Iran US Deal: ಅಮೆರಿಕಾ-ಇರಾನ್ ಒಪ್ಪಂದದ ಕುರಿತು ಮೋದಿ ಮೊದಲ ಪ್ರತಿಕ್ರಿಯೆ, ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ / Iran-US Deal: PM Narendra Modi’s First Reaction, | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ


Last Updated:

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮಾಡಿಕೊಂಡಿರುವ ಈ ತಿಳುವಳಿಕೆಯನ್ನು ಅವರು ಸ್ವಾಗತಿಸಿದ್ದಾರೆ. ಜೊತೆಗೆ ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ ನೀಡಿದ್ದಾರೆ.

ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ
ಹಾರ್ಮುಜ್ ಬಿಕ್ಕಟ್ಟಿನ ಕುರಿತು ಸಂದೇಶ

ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದದ (Iran US Peace Deal) ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ (Middle Ease Crisis) ನಡೆಯುತ್ತಿದ್ದ ಯುದ್ಧ ಮತ್ತು ಅಸ್ಥಿರತೆಯನ್ನು ಕೊನೆಗೊಳಿಸಲು ಈ ಒಪ್ಪಂದ ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಮೋದಿ, ಈ ಸಂಘರ್ಷದಿಂದ ಪ್ರಪಂಚದ ಅನೇಕ ದೇಶಗಳಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಹಲವಾರು ಜೀವ ಹಾನಿಯೂ ಸಂಭವಿಸಿದೆ ಎಂದು ನೆನಪಿಸಿದ್ದಾರೆ.

ಮೊದಲಿಗೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮಾಡಿಕೊಂಡಿರುವ ತಿಳುವಳಿಕೆಯನ್ನು ಮೋದಿ ಸ್ವಾಗತಿಸಿದ್ದಾರೆ. ಇದು ಜಾಗತಿಕ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತಗೊಳಿಸುತ್ತದೆ ಮತ್ತು ಬಾಕಿ ಇರುವ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಅಮೆರಿಕಾ ಇರಾನ್ ಒಪ್ಪಂದದ ಬಗ್ಗೆ ಮೋದಿ ಪ್ರತಿಕ್ರಿಯೆ!

ಅಮೆರಿಕಾ ಇರಾನ್​ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋದಿ, ಅಮೆರಿಕ–ಇರಾನ್ ಒಪ್ಪಂದವು ಕೇವಲ ಆ ಎರಡು ದೇಶಗಳಿಗಷ್ಟೇ ಅಲ್ಲ, ಸಂಪೂರ್ಣ ಜಗತ್ತಿನಿಗೂ ಮಹತ್ವದ್ದಾಗಿದೆ. ‘ಹೊಸ ತಿಳುವಳಿಕೆಯ ಪರಿಣಾಮಕಾರಿ ಅನುಷ್ಠಾನದಿಂದ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಪುನಃ ಬರುವ ನಿರೀಕ್ಷೆಯಿದೆ’ ಎಂದು ಅವರು ಹೇಳಿದ್ದಾರೆ. ಶಾಂತಿ ನೆಲೆಸಿದರೆ ಸಮುದ್ರ ಮಾರ್ಗಗಳಲ್ಲಿ ಅಡೆತಡೆಯಿಲ್ಲದೆ ಹಡಗು ಸಂಚಾರ ನಡೆಯಲು, ಜಾಗತಿಕ ವ್ಯಾಪಾರ ಸುರಕ್ಷಿತವಾಗಿ ಮುಂದುವರಿಯಲು ಇದು ಸಹಾಯಕವಾಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಹಾರ್ಮುಜ್​ ಬಿಕ್ಕಟ್ಟಿನ ಕುರಿತು ಮೋದಿ ಸಂದೇಶ

ಈ ಹೇಳಿಕೆಯಲ್ಲಿಯೇ ಅವರು ವಿಶೇಷವಾಗಿ ಹಾರ್ಮುಜ್ ಜಲಸಂಧಿಯನ್ನು ಉಲ್ಲೇಖಿಸಿದ್ದಾರೆ. ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಜಗತ್ತಿನ ತೈಲ ಮತ್ತು ಅನಿಲ ಪೂರೈಕೆಯ ದೊಡ್ಡ ಭಾಗ ಈ ಮಾರ್ಗದ ಮೂಲಕ ಸಾಗುತ್ತದೆ. ಈ ಪ್ರದೇಶದಲ್ಲಿ ಯುದ್ಧ ಮತ್ತು ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ, ಇರಾನ್ ಮೊದಲು ಹಾರ್ಮುಜ್ ಜಲಸಂಧಿಗೆ ದಿಗ್ಬಂಧನ ವಿಧಿಸಿತು. ನಂತರ ಅಮೆರಿಕ ಕೂಡಾ ತನ್ನದೇ ರೀತಿಯ ದಿಗ್ಬಂಧನ ಘೋಷಿಸಿತು. ಇದರ ಪರಿಣಾಮವಾಗಿ ತೈಲ ಮತ್ತು ಅನಿಲ ಪೂರೈಕೆ ತೊಂದರೆಗೊಳಗಾಗಿ ಅನೇಕ ದೇಶಗಳಲ್ಲಿ ಇಂಧನ ಕೊರತೆ ಉಂಟಾಯಿತು, ದರ ಏರಿಕೆ ಕಂಡುಬಂದಿತು, ಆರ್ಥಿಕ ಚಟುವಟಿಕೆಗಳು ನಿಧಾನಗೊಂಡವು ಎಂದಿದ್ದಾರೆ.

ಇದೀಗ ಅಮೆರಿಕ ಮತ್ತು ಇರಾನ್ ಯುದ್ಧವನ್ನು ಕೊನೆಗೊಳಿಸಲು ಪ್ರಾಥಮಿಕ ಒಪ್ಪಂದಕ್ಕೆ ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದವನ್ನು “ರಾಜತಾಂತ್ರಿಕ ಯಶಸ್ಸು” ಎಂದು ಹೆಸರಿಸಿ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲಾಗುತ್ತಿದೆ ಎಂದು ಘೋಷಿಸಿದ್ದಾರೆ. ಈ ಮಾತುಕತೆಗಳಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿದ್ದು, ಅವರ ಪಾತ್ರದ ನಂತರ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಲೆಬನಾನ್ ಸೇರಿದಂತೆ ವಿವಿಧ ರಂಗಗಳಲ್ಲಿ ನಡೆಯುತ್ತಿದ್ದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ಇರಾನ್‌ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯೂ ಸಹ ಮಿಲಿಟರಿ ಕಾರ್ಯಾಚರಣೆಗಳನ್ನು ಶಾಶ್ವತವಾಗಿ ಕೊನೆಗೊಳಿಸುವ ಮನಸ್ಸು ವ್ಯಕ್ತಪಡಿಸಿದೆ.

ಪರಿಸ್ಥಿತಿಯನ್ನು ಗಮನಿಸುತ್ತಿದೆ ವಿಶ್ವ ಸಮುದಾಯ

ಆದರೆ ಎಲ್ಲಾ ಸಮಸ್ಯೆಗಳು ಒಂದೇ ಬಾರಿಗೆ ಪರಿಹಾರವಾಗಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮ, ಅದರ ಮೇಲೆ ವಿಧಿಸಲಾದ ನಿರ್ಬಂಧಗಳ ಸಡಿಲಿಕೆ, ಹಾಗೂ ಇತರ ಕಾರ್ಯತಂತ್ರದ ವಿಷಯಗಳ ಬಗ್ಗೆ ಇನ್ನೂ ಚರ್ಚೆಗಳು ಬಾಕಿ ಇವೆ. ಪ್ರಸ್ತಾವಿತ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಈ ಸೂಕ್ಷ್ಮ ವಿಷಯಗಳ ಬಗ್ಗೆ ಆಳವಾದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿಯೇ ವಿಶ್ವ ಸಮುದಾಯವೂ ಪರಿಸ್ಥಿತಿಯನ್ನು ಗಮನಿಸುತ್ತಿದೆ.

ಈ ಒಪ್ಪಂದದ ಸುದ್ದಿಯ ನಂತರ ಜಾಗತಿಕ ಮಾರುಕಟ್ಟೆಗಳು ಹಿತಕರವಾಗಿ ಪ್ರತಿಕ್ರಿಯಿಸಿವೆ. ಕಚ್ಚಾ ತೈಲದ ಬೆಲೆಗಳು ಕುಸಿದಿವೆ, ಇದರಿಂದ ಇಂಧನ ವೆಚ್ಚ ಕಡಿಮೆಯಾಗುವ ನಿರೀಕ್ಷೆ ಮೂಡಿದೆ. ಏಷ್ಯಾದ ಷೇರು ಮಾರುಕಟ್ಟೆಗಳು ಏರಿಕೆಯ ದಿಕ್ಕಿನಲ್ಲಿ ಚಲಿಸಿದ್ದು, ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದೆ. ತಜ್ಞರ ಅಭಿಪ್ರಾಯದಲ್ಲಿ, ಹಾರ್ಮುಜ್ ಜಲಸಂಧಿಯಲ್ಲಿ ಶಾಶ್ವತ ಶಾಂತಿ ಮತ್ತು ಸಾಮಾನ್ಯ ಸ್ಥಿತಿಯ ಮರುಸ್ಥಾಪನೆ ಇಂಧನ ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಜಾಗತಿಕ ಆರ್ಥಿಕತೆಗೆ ತಾತ್ಕಾಲಿಕವಾದರೂ ಒಂದಿಷ್ಟು ಉಸಿರಾಟಕ್ಕೆ ಅವಕಾಶ ಸಿಗುತ್ತದೆ.

ಒಟ್ಟಿನಲ್ಲಿ, ಅಮೆರಿಕ–ಇರಾನ್ ಒಪ್ಪಂದವನ್ನು ಭಾರತವು ಸ್ವಾಗತಿಸಿದ್ದು, ವಿಶೇಷವಾಗಿ ಸಮುದ್ರ ಮಾರ್ಗಗಳ ಭದ್ರತೆ, ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ಸ್ಥಿರತೆಗೆ ಇದು ಮಹತ್ವದ ಹೆಜ್ಜೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಿದರೆ ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕ ಮತ್ತು ಇಂಧನ ಭದ್ರತೆಗೆ ಇದು ಅನುಕೂಲಕರ ಎನ್ನುವುದು ಅವರ ಸಂದೇಶದ ಅರ್ಥ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed