Last Updated:
ಪುಣೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ಬಗ್ಗೆ ಮತ್ತೊಂದಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ. 12ನೇ ತರಗತಿಯಲ್ಲಿ ಫೇಲ್ ಆದ ಸಿಯಾ ಒಂದೇ ಟೈಮ್ನಲ್ಲಿ ಅನೇಕ ಹುಡುಗರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.
ಪುಣೆಯ ಲೋನಾವಾಲಾ ಲೋಹ್‌ಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ (Ketan Agarwal) ಕೊಲೆ ಪ್ರಕರಣದಲ್ಲಿ ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ. ಮೃತ ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ (Chetan Chowdari) ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ವೇಳೆ ಸಿಯಾ ಬಗ್ಗೆ ಒಂದಷ್ಟು ವಿಚಾರಗಳು ಬೆಳಕಿಗೆ ಬಂದಿದ್ದು, ಈ ಸಂಗತಿಗಳು ಎಲ್ಲರನ್ನೂ ಆಘಾತಗೊಳಿಸುತ್ತಿವೆ.
ಸಿಯಾ ಗೋಯಲ್ 12ನೇ ತರಗತಿಯಲ್ಲಿ ಫೇಲ್ ಆಗಿದ್ದಳು. ಮದ್ಯಪಾನ, ಕೆಟ್ಟ ಅಭ್ಯಾಸಗಳಿಗೆ ಒಳಗಾಗಿದ್ದಳು ಮತ್ತು ಒಂದೇ ಸಮಯದಲ್ಲಿ ಹಲವಾರು ಹುಡುಗರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಸಿಯಾ ಗೋಯಲ್ ನಡುವಳಿಕೆ ಆಕೆಯ ಹೆತ್ತವರ ಕೋಪಕ್ಕೆ ಕಾರಣವಾಗಿತ್ತು. 20 ವರ್ಷ ವಯಸ್ಸಿನಲ್ಲೇ ಆಕೆಯನ್ನು ಮದುವೆ ಮಾಡಿ ಕಳಿಸಬೇಕು ಎಂದು ಅವರು ನಿರ್ಧರಿಸಿದ್ದರು. ಕೇತನ್ ಅಗರ್ವಾಲ್ ವಿದ್ಯಾವಂತ ಮತ್ತು ಶ್ರೀಮಂತ ಕುಟುಂಬದವರಾಗಿದ್ದರು. ಆದ್ದರಿಂದ ಸಿಯಾಳ ಪೋಷಕರು ಕೇತನ್ ಜೊತೆಗೆ ಆಕೆಯ ನಿಶ್ಚಿತಾರ್ಥವನ್ನು ಏರ್ಪಡಿಸಿ ಮದುವೆ ಮಾಡಿಸಲು ಮುಂದಾಗಿದ್ದರು. ಸಿಯಾ ಮೇಲೆ ಮದುವೆಗೆ ತೀವ್ರ ಒತ್ತಡ ಹೇರಲಾಗುತ್ತಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದರೆ ಸಿಯಾ ಮತ್ತು ಚೇತನ್ ಚೌಧರಿ ಈಗಾಗಲೇ ತಮ್ಮ ನಡುವಿನ ಸಂಬಂಧವನ್ನು ಬಹಳ ಮುಂದುವರಿಸಿದ್ದರು ಮತ್ತು ಕೇತನ್ ನನ್ನು ಮಗಿಸುವ ಯೋಜನೆ ಹಾಕಿಕೊಂಡಿದ್ದರು ಎಂಬುದು ಬಯಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಸಿಯಾ ಗೋಯಲ್ ಈ ಪಿತೂರಿಯ ಮುಖ್ಯ ಸೂತ್ರಧಾರಿ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ಆಕೆ ತಾನೇ ಇದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ನಿಶ್ಚಿತಾರ್ಥ ಮುರಿದರೆ ಕುಟುಂಬಕ್ಕೆ ಅವಮಾನವಾಗುತ್ತದೆ ಎಂಬ ಭಯದಿಂದಲೇ ಇಬ್ಬರೂ ಕೊಲೆಯನ್ನು ಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 18ರಂದು ಲೋಹ್‌ಗಢ ಕೋಟೆಯಲ್ಲಿ ಈ ದಾರುಣ ಘಟನೆ ನಡೆದಿದೆ. ಮೊದಲು ಇದನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ ವಿವರವಾದ ತನಿಖೆಯಲ್ಲಿ ಇದು ಯೋಜಿತ ಕೊಲೆ ಎಂದು ಬಯಲಾಗಿದೆ.
