Last Updated:
ನಿರ್ದಿಷ್ಟ ವಯಸ್ಸಿನೊಳಗೆ ಮದುವೆಯಾಗಬೇಕು ಅಥವಾ ಮಕ್ಕಳನ್ನು ಹೊಂದಬೇಕು ಎಂಬ ಒತ್ತಡಕ್ಕೆ ಒಳಗಾಗಲು ನನಗೆ ಇಷ್ಟವಿರಲಿಲ್ಲ. ಸಮಯದ ಮಿತಿಯ ಕಾರಣದಿಂದ ಜೀವನದ ಮಹತ್ವದ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಲು ಬಯಸಲಿಲ್ಲ ಎಂದು ನಟಿ ಕೃತಿ ಸನೋನ್ ತಿಳಿಸಿದ್ದಾರೆ
ಬಾಲಿವುಡ್‌ನ (Bollywood) ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಕೃತಿ ಸನೋನ್ (Kriti Sanon), ತಮ್ಮ ಅಭಿನಯದ ಮೂಲಕ ಹೆಸರುವಾಸಿಯಾಗಿದ್ದಾರೆ. ಮಿಮಿ (Mimi), ಬರೇಲಿ ಕಿ ಬರ್ಫಿ (Mimi, Bareilly Ki Barfi0 ಮತ್ತು ಲುಕಾ ಚುಪ್ಪಿ (Luka Chuppi) ಯಂತಹ ಯಶಸ್ವಿ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಇದೀಗ ತಮ್ಮ ವೈಯಕ್ತಿಕ ಬದುಕಿನ ಮಹತ್ವದ ನಿರ್ಧಾರವೊಂದನ್ನು ಬಹಿರಂಗಪಡಿಸಿದ್ದಾರೆ. ಮದುವೆ ಮತ್ತು ಮಾತೃತ್ವದ ಕುರಿತ ಸಾಮಾಜಿಕ ಒತ್ತಡದಿಂದ ದೂರವಿರಲು ತಾವು ಕೆಲವು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ (Egg Freezing) ಮಾಡಿಸಿದ್ದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ‘ಹ್ಯೂಮನ್ಸ್ ಆಫ್ ಬಾಂಬೆ’ ಸಂಸ್ಥಾಪಕಿ ಕರಿಷ್ಮಾ ಮೆಹ್ತಾ ಅವರೊಂದಿಗೆ ನಡೆದ ಸಂವಾದದಲ್ಲಿ ಕೃತಿ ಸನೋನ್ ಜೀವನದ ಕುರಿತು ತಮ್ಮ ನಿಲುವನ್ನು ಹಂಚಿಕೊಂಡರು. ಪ್ರತಿಯೊಬ್ಬರಿಗೂ ಒಂದೇ ಜೀವನ ಸಿಗುತ್ತದೆ. ಅದನ್ನು ಹೇಗೆ ಬದುಕಬೇಕು ಎಂಬುದನ್ನು ತಾವೇ ನಿರ್ಧರಿಸಬೇಕು. ಇದು ನಮ್ಮದೇ ಕಥೆಯಾಗಿದ್ದು, ಅದನ್ನು ಮತ್ತಾರೂ ಬರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಿರ್ದಿಷ್ಟ ವಯಸ್ಸಿನೊಳಗೆ ಮದುವೆಯಾಗಬೇಕು ಅಥವಾ ಮಕ್ಕಳನ್ನು ಹೊಂದಬೇಕು ಎಂಬ ಒತ್ತಡಕ್ಕೆ ಒಳಗಾಗಲು ನನಗೆ ಇಷ್ಟವಿರಲಿಲ್ಲ. ಸಮಯದ ಮಿತಿಯ ಕಾರಣದಿಂದ ಜೀವನದ ಮಹತ್ವದ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಲು ಬಯಸಲಿಲ್ಲ. ಅದಕ್ಕಾಗಿಯೇ ಈ ವೈದ್ಯಕೀಯ ಆಯ್ಕೆಯನ್ನು ಬಳಸಿಕೊಂಡೆ ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯ ವೆಚ್ಚ ಎಲ್ಲರಿಗೂ ಭರಿಸಲು ಸಾಧ್ಯವಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಅದೃಷ್ಟವಶಾತ್ ನನಗೆ ಅದನ್ನು ಮಾಡಿಸಿಕೊಳ್ಳುವ ಆರ್ಥಿಕ ಸಾಮರ್ಥ್ಯವಿತ್ತು. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ ಎಂದು ಹೇಳಿದರು.
ಬಾಡಿಗೆ ತಾಯ್ತನದ ಕಥೆಯನ್ನು ಆಧರಿಸಿದ ‘ಮಿಮಿ’ ಚಿತ್ರದ ಚಿತ್ರೀಕರಣಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಾಗಿದ್ದ ಸಮಯದಲ್ಲೇ ಈ ಪ್ರಕ್ರಿಯೆಗೆ ಒಳಗಾದೆ ಎಂದು ನಟಿ ಹೇಳಿದ್ದಾರೆ. ಈ ಚಿಕಿತ್ಸೆ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಉಂಟುಮಾಡುತ್ತದೆ. ಆಗ ನನ್ನ ಬಳಿ ಕೆಲವು ವಾರಗಳ ಕಾಲ ಯಾವುದೇ ಶೂಟಿಂಗ್ ಇರಲಿಲ್ಲ. ಜೊತೆಗೆ ಚಿತ್ರದ ಕಥೆಯೂ ಮಾತೃತ್ವಕ್ಕೆ ಸಂಬಂಧಿಸಿದ್ದರಿಂದ ಈ ಪ್ರಕ್ರಿಯೆಯನ್ನು ಹತ್ತಿರದಿಂದ ಅರ್ಥಮಾಡಿಕೊಳ್ಳುವ ಅವಕಾಶವೂ ಸಿಕ್ಕಿತು ಎಂದು ನಟಿ ತಿಳಿಸಿದ್ದಾರೆ.
ಅಂಡಾಣು ಫ್ರೀಜಿಂಗ್ ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಸವಾಲಿನ ಪ್ರಕ್ರಿಯೆ ಎಂದು ಕೃತಿ ಹೇಳಿದ್ದಾರೆ. ಹಾರ್ಮೋನ್ ಚಿಕಿತ್ಸೆಗಳಿಂದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಮನಸ್ಥಿತಿಯಲ್ಲಿ ಏರುಪೇರುಗಳು ಕಂಡುಬರುತ್ತವೆ. ಕೆಲವೊಮ್ಮೆ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಅನುಭವಗಳಂತೆಯೇ ಅನಿಸುತ್ತದೆ ಎಂದು ನಟಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
Bangalore [Bangalore],Bangalore,Karnataka













