ಜನಸಾಮಾನ್ಯರನ್ನ ರಕ್ಷಿಸುವ ರಕ್ಷಕನೇ ಭಕ್ಷಕನಾದರೆ ಹೇಗೆ? ಇದು ಬೇಲಿಯೇ ಎದ್ದು ಹೊಸಲು ಮೇಯ್ದ ಕಥೆ.
ಉದಯ್ ಕೃಷ್ಣ ರೆಡ್ಡಿ
ಹೈದರಾಬಾದ್: ಜನಸಾಮಾನ್ಯರನ್ನ ರಕ್ಷಿಸುವ ರಕ್ಷಕನೇ ಭಕ್ಷಕನಾದರೆ ಹೇಗೆ? ಇದು ಬೇಲಿಯೇ ಎದ್ದು ಹೊಸಲು ಮೇಯ್ದ ಕಥೆ. ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎನ್‌ಪಿಎ) ತರಬೇತಿ ಪಡೆಯುತ್ತಿರುವ ತರಬೇತಿ ಐಪಿಎಸ್ ಅಧಿಕಾರಿ (Trainee IPS Officer) ಉದಯ್ ಕೃಷ್ಣ ರೆಡ್ಡಿ (Uday Krishna Reddy) ಅರೆಸ್ಟ್ ಆಗಿದ್ದಾರೆ. ತರಬೇತಿ ಪಡೆಯುತ್ತಿರುವ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಸಲ್ಲಿಸಿದ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಿಸಿದಂತೆ ಪೊಲೀಸರು (Police) ಮಿರಿಯಾಲಗುಡದಲ್ಲಿ ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತರಬೇತಿ ಪಡೆಯುತ್ತಿರುವ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ಉದಯ್ ಕೃಷ್ಣ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದು ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು. ಬಲವಂತವಾಗಿ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಇದೀಗ ಐಪಿಎಸ್ ಅಧಿಕಾರಿಯನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: Cauvery Water: ಕರ್ನಾಟಕ ಬಂದ್, ಬಂದ್, ಬಂದ್? ಕಾವೇರಿ ನೀರು ಬಿಟ್ರೆ ಕರುನಾಡೇ ಸ್ತಬ್ಧವಾಗೋದು ಪಕ್ಕಾ
ಆದ್ರೆ, ಆರೋಪಿ ಉದಯ್ ಕೃಷ್ಣ ರೆಡ್ಡಿ ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತ ಅಂತಾ ಹೇಳಿದ್ದಾರೆ. ಪ್ರಕರಣವು ಪ್ರಸ್ತುತ ಕೋರ್ಟ್ನಲ್ಲಿರುವುದರಿಂದ ಎಲ್ಲಾ ಮಾಹಿತಿಗಳನ್ನು ಬಹಿರಂಗಪಡಿಸುವುದು ಸೂಕ್ತವಲ್ಲ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಸಂಪೂರ್ಣ ನಂಬಿಕೆ ಇದ್ದು, ತನಿಖಾಧಿಕಾರಿಗಳೊಂದಿಗೆ ಸಹಕರಿಸಲು ಹೈದರಾಬಾದ್‌ಗೆ ಸ್ವಯಂಪ್ರೇರಣೆಯಿಂದ ಬರುತ್ತೇನೆ ಶೀಘ್ರದಲ್ಲೇ ಸತ್ಯಗಳು ಬೆಳಕಿಗೆ ಬರಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಏನಿದು ಪ್ರಕರಣ?
ಹೈದರಾಬಾದ್‌ನ ಶಿವರಾಂಪಲ್ಲಿಯಲ್ಲಿರುವ ಪ್ರತಿಷ್ಠಿತ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಸಂತ್ರಸ್ತೆ ಹಾಗೂ ಕೃಷ್ಣ ರೆಡ್ಡಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ವರ್ಷ ಜೂನ್ 23 ರಿಂದ ಉದಯ್ ಕೃಷ್ಣ ರೆಡ್ಡಿ ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ ನನಗೆ ಅಕ್ರಮ ಸಂಬಂಧವಿದೆ ಎಂದು ಹೇಳುವ ಮೂಲಕ ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡಿದ್ದಾನೆ. ತನ್ನ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ ಮತ್ತು ತನ್ನ ಪ್ರೈವೇಟ್ ಮೆಸೇಜ್ಗಳನ್ನು ಚೆಕ್ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಅಲ್ಲದೇ ವೈಯಕ್ತಿಕ ವೀಡಿಯೊಗಳನ್ನು ಚಿತ್ರೀಕರಿಸಿ ತನ್ನ ಪತಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದರು.
ಇನ್ನು, ದೂರು ದಾಖಲಾಗುತ್ತಿದ್ದಂತೆ ಕೇಸ್ ರದ್ದುಗೊಳಿಸುವಂತೆ ಕೋರಿ ಉದಯ್ ಕೃಷ್ಣ ರೆಡ್ಡಿ ಇತ್ತೀಚೆಗೆ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದ್ದು, ಹೈಕೋರ್ಟ್ ಶೀಘ್ರದಲ್ಲೇ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ವರದಿಯಾಗಿದೆ.