Last Updated:
ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸರ್ಪ್ರೈಸ್ ಕೊಟ್ಟಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ಕೆಲ ದಿನಗಳ ಹಿಂದೆಷ್ಟೇ 2026 ಐಪಿಎಲ್ (Indian Premier League) ಟೂರ್ನ್ಮೆಂಟ್ಗೆ ಅದ್ಧೂರಿ ತೆರೆಬಿದ್ದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಸತತ ಎರಡನೇ ಬಾರಿಗೆ ಕಪ್ ಗೆದ್ದು ಬೀಗಿತ್ತು. ಈ ಸಂತಸ ಮಾಸುವ ಮುನ್ನವೇ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ (BCCI) ಸರ್ಪ್ರೈಸ್ ಕೊಟ್ಟಿದೆ. ಮುಂದಿನ ಐಪಿಎಲ್ ಆವೃತ್ತಿಯಲ್ಲಿ (IPL Season) ಭಾರಿ ಬದಲಾವಣೆಗೆ ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಪಿಎಲ್ 2027 ರ ಬಗ್ಗೆ ಬಿಸಿಸಿಐ ಪ್ರಮುಖ ಘೋಷಣೆ ಮಾಡಿದೆ. ಮೇ ತಿಂಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಉಂಟಾಗುವ ತೀವ್ರ ಬಿಸಿಲನ್ನು ತಪ್ಪಿಸಲು ಮುಂದಿನ ವರ್ಷ ಮಾರ್ಚ್ 10 ರಿಂದ ಮೇ 15 ರವರೆಗೆ ಲೀಗ್ ಅನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಈ ಬಗ್ಗೆ ಬಿಸಿಸಿಐನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.
ಇನ್ನು ಇದೇ ವೇಳೆ ಐಪಿಎಲ್ ಪಂದ್ಯಗಳ ಸಮಯದಲ್ಲಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಬಿಸಿಲಿನ ಬಗ್ಗೆ ಆಟಗಾರರು ಮತ್ತು ಅಭಿಮಾನಿಗಳಿಂದ ದೂರುಗಳು ಬಂದಿವೆ ಎಂದು ಸೈಕಿಯಾ ಮಾಹಿತಿ ನೀಡಿದರು. ನಾವು ವಿವಿಧ ದೇಶಗಳಿಂದ ಬರುವ ಆಟಗಾರರಿಗೆ ಸಂಬಂಧಿಸಿದ ಇತರ ಹಲವು ವಿಷಯಗಳನ್ನು ಪರಿಗಣಿಸಬೇಕಾಗಿದೆ.
ಇತರ ದೇಶಗಳು ಸಹ ಬೇರೆ ಬೇರೆ ಪಂದ್ಯಗಳನ್ನು ಆಡಬೇಕಾಗಿರುವುದರಿಂದ ಐಪಿಎಲ್ ಅನ್ನು ಎರಡು ತಿಂಗಳು ಮೀರಿ ವಿಸ್ತರಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಆದ್ದರಿಂದ, ಪಂದ್ಯಗಳ ಸಂಖ್ಯೆಯನ್ನು 74 ರಿಂದ 94 ಕ್ಕೆ ಹೆಚ್ಚಿಸುವ ಬಗ್ಗೆ ಯಾವದೇ ಚರ್ಚೆ ಆಗಿಲ್ಲ ಎಂದು ಕಾರ್ಯದರ್ಶಿ ಸೈಕಿಯಾ ಅವರು ಸ್ಪಷ್ಟನೆ ನೀಡಿದರು.













