Last Updated:
ಸಚಿವ ಸಂಪುಟ ವಿಸ್ತರಣೆ ವಿಳಂಬ: ನೀಟ್ ಪ್ರತಿಭಟನೆ ಕಾರಣ, ಜೂನ್ 25ರ ನಂತರ ಸಭೆ. ಹೈಕಮಾಂಡ್ನಿಂದ ಹೊಸ ಫಾರ್ಮುಲಾ, ಹಿರಿಯರಿಗೆ ಅವಕಾಶ.
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ (Karnataka Chief Minister) ಪ್ರಕ್ರಿಯೆ ಸರಳವಾಗಿ ನಡೆದರೂ ಕೂಡ ಸಂಪುಟ ವಿಸ್ತರಣೆ (Cabinet Expansion) ಮಾತ್ರ ಸುಲಭವಾಗಿ ಆಗ್ತಿಲ್ಲ. ಸಂಪುಟ ವಿಸ್ತರಣೆಗೆ ಸಾಕಷ್ಟು ತೊಡಕುಗಳು ಎದುರಾಗುತ್ತಿದೆ. ಡಿಕೆ ಶಿವಕುಮಾರ್ (CM DK Shivakumar) ಅವರು ಮುಖ್ಯಮಂತ್ರಿಯಾಗಿ ಒಂದೂವರೆ ತಿಂಗಳು ಮುಗಿದರೂ ಕೂಡ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿಲ್ಲ.
ರಾಜ್ಯದಲ್ಲಿ ಅನಾವೃಷ್ಟಿ ಸೃಷ್ಟಿಯಾಗಿದ್ದು, ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಅಧಿಕಾರಿಗಳದ್ದೇ ದರ್ಬಾರ್ ಆಗಿದೆ. ಸರ್ಕಾರ ಕೈಗೊಂಡಿರುವ ಹೊಸ ನಿರ್ಧಾರಗಳನ್ನು ಜಾರಿ ಮಾಡುವುದರ ಸಂಬಂಧ ಕೇವಲ ಹೇಳಿಕೆಗಳು ಕೇಳಿ ಬರುತ್ತಿದೆ, ಆದರೆ ಅವುಗಳನ್ನು ಜಾರಿ ಮಾಡುವ ಕಾರ್ಯ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಎಲ್ಲದರ ನಡುವೆ ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಅನುಮತಿ ಪಡೆದುಕೊಳ್ಳಲು ದೆಹಲಿಗೆ ತೆರಳಿದ್ದರು. ಆದರೆ ಇದು ದೆಹಲಿ ತೆರಳಿದ ನಾಯಕರಿಗೆ ನಿರಾಸೆ ಎದುರಾಗಿದ್ದು, ಸಚಿವ ಸಂಪುಟ ವಿಸ್ತರಣೆ ಸಭೆಗೆ ನೀಟ್ ಪರೀಕ್ಷೆ ಪ್ರತಿಭಟನೆ ತೊಡಕಾಗಿದೆ.
ಈಗಾಗಲೇ ರಾಜ್ಯ ನಾಯಕರಿಗೆ ಹೈಕಮಾಂಡ್ ಸ್ಪಷ್ಟ ಫಾರ್ಮುಲಾವನ್ನು ನೀಡಿದೆ ಎನ್ನಲಾಗಿದ್ದು, ಇದರಂತೆ ನಾಲ್ವರು ಹಿರಿಯರಿಗೆ ಮಾತ್ರ ಅವಕಾಶ ನೀಡಿ. ಉಳಿದಂತೆ ಹೊಸ ಮುಖಗಳಿಗೆ ಜವಾಬ್ದಾರಿಯನ್ನು ನೀಡಲು ಸೂಚನೆ ನೀಡಲಾಗಿದೆ. ಆದರೆ ಇದಕ್ಕೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಆರು ಮಂದಿ ಹಿರಿಯರಿಗೆ ಸಚಿವ ಸ್ಥಾನ ನೀಡುವ ಅವಕಾಶ ನೀಡುವಂತೆ ಮನವಿ ಮಾಡಿದ್ದಾರಂತೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಿಗೆ ರಾಜ್ಯ ನಾಯಕರು ಮನವಿ ಮಾಡಿದ್ದಾರಂತೆ. ಇದರಂತೆ 6 ಮಂದಿ ಹಿರಿಯರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಖರ್ಗೆ ಅವರಿಗೆ ನೀಡಲಾಗಿದೆ ಎನ್ನಲಾಗಿದ್ದು, ಇದರಂತೆ ಇಂದು ಸಿಎಂ ಹಾಗೂ ಮಾಜಿ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಇನ್ನು, ಜೂನ್ 25ರ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಲಿದ್ದಾರಂತೆ.
