Iran Us Peace Deal: ಶಾಂತಿ ಒಪ್ಪಂದಕ್ಕೆ ಸಹಿ, ಆದ್ರೆ ಪಿಕ್ಚರ್​​​​ ಈಗ ಶುರು! ಮುಂದಿನ 60 ದಿನ ಈ 5 ವಿಚಾರಗಳ ಮೇಲೆ ಎಲ್ಲರ ಕಣ್ಣು / Iran-US Peace Deal Signed | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Iran Us Peace Deal: ಶಾಂತಿ ಒಪ್ಪಂದಕ್ಕೆ ಸಹಿ, ಆದ್ರೆ ಪಿಕ್ಚರ್​​​​ ಈಗ ಶುರು! ಮುಂದಿನ 60 ದಿನ ಈ 5 ವಿಚಾರಗಳ ಮೇಲೆ ಎಲ್ಲರ ಕಣ್ಣು / Iran-US Peace Deal Signed | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ


ಇದು ಅಮೆರಿಕಾ–ಇರಾನ್ ನಡುವೆ ವರ್ಷಗಳ ನಂತರವಾದ ಮೊದಲ ಅಧಿಕೃತ ಒಪ್ಪಂದ. ಹಾರ್ಮುಜ್ ಜಲಸಂಧಿ, ನಿರ್ಬಂಧಗಳ ಸಡಿಲಿಕೆ, ಇರಾನ್‌ನ ಪರಮಾಣು ಕಾರ್ಯಕ್ರಮ ಇತ್ಯಾದಿ ಪ್ರಮುಖ ವಿಷಯಗಳನ್ನು ಒಳಗೊಂಡ 14 ಅಂಶಗಳ ಚೌಕಟ್ಟಿಗೆ ಎರಡೂ ದೇಶಗಳು ಮೊದಲು ಒಪ್ಪಿಕೊಂಡಿದ್ದು, ಅದನ್ನು ಆಧಾರ ಮಾಡಿಕೊಂಡು ಈಗ ಎಲೆಕ್ಟ್ರಾನಿಕ್ ಸಹಿಗಳ ಮೂಲಕ MoU ಅಂತಿಮಗೊಂಡಿದೆ.

ಅಮೆರಿಕಾ – ಇರಾನ್​ ಶಾಂತಿ ಒಪ್ಪಂದಕ್ಕೆ ಸಹಿ

ಆದರೆ ನಿಜವಾದ ಸಮಸ್ಯೆ ಈಗ ಪ್ರಾರಂಭವಾಗಿತ್ತಿದೆ. ಅಮೆರಿಕ ಮತ್ತು ಇರಾನ್​ ಮಧ್ಯೆ ನಡೆದ ಈ ಒಪ್ಪಂದವೇ ಅಂತಿಮ ಅಂತಲ್ಲ. ಇದು ಮುಂದಿನ 60 ದಿನಗಳ ‘ಅನುಷ್ಠಾನ ಅವಧಿ’ಗೆ ಆರಂಭ ಮಾತ್ರ. ಈ ಅವಧಿಯಲ್ಲಿ ಎರಡೂ ದೇಶಗಳು ತಮ್ಮ ತಮ್ಮ ಬಾಧ್ಯತೆಗಳನ್ನು ಪಾಲಿಸಬೇಕು. ಅವು ಸರಿಯಾಗಿ ನಡೆದರೆ ಮಾತ್ರ ದೊಡ್ಡ ಶಾಂತಿ ಒಪ್ಪಂದದ ಬಗ್ಗೆ ಮುಂದಿನ ಮಾತುಕತೆಗಳು ಸಾಧ್ಯ. ಇಲ್ಲವಾದಲ್ಲಿ ಮತ್ತೆ ಯುದ್ಧ ನಡೆಯುವ ಸಾಧ್ಯತೆಗಳು ಇರುತ್ತದೆ.

ಇರಾನ್ ಅಧಿಕಾರಿಗಳು ಸಹಿ ನಂತರವೇ ಜನರ ನಿರೀಕ್ಷೆಯನ್ನು ತಗ್ಗಿಸುವ ಪ್ರಯತ್ನ ಮಾಡಿದ್ದಾರೆ. ‘ಇದು ಪರೀಕ್ಷೆಯ ಸಮಯ, ಕಾಗದ ಸಹಿಗಿಂತ ಕೆಲಸದ ಮೇಲೆ ಎಲ್ಲವೂ ಅವಲಂಬಿತ’ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ವಾಷಿಂಗ್ಟನ್ ಮತ್ತು ಟೆಹ್ರಾನ್ ತಮ್ಮ ಮಾತು ಕಾಪಾಡುತ್ತವೆಯೇ ಎಂಬುದು ಮುಖ್ಯವಾಗಿದೆ.

ಮುಂದಿನ ಎರಡು ತಿಂಗಳಲ್ಲಿ ಗಮನಿಸಬೇಕಾದ ಮುಖ್ಯ ವಿಷಯಗಳು ಯಾವುವು?

1. ಕದನ ವಿರಾಮ ಉಳಿಯುತ್ತಾ? ಇದೀಗ ನಡೆದ ಒಪ್ಪಂದದ ಪ್ರಕಾರ ಮಾತುಕತೆಗಳು ನಡೆಯುವವರೆಗೆ ಯುದ್ಧ ನಿಲ್ಲಬೇಕು. ಕದನ ವಿರಾಮ ಈಗ ಬಹುತೇಕ ಜಾರಿಯಲ್ಲಿದ್ದರೂ, ಯಾವಾಗಲಾದರೂ ದೊಡ್ಡ ದಾಳಿ, ಗಡಿ ಘಟನೆ ಅಥವಾ ಒಪ್ಪಂದ ಉಲ್ಲಂಘನೆಯ ಅನುಮಾನ ಬಂದರೆ, ಎರಡೂ ಪಾಳಯಗಳಿಗೆ ಮಾತುಕತೆ ಸ್ಥಗಿತಗೊಳಿಸುವ ಅಧಿಕಾರ ಇದೆ. ಹೀಗಾಗಿ ಮುಂದಿನ ಕೆಲವು ವಾರಗಳ ಪರಸ್ಪರ ನಂಬಿಕೆ ಪರೀಕ್ಷೆಯ ಮೊದಲ ಹಂತ.

2. ಪರಮಾಣು ಪ್ರಶ್ನೆಗೆ ಶಾಶ್ವತ ಪರಿಹಾರ ಸಿಗುತ್ತಾ? ಇರಾನ್‌ನ ಪರಮಾಣು ಕಾರ್ಯಕ್ರಮವೇ ಅತ್ಯಂತ ಕಷ್ಟದ ವಿಷಯ. ಇರಾನ್ ಈಗಾಗಲೇ ಪುಷ್ಟೀಕರಿಸಿರುವ ಯುರೇನಿಯಂವನ್ನು ತಕ್ಷಣ ನಾಶಮಾಡಬೇಕು ಎಂಬುದನ್ನು ಅಮೆರಿಕಾ ಒತ್ತಾಯಿಸದೇ, ಅದನ್ನು IAEA ಮೇಲ್ವಿಚಾರಣೆಯಲ್ಲಿ ಮಿಶ್ರಣ ಮಾಡಿ ನಾಗರಿಕ ಬಳಕೆಗೆ ತಕ್ಕ ಮಟ್ಟಕ್ಕೆ ಇಳಿಸುವಂತೆ MoU ಪ್ರಸ್ತಾಪಿಸಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಮಾಡಲ್ಲವೆಂದು ಮತ್ತೆ ಹೇಳಿಕೊಂಡಿದೆ ಮತ್ತು ಅಂತರರಾಷ್ಟ್ರೀಯ ತನಿಖಾಧಿಕಾರಿಗಳೊಂದಿಗೆ ಸಹಕರಿಸಲು ಒಪ್ಪಿಕೊಂಡಿದೆ. ಆದರೆ ತಪಾಸಣೆ, ಪುಷ್ಟೀಕರಣ ಮಟ್ಟ, ಸಮಯ ಇತ್ಯಾದಿಗಳ ಬಗ್ಗೆ ಕಲಹ ಉಂಟಾದರೆ ಅಂತಿಮ ಶಾಂತಿ ಒಪ್ಪಂದಕ್ಕೆ ದೊಡ್ಡ ತಡೆ.

3. ನಿರ್ಬಂಧ ಸಡಿಲಿಕೆ ಎಷ್ಟು ಬೇಗ? ಇರಾನ್‌ಗಾಗಿ ದೊಡ್ಡ ಪ್ರೋತ್ಸಾಹ ಆರ್ಥಿಕ ನಿರ್ಬಂಧ ಸಡಿಲಿಕೆ. ಅಮೆರಿಕಾ ತೈಲ ನಿರ್ಬಂಧಗಳ ಕೆಲವು ವಿನಾಯಿತಿಗಳು, ನೌಕಾ ದಿಗ್ಬಂಧನದ ಹಂತ ಹಂತದ ತೆರವು, ವಿದೇಶಗಳಲ್ಲಿ ಹೆಪ್ಪುಗಟ್ಟಿರುವ ಇರಾನ್ ಆಸ್ತಿಗಳ ಒಂದು ಭಾಗಕ್ಕೆ ಪ್ರವೇಶ ನೀಡುವ ಬಗ್ಗೆ ಚರ್ಚಿಸಿದೆ. ಆದರೆ ಇವೆಲ್ಲವೂ ಸ್ವಯಂಚಾಲಿತ ಅಲ್ಲ, ಇರಾನ್ ಮೊದಲು ತನ್ನ ಬಾಧ್ಯತೆಗಳನ್ನು ನೆರವೇರಿಸಬೇಕು. ಇತಿಹಾಸದಲ್ಲಿ ಇದೇ ಕ್ರಮದ ಅನುಷ್ಠಾನ ಹಂತದಲ್ಲಿ ಅಮೆರಿಕಾ–ಇರಾನ್ ನಡುವೆ ಹೆಚ್ಚು ಅವಿಶ್ವಾಸ ಕಂಡಿದೆ. ಇರಾನ್ ತಕ್ಷಣದ ಆರ್ಥಿಕ ಲಾಭ ಬಯಸುತ್ತದೆ, ಅಮೆರಿಕಾ ‘ಮೊದಲು ಅನುಸರಣೆ, ನಂತರ ಸಡಿಲಿಕೆ’ ಎನ್ನುವ ನಿಲುವಿನಲ್ಲಿ.

