Last Updated:
ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Junior NTR) ಅಭಿನಯದ ದೇವರ: ಪಾರ್ಟ್ 1 (Devara: Part 1) ಚಿತ್ರದ ಜನಪ್ರಿಯ ಚುಟ್ಟಮಲ್ಲೆ ಹಾಡಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಎಐ ಮಾರ್ಫಿಂಗ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅದರ ದುರ್ಬಳಕೆಯ ಕುರಿತಾದ ಆತಂಕವೂ ಹೆಚ್ಚುತ್ತಿದೆ. ಇದೀಗ ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ (Junior NTR) ಅಭಿನಯದ ದೇವರ: ಪಾರ್ಟ್ 1 (Devara: Part 1) ಚಿತ್ರದ ಜನಪ್ರಿಯ ಚುಟ್ಟಮಲ್ಲೆ ಹಾಡಿಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಎಐ ಮಾರ್ಫಿಂಗ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ಕುರಿತು ಜೂನಿಯರ್ ಎನ್‌ಟಿಆರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅದನ್ನು ಸೃಷ್ಟಿಸಿದವರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದೇವರ: ಪಾರ್ಟ್ 1 ಚಿತ್ರದ ಚುಟ್ಟಮಲ್ಲೆ ಹಾಡು ಬಿಡುಗಡೆಯಾದ ಸಮಯದಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯಿಸಿರುವ ಈ ಹಾಡಿನ ದೃಶ್ಯಗಳನ್ನು ಬಳಸಿಕೊಂಡು ಇದೀಗ ಎಐ ತಂತ್ರಜ್ಞಾನದ ನೆರವಿನಿಂದ ಮಾರ್ಫಿಂಗ್ ವಿಡಿಯೋ ಸೃಷ್ಟಿಸಲಾಗಿದೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ನಟ ಜೂನಿಯರ್ ಎನ್‌ಟಿಆರ್ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ.
Disgusting, Sick and Shameless.
In a land that worships women as mothers and goddesses, where “Matrudevo Bhava” is not just a phrase but a part of our culture, some people have fallen so low that they are using AI to disrespect a woman in the most degrading way possible. Using…
— Jr NTR (@tarak9999) October 3, 2026
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿರುವ ಜೂನಿಯರ್ ಎನ್‌ಟಿಆರ್, ಇಂತಹ ವಿಡಿಯೋ ಸೃಷ್ಟಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರನ್ನು ತಾಯಿ ಮತ್ತು ದೇವತೆಗಳ ರೂಪದಲ್ಲಿ ಗೌರವಿಸುವ ಸಂಸ್ಕೃತಿ ನಮ್ಮದು. ಆದರೆ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ವಿಷಯ ಸೃಷ್ಟಿಸುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.
ಮಾರ್ಫಿಂಗ್ ವಿಡಿಯೋ ಸೃಷ್ಟಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜೂನಿಯರ್ ಎನ್‌ಟಿಆರ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಿಡಿಯೋದ ಹಿಂದೆ ಇರುವ ಯಾರೊಬ್ಬರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ವಿಡಿಯೋವನ್ನು ಸೃಷ್ಟಿಸಿದವರು ಮಾತ್ರವಲ್ಲದೆ, ಅದನ್ನು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.ಜೊತೆಗೆ ಇಂತಹ ವಿಕೃತ ವಿಷಯಗಳನ್ನು ಯಾರೂ ವೀಕ್ಷಿಸಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಎಐ ದುರ್ಬಳಕೆಯ ಪರಿಣಾಮ ಕೇವಲ ಚಿತ್ರರಂಗದ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಜೂನಿಯರ್ ಎನ್‌ಟಿಆರ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಇಂದು ಇಂತಹ ಘಟನೆ ಬೇರೊಬ್ಬರ ವಿರುದ್ಧ ನಡೆಯಬಹುದು. ಆದರೆ ಇದೇ ರೀತಿಯ ದುರ್ಬಳಕೆ ನಾಳೆ ನಮ್ಮ ತಾಯಿ, ತಂಗಿ, ಪತ್ನಿ ಅಥವಾ ಮಗಳ ವಿರುದ್ಧವೂ ನಡೆಯಬಹುದು ಎಂದು ಎಚ್ಚರಿಸಿದ್ದಾರೆ.
2024ರಲ್ಲಿ ಬಿಡುಗಡೆಯಾದ ದೇವರ: ಪಾರ್ಟ್ 1 ಚಿತ್ರದ ಚುಟ್ಟಮಲ್ಲೆ ಹಾಡು ಬಿಡುಗಡೆಯಾದ ಬಳಿಕ ಭಾರಿ ಜನಪ್ರಿಯತೆ ಪಡೆದಿತ್ತು. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಶಿಲ್ಪಾ ರಾವ್ ಧ್ವನಿ ನೀಡಿದ್ದಾರೆ. ಬೋಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದು, ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಕಾಣಿಸಿಕೊಂಡಿದ್ದಾರೆ.
ಈ ಹಾಡು ತೆಲುಗಿನಲ್ಲಿ ಮಾತ್ರವಲ್ಲದೆ ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿತ್ತು. ಕನ್ನಡದಲ್ಲಿ ಸ್ವಾತಿಮುತ್ತೇ ಸಿಕ್ಕಂಗೈತೆ ಮತ್ತು ಹಿಂದಿಯಲ್ಲಿ ಧೀರೆ ಧೀರೆ ಎಂಬ ಹೆಸರಿನಲ್ಲಿ ಹಾಡು ಪ್ರೇಕ್ಷಕರನ್ನು ತಲುಪಿತ್ತು. ಹಾಡಿನ ಸಂಗೀತ ಮತ್ತು ನೃತ್ಯ ಸಂಯೋಜನೆ ಸಾಕಷ್ಟು ಗಮನ ಸೆಳೆದಿತ್ತು.
ಕೊರಟಾಲ ಶಿವ ನಿರ್ದೇಶನದ ದೇವರ: ಪಾರ್ಟ್ 1 ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.














