ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ರಾಯಿಟರ್ಸ್ (Reuters), ಇರಾನ್‌ನ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಸ್ಪೋಟಕ ಸುದ್ದಿಯನ್ನು ಹೊರಹಾಕಿದೆ. ಈ ಪ್ರಸ್ತಾಪದ ಮೂಲಕ ಇರಾನ್, ಅಮೆರಿಕದೊಂದಿಗೆ ಸ್ಥಗಿತಗೊಂಡಿರುವ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಸಕಾರಾತ್ಮಕ ಸಂಕೇತ ನೀಡಿದೆ.
ವರದಿಗಳ ಪ್ರಕಾರ, ಇರಾನ್ ತನ್ನ ಈ ಮಹತ್ವದ ಪ್ರಸ್ತಾಪವನ್ನು ಈಗಾಗಲೇ ಮಧ್ಯಸ್ಥ ದೇಶಗಳ (Mediators) ಮೂಲಕ ವಾಷಿಂಗ್ಟನ್‌ಗೆ (ಅಮೆರಿಕ ಸರ್ಕಾರಕ್ಕೆ) ರವಾನಿಸಿದೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಸಂದರ್ಭದಲ್ಲಿ ಮಧ್ಯಸ್ಥಗಾರ ದೇಶಗಳೊಂದಿಗೆ ಈ ಕುರಿತು ಮತ್ತಷ್ಟು ಸುದೀರ್ಘ ಚರ್ಚೆ ನಡೆಸಲು ಟೆಹ್ರಾನ್ (ಇರಾನ್ ಸರ್ಕಾರ) ಯೋಜಿಸಿದೆ.
ಆದರೆ, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ನೇರ ಸಭೆ ನಡೆಯುವ ಸಾಧ್ಯತೆಯನ್ನು ಇರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ, “ವಾಷಿಂಗ್ಟನ್ ಜವಾಬ್ದಾರಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರೆ, ಉಭಯ ದೇಶಗಳು ಒಂದು ಶಾಶ್ವತ ಒಪ್ಪಂದದ ಕಡೆಗೆ ಸಾಗುವ ಎಲ್ಲಾ ಸಾಧ್ಯತೆಗಳಿವೆ” ಎಂದು ಇರಾನ್ ಆಶಯ ವ್ಯಕ್ತಪಡಿಸಿದೆ.
ಜಾಗತಿಕ ಹಡಗು ಸಾಗಣೆ ಮತ್ತು ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದ್ದ ಈ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದೆ.
1. ಸ್ಟ್ರೈಟ್ ಆಫ್ ಹರ್ಮುಜ್ ಜಲಮಾರ್ಗದ ಸುತ್ತಮುತ್ತ ಅಮೆರಿಕ ನಡೆಸುತ್ತಿರುವ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಬೇಕು.
2. ಇರಾನ್ ಬಂದರುಗಳ ಮೇಲಿನ ಆರ್ಥಿಕ ಮತ್ತು ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.
3. ಅಮೆರಿಕದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಜಾಗತಿಕ ಆಸ್ತಿಗಳನ್ನು (Assets) ಮುಕ್ತಗೊಳಿಸಬೇಕು.
ಈ ಇಡೀ ಶಾಂತಿ ಪ್ರಸ್ತಾಪಕ್ಕೆ ಇರಾನ್‌ನ ಅತ್ಯುನ್ನತ ನಾಯಕ ಮೊಜ್ಟಾಬಾ ಖಮೇನಿ ಮತ್ತು ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಅನುಮೋದನೆ ನೀಡಿದೆ ಎಂದು ತಿಳಿದುಬಂದಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಬಗ್ಗೆ ಪ್ರತಿಕ್ರಿಯಿಸಿ, “ನಾವು ಸದ್ಯ ಯುದ್ಧದ ಪರಿಸ್ಥಿತಿಯಲ್ಲಿದ್ದರೂ, ರಾಜತಾಂತ್ರಿಕತೆಗೆ ಸದಾ ಅವಕಾಶ ಕಲ್ಪಿಸುತ್ತೇವೆ. ರಾಜತಾಂತ್ರಿಕತೆ ಎಂದರೆ ಶರಣಾಗತಿಯಲ್ಲ, ಬದಲಿಗೆ ರಣರಂಗದ ಶಕ್ತಿಯನ್ನು ರಾಜಕೀಯ ಜಯವಾಗಿ ಪರಿವರ್ತಿಸುವುದು” ಎಂದಿದ್ದಾರೆ.
ವಿಶ್ವದ ಒಟ್ಟು ಜಲಮಾರ್ಗದ ತೈಲ ಸಾಗಣೆಯ ಐದನೇ ಒಂದು ಭಾಗ (ಶೇ. ೨೦ ರಷ್ಟು) ಕೇವಲ ಈ ‘ಸ್ಟ್ರೈಟ್ ಆಫ್ ಹರ್ಮುಜ್’ ಮೂಲಕವೇ ಹಾದುಹೋಗುತ್ತದೆ. ಯುದ್ಧದ ಕಾರಣದಿಂದಾಗಿ ಈ ಮಾರ್ಗ ಬಂದ್ ಆಗಿದ್ದರಿಂದ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಆದರೆ, ಇರಾನ್ ಜಲಮಾರ್ಗವನ್ನು ಮರುಸೃಷ್ಟಿಸುವ ಆಫರ್ ನೀಡಿದ ಬೆನ್ನಲ್ಲೇ ಜಾಗತಿಕ ತೈಲ ಮಾರುಕಟ್ಟೆ ನಿರಾಳವಾಗಿದೆ. ಕಚ್ಚಾ ತೈಲ ಪೂರೈಕೆಯ ಆತಂಕ ದೂರವಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ತಕ್ಷಣವೇ ಕುಸಿತ ಕಂಡಿವೆ.
ಕಳೆದ ಗಿಫೆಬ್ರವರಿ ತಿಂಗಳ ಕೊನೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾ ಇರಾನ್ ಮೇಲೆ ನಡೆಸಿದ ಆಕ್ರಮಣದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಮಹಾಯುದ್ಧ ಆರಂಭವಾಗಿತ್ತು. ಜೂನ್ ತಿಂಗಳಲ್ಲಿ ನಡೆದ ಅಮೆರಿಕ-ಇರಾನ್ ನಡುವಿನ ತಾತ್ಕಾಲಿಕ ಒಪ್ಪಂದ ಮುರಿದುಬಿದ್ದ ನಂತರ ಮಿಲಿಟರಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು. ಪ್ರಸ್ತುತ ಇರಾನ್ ನೀಡಿರುವ ಈ ಹೊಸ ಪ್ರಸ್ತಾಪವು ಜಾಗತಿಕ ಆರ್ಥಿಕತೆ ಮತ್ತು ಶಾಂತಿಸ್ಥಾಪನೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.













