೆಗಳು, ತಡೆಯಾಜ್ಞೆಗಳು ಅಥವಾ ಕಾನೂನು ಮತ್ತು ಸುವ್ಯವಸ್ಥೆಯನ್ನು ಒಳಗೊಂಡ ಪ್ರಕರಣಗಳಲ್ಲಿ ಹಿಂಪಡೆಯುವಿಕೆ ಸುಲಭವಾಗಿರುತ್ತದೆ. ಪ್ರಕರಣವು ಗಂಭೀರ ಹಿಂಸಾಚಾರ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಒಳಗೊಂಡಿದ್ದರೆ, ನ್ಯಾಯಾಲಯವು ದೀರ್ಘವಾಗಿ ವಿಚಾರಣೆ ನಡೆಸಬಹುದು. ಹಲವಾರು ಪ್ರಕರಣಗಳಲ್ಲಿ, ನ್ಯಾಯಾಲಯವು ಪ್ರಕರಣಗಳನ್ನ ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರದ ವಿನಂತಿಯನ್ನು ತಿರಸ್ಕರಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 360 ರ ಪ್ರಕಾರ, ನ್ಯಾಯಾಲಯವು ಅಗತ್ಯವೆಂದು ಭಾವಿಸಿದರೆ, ಪ್ರಕರಣಕ್ಕೆ ಸಂಬಂಧಿಸಿದ ಸಂತ್ರಸ್ತರ ಹೇಳಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳುತ್ತದೆ.
ವಿದ್ಯಾರ್ಥಿಗಳ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ದೆಹಲಿ ಪೊಲೀಸರ ಹೇಳಿಕೆಯ ನಂತರ, ಸಿಜೆಪಿ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಒಪ್ಪಂದವನ್ನು ಪಾಲಿಸುತ್ತಿಲ್ಲ ಎಂದು ವಕ್ತಾರ ಅಶುತೋಷ್ ರಾಂಕಾ ಇಂದು ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ, ಆದರೆ ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಎಫ್ಐಆರ್ಗಳನ್ನು ತಕ್ಷಣ ಹಿಂಪಡೆಯಬೇಕೆಂದು ರಾಂಕಾ ಒತ್ತಾಯಿಸಿದ್ದಾರೆ. ಇಲ್ಲವಾದರೆ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.