ಸಿಯಾಳ ತಂದೆ ಪ್ರವೀಣ್ ಗೋಯಲ್ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ನನ್ನ ಮಗಳು ತಪ್ಪು ಮಾಡಿದ್ದರೆ ಅವಳಿಗೆ ಶಿಕ್ಷೆಯಾಗಲೇ ಬೇಕು. ನ್ಯಾಯಕ್ಕೆ ಯಾರೂ ಅಡ್ಡಿಯಾಗಬಾರದು’ ಎಂದು ಹೇಳಿದ್ದಾರೆ. ಭಾವನಾತ್ಮಕವಾಗಿ ಅವರು, ‘ಅವಳು ತಪ್ಪಿತಸ್ಥೆ ಎಂದು ಸಾಬೀತಾದರೆ, ಕೇತನ್ ಕೊಲೆಯಾದ ಅದೇ ಕೋಟೆಯಿಂದ ಅವಳನ್ನು ತಳ್ಳಬೇಕು’ ಎಂದು ಸೂಚಿಸಿದ್ದಾರೆ.
ಸಿಯಾಳ ತಾಯಿ ಪೂಜಾ ಗೋಯಲ್ ಅವರು, ‘ನಮಗೆ ಅವರ ನಡುವೆ ಯಾವುದೇ ಸಮಸ್ಯೆ ತಿಳಿದಿರಲಿಲ್ಲ. ಸಿಯಾ ಮತ್ತು ಕೇತನ್ ನಿಯಮಿತವಾಗಿ ಭೇಟಿಯಾಗುತ್ತಿದ್ದರು, ವೀಡಿಯೋ ಕರೆಗಳ ಮೂಲಕ ಮಾತನಾಡುತ್ತಿದ್ದರು. ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಶಾಪಿಂಗ್‌ಗೆ ಹೋಗುತ್ತಿದ್ದರು’ ಎಂದು ಹೇಳಿದ್ದಾರೆ. ಕುಟುಂಬಕ್ಕೆ ಇಂತಹ ಘಟನೆಯ ಬಗ್ಗೆ ಯಾವುದೇ ಸಂದೇಹವಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ತನಿಖೆ ಮುಂದುವರೆದಿದೆ. ಫೋನ್ ಸಂಭಾಷಣೆಗಳು, ಸಂದೇಶಗಳು ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಪ್ರಕರಣ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರೇಮ, ಕುಟುಂಬ ಒತ್ತಡ, ಸಮಾಜದ ಭಯ ಮತ್ತು ಅಪರಾಧದ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಘಟನೆ ಎತ್ತಿ ತೋರಿಸುತ್ತಿದೆ. ಸಂತ್ರಸ್ತ ಕೇತನ್ ಕುಟುಂಬಕ್ಕೆ ತ್ವರಿತ ನ್ಯಾಯ ಸಿಗಬೇಕು ಎಂಬುದು ಎಲ್ಲರ ಆಗ್ರಹವಾಗಿದೆ. ವಿಧಾನಸಭೆಯಲ್ಲೂ ಈ ಪ್ರಕರಣವನ್ನು ಎತ್ತಿ ಎಸ್‌ಐಟಿ ರಚಿಸುವಂತೆ ಒತ್ತಾಯಿಸಲಾಗಿದೆ. ತನಿಖೆ ಪೂರ್ಣಗೊಂಡು ನ್ಯಾಯಾಲಯದಲ್ಲಿ ಸತ್ಯ ಬಯಲಾಗುವ ನಿರೀಕ್ಷೆ ಎಲ್ಲರಲ್ಲೂ ಇದೆ.
Pune,Maharashtra
Jun 26, 2026 11:23 AM IST













