Last Updated:
ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದು ಮಿನಿ ಅಕ್ಷನ್ (Mini-Auction) ಆಗಿರಲಿದೆ. ಆದರೆ, ಇದರ ಮುಂದಿನ ಆವೃತ್ತಿಯ ಮೆಗಾ ಹರಾಜನ್ನು (Mega Auction) ಮತ್ತೆ ವಿದೇಶದಲ್ಲಿ ನಡೆಸುವ ಸಾಧ್ಯತೆಯಿದೆ.
ಕಳೆದ ಮೂರು ವರ್ಷಗಳಿಂದ ವಿದೇಶಗಳಲ್ಲಿ (ದುಬೈ, ಜೆಡ್ಡಾ ಮತ್ತು ಅಬುಧಾಬಿ) ನಡೆಯುತ್ತಿದ್ದ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯು ಐಪಿಎಲ್ 2027ಕ್ಕೆ ಮತ್ತೆ ಭಾರತಕ್ಕೆ ಮರಳಲಿದೆ. ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದು ಮಿನಿ ಅಕ್ಷನ್ (Mini-Auction) ಆಗಿರಲಿದೆ. ಆದರೆ, ಇದರ ಮುಂದಿನ ಆವೃತ್ತಿಯ ಮೆಗಾ ಹರಾಜನ್ನು (Mega Auction) ಮತ್ತೆ ವಿದೇಶದಲ್ಲಿ ನಡೆಸುವ ಸಾಧ್ಯತೆಯಿದೆ.
ಕೇವಲ ಒಂದು ಸಣ್ಣ ಮಿನಿ ಹರಾಜಿಗಾಗಿ ಇಡೀ ತಂಡ, ಸಹಾಯಕ ಸಿಬ್ಬಂದಿ ಮತ್ತು ಪ್ರತಿನಿಧಿಗಳನ್ನು ವಿದೇಶಕ್ಕೆ ಕರೆದೊಯ್ಯುವುದು ಆರ್ಥಿಕವಾಗಿ ಮತ್ತು ನಿರ್ವಹಣೆಯ ದೃಷ್ಟಿಯಿಂದ ದೊಡ್ಡ ಸವಾಲಾಗಿತ್ತು. ಅಬುಧಾಬಿಯಲ್ಲಿ ನಡೆದ ಕಳೆದ ಹರಾಜಿನ ವೇಳೆ ಫ್ರಾಂಚೈಸಿ ಮಾಲೀಕರು ತಮ್ಮ ಈ ಕಷ್ಟಗಳನ್ನು ಬಿಸಿಸಿಐ ಅಧಿಕಾರಿಗಳ ಮುಂದೆ ತೋಡಿಕೊಂಡಿದ್ದರು. ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಸಿಐ, ಈ ಬಾರಿ ಭಾರತದಲ್ಲೇ ಹರಾಜು ನಡೆಸಲು ಒಪ್ಪಿಕೊಂಡಿದೆ.
ಹರಾಜು ಭಾರತದ ಯಾವ ನಗರದಲ್ಲಿ ನಡೆಯಲಿದೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಭಾರತದಲ್ಲಿ ಮದುವೆಗಳ ಸೀಸನ್ ಜೋರಾಗಿರುವುದರಿಂದ 5-ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್‌ಗಳ ಕೊರತೆ ಇರುತ್ತದೆ. ಈ ಎರಡು ದಿನಗಳ ಹರಾಜು ಪ್ರಕ್ರಿಯೆಗೆ ಫ್ರಾಂಚೈಸಿಗಳು, ಬಿಸಿಸಿಐ ಅಧಿಕಾರಿಗಳು ಮತ್ತು ಬ್ರಾಡ್‌ಕಾಸ್ಟರ್ಸ್‌ಗಾಗಿ ಕನಿಷ್ಠ 100 ಪ್ರೀಮಿಯಂ ರೂಮ್‌ಗಳ ಅಗತ್ಯವಿರುತ್ತದೆ. ಯಾವ ನಗರದಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆಯೋ, ಅಲ್ಲಿ ಹರಾಜು ಆಯೋಜಿಸಲಾಗುತ್ತದೆ.
ಬಹುಚರ್ಚಿತ ‘ಇಂಪ್ಯಾಕ್ಟ್ ಪ್ಲೇಯರ್ ನಿಯಮ’ವನ್ನು ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ಗವರ್ನಿಂಗ್ ಕೌನ್ಸಿಲ್ ಇನ್ನು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಇದರ ಬಗ್ಗೆ ಚರ್ಚಿಸಲು ಮುಂದಿನ ಒಂದು ತಿಂಗಳೊಳಗೆ ಬಿಸಿಸಿಐ ಮತ್ತೊಂದು ಸಭೆ ನಡೆಸಲಿದೆ.
ಹೆಚ್ಚಿನ ಫ್ರಾಂಚೈಸಿಗಳು ಮತ್ತು ಹಿರಿಯ ಆಟಗಾರರು ಈ ನಿಯಮದ ವಿರುದ್ಧವಾಗಿದ್ದಾರೆ, ಏಕೆಂದರೆ ಇದು ಆಲ್‌ರೌಂಡರ್ ಆಟಗಾರರ ಬೆಳವಣಿಗೆಗೆ ಮಾರಕವಾಗಿದೆ. ಆದರೆ, ಕಳೆದ ಮೆಗಾ ಹರಾಜಿನಲ್ಲಿ ಈ ನಿಯಮವನ್ನು ಮನಸ್ಸಿನಲ್ಲಿಟ್ಟುಕೊಂಡೇ ತಂಡವನ್ನು ರಚಿಸಿರುವುದರಿಂದ, ನಿಯಮವನ್ನು ತಕ್ಷಣವೇ ತೆಗೆದುಹಾಕಿದರೆ ತಂಡದ ಸಮತೋಲನ ಬಿಗಡಾಯಿಸುತ್ತದೆ ಎಂದು ಕೆಲವು ತಂಡಗಳು ವಾದಿಸುತ್ತಿವೆ. ಆದ್ದರಿಂದ ಈ ನಿಯಮವನ್ನು ಮುಂದಿನ ಮೆಗಾ ಹರಾಜಿನವರೆಗೆ ಮುಂದುವರಿಸುವುದು ಸೂಕ್ತ ಎಂಬುದು ಅವರ ಸಲಹೆಯಾಗಿದೆ.