ಸಂಪುಟ ವಿಸ್ತರಣೆ ತಡವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿಕೆ ಶಿವಕುಮಾರ್ ಅವರು, 12 ಗಂಟೆಗೆ ಸಚಿವ ಸಂಪುಟ ಕುರಿತು ಸಭೆ ನಿಗದಿ ಆಗಿತ್ತು. ಆದರೆ ನೀಟ್ ಪ್ರತಿಭಟನೆ ಹಿನ್ನೆಲೆ ಸಭೆಯನ್ನು ಮುಂದೂಡಲಾಗಿದೆ. ಜುಲೈ 25ರ ಬಳಿಕ ಮತ್ತೆ ಸಭೆ ನಡೆಯಲಿದೆ. ತಾತ್ಕಾಲಿಕವಾಗಿ ಸಭೆ ಮುಂದೂಡಲಾಗಿದೆ. ನಮ್ಮ ಪಕ್ಷದಲ್ಲಿ ಈ ಹಿಂದಿನಿಂದಲೂ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಇದ್ದ ಸಂದರ್ಭದಲ್ಲೂ ಚರ್ಚೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದರು. ಈಗಲೂ ಕೂಡ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ನಾವು ಎಲ್ಲರೂ ಕುಳಿತುಕೊಂಡು ನಮ್ಮ ಅಭಿಪ್ರಾಯ ಹೇಳ್ತೀವಿ ಎಂದು ಹೇಳಿದ್ದರು.
ಆದರೆ, ಸಿದ್ದರಾಮಯ್ಯ ಅವರು ಸಿಎಂ ಆದ ಸಂದರ್ಭದಿಂದಲೂ ಹಲವು ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಕಾಯುತ್ತಿದ್ದರು. ಆದರೆ ಪದೇ ಪದೇ ತಡವಾಗುತ್ತಿರೋದು ನಿರಾಸೆ ಮೂಡಿಸಿದೆ. ಈ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕ್ತಾರ ರಘು ದೊಡ್ಡೇರಿ ಅವರು, ನಮ್ಮದು ಹೈಕಮಾಂಡ್ ಪಕ್ಷ. ಇದರಂತೆ ಸಂಪುಟ ವಿಸ್ತರಣೆ ಆಗಲಿದೆ. ನಿನ್ನೆಯೂ ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದರು. ಆದರೆ ವಿರೋಧ ಪಕ್ಷದವರು ಹೇಳಿದಂತೆ ಸರ್ಕಾರ ಕೆಲಸ ಮಾಡುತ್ತಿಲ್ಲ ಅನ್ನೋದು ಸರಿಯಲ್ಲ. ಈಗಾಗಲೇ 14 ಸಚಿವರು ಕೆಲಸ ಮಾಡುತ್ತಿದ್ದಾರೆ. ಬರ ನಿರ್ವಹಣೆಗೆ ಹಾಗೂ ಮಳೆ ಬೀಳುತ್ತಿರುವ ಪ್ರದೇಶಗಳಲ್ಲಿ ಜನರಿಗೆ ನೆರವು ನೀಡುವ ಕಾರ್ಯ ಆಗುತ್ತಿದೆ. ಕಂದಾಯ ಸಚಿವರು ಈಗಾಗಲೇ ಬರಪರಿಹಾರಕ್ಕಾಗಿ 500 ಕೋಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದರ ಅರ್ಥ ಕಾರ್ಯ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ಈ ವಾರದಲ್ಲಿ ಆಗುವ ನಿರೀಕ್ಷೆ ಇದೆ. ಈ ಹಿಂದೆ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ 06 ತಿಂಗಳು 13 ಖಾತೆಗಳನ್ನು ಉಳಿಸಿಕೊಂಡಿದ್ದರು. ಯಡಿಯೂರಪ್ಪ ಅವರು ಒಂದು ತಿಂಗಳು ಏಕಾಂಗಿಯಾಗಿ ಮಾಡಿದ್ದರು. ಆದ್ದರಿಂದ ವಿರೋಧ ಪಕ್ಷಗಳು ಟೀಕೆ ಮಾಡುವ ಕೆಲಸವನ್ನಷ್ಟೇ ಮಾಡ್ತಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಮಧು ಬಂಗಾರಪ್ಪ, ಸಂಪುಟ ವಿಸ್ತರಣೆ ವಿಚಾರವಾಗಿ ನಿನ್ನೆ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ. ಹರಿಪ್ರಸಾದ್ ರನ್ನ ಹೈಕಮಾಂಡ್ ಕರೆಸಿಕೊಂಡಿದ್ದರು. ನಿನ್ನೆ ಚರ್ಚೆ ಆಗಿ ಫೈನಲ್ ಆಗಿದ್ರೆ ಪ್ರಮಾಣ ವಚನ ತಗೊಳ್ಬೇಕಬೇಕಾಗಿತ್ತು. ನಮ್ಮ ಪಕ್ಷದೊಳಗೆ ಹೈಕಮಾಂಡ್ ಒಂದು ಫೈನಲ್ ನಿರ್ಧಾರ ಬೇಕಾಗುತ್ತದೆ. ಹೈಕಮಾಂಡ್ ವರ್ಷ ಮಾಡೋದು ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿ ಸಹಜವಾದದ್ದು, ಇವತ್ತು ರಾಜ್ಯ ನಾಯಕರು ಹೈಕಮಾಂಡ್ ಜೊತೆ ಚರ್ಚೆ ಮಾಡ್ತಾರೋ? ಇಲ್ವಾ ಮರಳಿ ಬರತಾರೋ ನೋಡಬೇಕು? ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗುತ್ತೆ ಅನ್ನೋ ವಿಶ್ವಾಸ ಇದೆ. ನಮ್ಮ ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಒಳ್ಳೆಯ ನಿರ್ಧಾರ ಮಾಡ್ತಾರೆ. ಹೈಕಮಾಂಡ್ ಏನು ನಿರ್ಧಾರವನ್ನು ತಗೆದುಕೊಂಡರು ಅದನ್ನ ಪಾಲಿಸಿಕೊಂಡು ಹೋಗ್ತೇವೆ. ಎಲ್ಲರಿಗೂ ಒಳ್ಳೆಯದಾಗಬೇಕು, ಗ್ಯಾರಂಟಿಗಳು ಮುಂದೆ ಹೋಗಬೇಕು. ಮತ್ತೆ ಅಧಿಕಾರಕ್ಕೆ ಬರಬೇಕು, ಇದನ್ನ ನೋಡಬೇಕಾಗುತ್ತದೆ. ಮತ್ತೆ ಅಧಿಕಾರಕ್ಕೆ ಬಂದು ಒಳ್ಳೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. (ವರದಿ: ಬ್ಯೂರೋ ರಿಪೋರ್ಟ್ ನ್ಯೂಸ್18)
Bangalore [Bangalore],Bangalore,Karnataka