4. ಹಾರ್ಮುಜ್ ಜಲಸಂಧಿ ತೆರೆದಿರುತ್ತಾ? ವಿಶ್ವದ ತೈಲ ಸಾಗಣೆಗಳಲ್ಲಿ ದೊಡ್ಡ ಪಾಲು ಹಾದುಹೋಗುವ ಹಾರ್ಮುಜ್ ಜಲಸಂಧಿ ಈ ಒಪ್ಪಂದದ ಇನ್ನೊಂದು ಪ್ರಮುಖ ಅಂಶ. ಇರಾನ್ ಇಲ್ಲಿ ವಾಣಿಜ್ಯ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲು ಒಪ್ಪಿಕೊಂಡಿದೆ. ಅಮೆರಿಕಾ ತನ್ನ ನೌಕಾ ದಿಗ್ಬಂಧನವನ್ನು ನಿಧಾನವಾಗಿ ತೆಗೆದುಹಾಕಲಿದೆ. ಇದು ಸರಿಯಾಗಿ ಜಾರಿಯಾದರೆ ಜಾಗತಿಕ ತೈಲ ಬೆಲೆ, ಸಾಗಣೆ ವೆಚ್ಚ, ಭಾರತ ಸೇರಿದಂತೆ ಅನೇಕ ದೇಶಗಳ ಇಂಧನ ಸುರಕ್ಷತೆಯ ಮೇಲೆ ಒಳ್ಳೆಯ ಪರಿಣಾಮ ಬೀಳಬಹುದು. ಆದರೆ ಮುಂದಿನ ದಿನಗಳಲ್ಲಿ ಹೊಸ ಉದ್ವಿಗ್ನತೆಗಳು ಬಂದರೆ ಈ ಮಾರ್ಗ ಮತ್ತೊಮ್ಮೆ ಅಸ್ತವ್ಯಸ್ತವಾಗುವ ಅಪಾಯ ಉಳಿದೇ ಇದೆ.

5. ತಾತ್ಕಾಲಿಕ ಒಪ್ಪಂದ ಶಾಶ್ವತ ಶಾಂತಿಯಾಗಬಹುದಾ? ಈಗದ MoU ಒಂದು ಚೌಕಟ್ಟು ಮಾತ್ರ. ಇನ್ನೂ ದೀರ್ಘಾವಧಿಯ ನಿರ್ಬಂಧಗಳು, ಇರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯ, ಪ್ರಾದೇಶಿಕ ಭದ್ರತೆ, ಅಂತರರಾಷ್ಟ್ರೀಯ ಖಾತರಿಗಳು ಮೊದಲಾದ ಗಂಭೀರ ವಿಷಯಗಳು ಬಾಕಿಯೇ ಇವೆ. ಇವುಗಳಿಗೆ ಪರಿಹಾರ ಕಂಡು ಶಾಶ್ವತ ಒಪ್ಪಂದ ರೂಪಿಸಲು ಸಮಾಲೋಚಕರಿಗೆ 60 ದಿನಗಳಷ್ಟೇ ಕಾಲ. ಯಶಸ್ವಿಯಾದರೆ ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಟ್ಟದಲ್ಲೂ ಬೆಂಬಲ ಸಿಗಬಹುದು. ವಿಫಲವಾದರೆ, ಎರಡೂ ದೇಶಗಳು ಹಿಂದಕ್ಕೆ ಸರಿದು ಮತ್ತೆ ಮುಖಾಮುಖಿ ಸ್ಥಿತಿಗೆ ಮರಳುವ ಅಪಾಯ ಇದೆ. ಆದ್ದರಿಂದ ಟ್ರಂಪ್ ಮತ್ತು ಪೆಜೆಶ್ಕಿಯಾನ್ ಸಹಿ ಹಾಕಿದರೂ, ಕಠಿಣ ಕೆಲಸ ಈಗ ಮಾತ್ರ ಆರಂಭವಾಗಿದೆ ಎಂಬುದನ್ನು ಎರಡೂ ಸರ್ಕಾರಗಳು ಅರಿತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed