Last Updated:
Madhya Pradesh: ಸರ್ಕಾರಗಳು ಬಡವರಿಗಾಗಿ, ಅಂಗವಿಕಲರಿಗಾಗಿ ಹತ್ತಾರು ಯೋಜನೆಗಳನ್ನು ಘೋಷಿಸುತ್ತವೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಅರ್ಹರಿಗೆ ಈ ಸೌಲಭ್ಯಗಳು ತಲುಪುತ್ತಿಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಆ ಕುರಿತ ವರದಿ ಇಲ್ಲಿದೆ.
ಪನ್ನಾ (ಮಧ್ಯಪ್ರದೇಶ): ಇಂದಿನ ಸರ್ಕಾರಿ ವ್ಯವಸ್ಥೆ (Government System) ಎಷ್ಟು ಕೆಟ್ಟೋಗಿದೆ ಅಂದ್ರೆ, ಓರ್ವ ವಿಕಲಚೇತನ ಮಹಿಳೆಗೆ (Differently-abled woman) ಸಿಗಬೇಕಾದ ಸರ್ಕಾರಿ ಸೌಲಭ್ಯಗಳಿಗಾಗಿ (Government Facility), ಆಕೆ ಸತತ 10 ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ, ಯಾವ ಕಚೇರಿ ಅಲೆದರೂ, ಆಕೆಯ ಕೂಗು ಯಾರಿಗೂ ಕೇಳಲೇ ಇಲ್ಲ! ಕೊನೆಗೆ ಆಕೆ ತನ್ನ ಪತಿಯ ಬೆನ್ನೇರಿ ಬಂದಾಗ ಏನಾಯಿತು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
ಪನ್ನಾ (Panna) ಜಿಲ್ಲೆಯ ಗುಣೌರ್ ತಾಲೂಕಿನ ಗೌರಾ ಗ್ರಾಮದ ನಿವಾಸಿ ಪುಷ್ಪೇಂದ್ರ ಸಿಂಗ್ ಅವರ ಪತ್ನಿ ನೀಲು ರಾಜಾ ತೀವ್ರ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ನಡೆಯಲು ಅಸಾಧ್ಯವಾದ ಪತ್ನಿಯನ್ನು ಪುಷ್ಪೇಂದ್ರ ಸಿಂಗ್ ಅವರು ತಮ್ಮ ಬೆನ್ನಿನ ಮೇಲೆ ಹೊತ್ತುಕೊಂಡು, ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ (District Collector’s Office) ನಡೆಯುವ ‘ಜನಸುನಾವಣೆ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಲೆಕ್ಟರೇಟ್ ಆವರಣದಲ್ಲಿ ಈ ದೃಶ್ಯವನ್ನು ಕಂಡ ಸಾರ್ವಜನಿಕರು ಹಾಗೂ ಅಧಿಕಾರಿಗಳು ಒಂದು ಕ್ಷಣ ಸ್ತಬ್ಧರಾಗಿದ್ದರು.
ಜಿಲ್ಲಾಧಿಕಾರಿ ಉಷಾ ಪರ್ಮಾರ್ ಅವರ ಮುಂದೆ ಕಣ್ಣೀರು ಹಾಕಿದ ನೀಲು ರಾಜಾ, ತಮಗಾದ ಅನ್ಯಾಯವನ್ನು ಬಿಚ್ಚಿಟ್ಟರು. “ತಮ್ಮ ಕುಟುಂಬವು ಅತ್ಯಂತ ಬಡತನದಲ್ಲಿದ್ದ ಕಾರಣ ‘ಅಂತ್ಯೋದಯ ಅನ್ನ ಯೋಜನೆ’ (AAY) ಅಡಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಪಡಿತರ ಸಿಗುತ್ತಿತ್ತು. ಆದರೆ, ಸ್ಥಳೀಯ ಪಂಚಾಯತ್ ಸಿಬ್ಬಂದಿ ನಮ್ಮ ಗಮನಕ್ಕೆ ತರದೆ ಹೆಸರನ್ನು ತೆಗೆದು ಹಾಕಿತು. ಇದರೊಂದಿಗೆ ನಮ್ಮ ಹೆಸರನ್ನು BPL ಪಟ್ಟಿಗೆ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಹತ್ತು ವರ್ಷಗಳಿಂದ ನಮಗೆ ಪಡಿತರ ಪಡೆಯಲು ಬೇಕಾದ ರೇಷನ್ ಸ್ಲಿಪ್ ನೀಡದೆ ಸತಾಯಿಸಲಾಗಿದೆ. ಇದರಿಂದಾಗಿ ಕಳೆದ ಒಂದು ದಶಕದಿಂದ ಸರ್ಕಾರದ ಯಾವುದೇ ಉಚಿತ ಅಥವಾ ರಿಯಾಯಿತಿ ದರದ ಧಾನ್ಯ ಸಿಕ್ಕಿಲ್ಲ” ಎಂದು ದೂರಿದ್ದಾರೆ.
ಮುಂದುವರೆದು, ಒಂದೆಡೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ, ಇನ್ನೊಂದೆಡೆ ತೀವ್ರ ಆರೋಗ್ಯ ಸಮಸ್ಯೆ ಕುಟುಂಬವನ್ನು ಹೈರಾಣಾಗಿಸಿದೆ. ಅಂಗವಿಕಲ ಮಹಿಳೆ ನೀಲು ರಾಜಾ ಅವರು ಪ್ರಸ್ತುತ ಕಿಡ್ನಿ (ಮೂತ್ರಪಿಂಡ) ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ಪತಿ ಪುಷ್ಪೇಂದ್ರ ಸಿಂಗ್ ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದು, ಪತ್ನಿಯ ವೈದ್ಯಕೀಯ ವೆಚ್ಚ ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರಲಾಗದೆ ಕಂಗೆಟ್ಟಿದ್ದಾರೆ. ಗ್ರಾಮ ಪಂಚಾಯಿತಿಗೆ ನೂರಾರು ಬಾರಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗದಿದ್ದಾಗ, ಕೊನೆಗೆ ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯ ಕೊಡಿಸಬೇಕು ಎಂದು ಕಲೆಕ್ಟರೇಟ್ಗೆ ಬಂದಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಬೆನ್ನಿನ ಮೇಲೆ ಕುಳಿತು ಬಂದ ಅಂಗವಿಕಲ ಮಹಿಳೆಯ ಸ್ಥಿತಿಯನ್ನು ಕಂಡು ಕರಗಿದ ಜಿಲ್ಲಾಧಿಕಾರಿ ಉಷಾ ಪರ್ಮಾರ್ ಅವರು, ತಕ್ಷಣವೇ ಅರ್ಜಿಯನ್ನು ಸ್ವೀಕರಿಸಿ ತನಿಖೆಗೆ ಆದೇಶಿಸಿದ್ದಾರೆ. ಈ ಕುಟುಂಬಕ್ಕೆ ತಕ್ಷಣವೇ ಪಡಿತರ ಚೀಟಿ ಒದಗಿಸಲು ಮತ್ತು ಹತ್ತು ವರ್ಷಗಳಿಂದ ಸೌಲಭ್ಯ ವಂಚಿತರನ್ನಾಗಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.
Panna,Madhya Pradesh













