Last Updated:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ಅವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿದೆ, ಮನಮೋಹನ್ ಸಿಂಗ್ ಅವರು ಮೃತಪಟ್ಟ ಒಂದು ವರ್ಷದ ಬಳಿಕ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ (Coal Block Allocation Case) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Former Prime Minister Dr. Manmohan Singh) ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ವಜಾಗೊಳಿಸಿದೆ. 2015 ರಲ್ಲಿ ವಿಶೇಷ ಸಿಬಿಐ (CBI) ನ್ಯಾಯಾಲಯವು ಮನಮೋಹನ್ ಸಿಂಗ್ ಮತ್ತು ಇತರ ಐದು ಜನರಿಗೆ ವಿಚಾರಣೆಗಾಗಿ ನೀಡಲಾಗಿದ್ದ ಸಮನ್ಸ್ ಅನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
‘ನಾವು ಎಲ್ಲಾ ಪಕ್ಷಗಳ ಹಿರಿಯ ವಕೀಲರ ಸಹಾಯದಿಂದ ಎರಡೂ ಮುಕ್ತಾಯ ವರದಿಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದೇವೆ. ತನಿಖಾ ಸಂಸ್ಥೆಯ ವರದಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ತತ್ವಗಳ ಆಧಾರದ ಮೇಲೆ, ಸಿಬಿಐ ಮುಕ್ತಾಯ ವರದಿಯನ್ನು ತಿರಸ್ಕರಿಸಲು ಯಾವುದೇ ಬಲವಾದ ಕಾರಣವಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ನ್ಯಾಯಾಲಯವು ಡಾ. ಮನಮೋಹನ್ ಸಿಂಗ್ ಅವರ ಮೇಲ್ಮನವಿಯನ್ನು ಅಂಗೀಕರಿಸಿತು ಮತ್ತು ಮಾರ್ಚ್ 11, 2015 ರ ಆದೇಶ ಮತ್ತು ಅವರ ವಿರುದ್ಧ ಹೊರಡಿಸಲಾದ ಸಮನ್ಸ್ ಅನ್ನು ರದ್ದುಗೊಳಿಸಿತು’ ಎಂದು ಸಿಜೆಐ ಹೇಳಿದರು.
ಮನಮೋಹನ್ ಸಿಂಗ್ ಅವರು ಡಿಸೆಂಬರ್ 2024ರಲ್ಲಿ ನಿಧನರಾದರು. ಆದ್ರೆ, ಅವರ ಮರಣದ ಹೊರತಾಗಿಯೂ ಈ ಪ್ರಕರಣದ ಕಾನೂನುಬದ್ಧತೆಯನ್ನು ನಿರ್ಧರಿಸಲು ಬಯಸಿದ ಸುಪ್ರೀಂ ಕೋರ್ಟ್ ಈ ಐತಿಹಾಸಿಕ ತೀರ್ಪನ್ನು ನೀಡಿದೆ. ಈ ತೀರ್ಪಿನ ಮೂಲಕ ಮನಮೋಹನ್ ಸಿಂಗ್ ಅವರ ವೈಯಕ್ತಿಕ ಪ್ರಾಮಾಣಿಕತೆ ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಂಗ್ರೆಸ್ ಸಂತೋಷ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯಗಳು ತನಿಖಾ ಸಂಸ್ಥೆಗಳ ನಿರ್ಧಾರಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಬಹುದು, ಆದರೆ ಅದಕ್ಕೆ ಸರಿಯಾದ ಕಾನೂನು ಕಾರಣಗಳಿರಬೇಕು ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಈ ತೀರ್ಪಿನೊಂದಿಗೆ, ಯುಪಿಎ ಆಡಳಿತದ ಅವಧಿಯಲ್ಲಿ ದೇಶದ ರಾಜಕೀಯವನ್ನು ಬೆಚ್ಚಿಬೀಳಿಸಿದ ಕಲ್ಲಿದ್ದಲು ಹಗರಣ ವಿವಾದದ ಅಧ್ಯಾಯವೊಂದು ಕೊನೆಗೊಂಡಿದೆ.














