Last Updated:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ಟೋಬರ್ 12ರಿಂದ 17ರವರೆಗೆ ಒಂದು ವಾರದ ದಸರಾ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಜಾನಪದ ಕಲೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ತೊಗಲು ಗೊಂಬೆಯಾಟ ಹಾಗೂ ಯಕ್ಷಗಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಸಂಭ್ರಮವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ (International Airport) ಕೊಂಡೊಯ್ಯಲಾಗುತ್ತಿದೆ. ಅಕ್ಟೋಬರ್ 12ರಿಂದ 17ರವರೆಗೆ ಒಂದು ವಾರದ ದಸರಾ ಸಾಂಸ್ಕೃತಿಕ ಸಂಭ್ರಮವನ್ನು (Cultural Celebration) ಆಯೋಜಿಸಲಾಗಿದ್ದು, ಪ್ರಯಾಣಿಕರಿಗೆ ಕರ್ನಾಟಕದ ವಿವಿಧ ಜಾನಪದ, ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯ ಕಲಾ ಪ್ರಕಾರಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ 1 ಕರ್ಬ್ಸೈಡ್ ವಲಯ, ಟರ್ಮಿನಲ್ 2 ಫೋರ್ಕೋರ್ಟ್ ವಲಯ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 12ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಮಹಿಳಾ ತಂಡದಿಂದ ಡೊಳ್ಳು ಕುಣಿತ ಮತ್ತು ಪಟ ಕುಣಿತ ನಡೆಯಲಿದೆ. ಅಕ್ಟೋಬರ್ 13ರಂದು ಇದೇ ಅವಧಿಯಲ್ಲಿ ಕಂಸಾಳೆ ಪ್ರದರ್ಶನ ಹಾಗೂ ಗಾರುಡಿ ಗೊಂಬೆ ಪ್ರದರ್ಶನ ಆಯೋಜಿಸಲಾಗಿದೆ. ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ಕಲೆಯ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಪ್ರತಿದಿನ ಸಂಜೆ 6ರಿಂದ ರಾತ್ರಿ 8ರವರೆಗೆ ಟರ್ಮಿನಲ್ 2 ಫೋರ್ಕೋರ್ಟ್ ವಲಯದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 12ರಂದು ಕರ್ನಾಟಕ ಶಾಸ್ತ್ರೀಯ ಗಾಯನ, ಅಕ್ಟೋಬರ್ 13ರಂದು ಗಾಯನ ಕಛೇರಿ ಹಾಗೂ ವಾದ್ಯವೃಂದದ ಕಾರ್ಯಕ್ರಮಗಳು ನಡೆಯಲಿವೆ. ಇದೇ ದಿನ ‘ಒಡೆಯರ್ ವೈಭವ’ ಎಂಬ ವಿಶೇಷ ಕಲಾ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 14ರಂದು ಭರತನಾಟ್ಯ ಪ್ರದರ್ಶನದ ಜೊತೆಗೆ ತೊಗಲು ಗೊಂಬೆಯಾಟ ನಡೆಯಲಿದೆ. ಅಕ್ಟೋಬರ್ 15ರಂದು ಶಾಸ್ತ್ರೀಯ ಪಿಟೀಲು ವಾದನ ಮತ್ತು ಮೃದಂಗಿ ವಾದನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 16ರಂದು ವೀಣೆ ಯುಗಲ ವಾದನ ಸೇರಿದಂತೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ವಿಮಾನ ನಿಲ್ದಾಣದಲ್ಲೇ ಕರ್ನಾಟಕದ ಕಲಾ ವೈಭವ
ವಿಮಾನ ನಿಲ್ದಾಣಕ್ಕೆ ಆಗಮಿಸುವ ಸ್ಥಳೀಯ ಪ್ರಯಾಣಿಕರ ಜೊತೆಗೆ ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೂ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವ ಅವಕಾಶ ಈ ಕಾರ್ಯಕ್ರಮದಿಂದ ಸಿಗಲಿದೆ. ದಸರಾ ಸಂದರ್ಭದಲ್ಲಿ ಮೈಸೂರು ಅರಮನೆ, ಜಂಬೂಸವಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭ್ರಮ ನಡೆಯುತ್ತಿರುವ ನಡುವೆಯೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಒಂದು ವಾರದ ಕಾಲ ದಸರಾ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಲಿದೆ. ಅ.12ರಿಂದ 17ರವರೆಗೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ವಿಮಾನ ಪ್ರಯಾಣದ ಜೊತೆಗೆ ಕರ್ನಾಟಕದ ಕಲೆ-ಸಂಸ್ಕೃತಿಯ ನೇರ ಅನುಭವವೂ ಸಿಗಲಿದೆ.













