Last Updated:
2023ರ ಏಕದಿನ ವಿಶ್ವಕಪ್ (ODI World Cup) ಮತ್ತು ಟೆಸ್ಟ್ ಚಾಂಪಿಯನ್‌ಶಿಪ್‌ನ (WTC) ವಿನ್ನಿಂಗ್ ಕ್ಯಾಪ್ಟನ್ ಆದ ಪ್ಯಾಟ್ ಕಮಿನ್ಸ್ (Pat Cummins) ಅವರು ಮುಂದಿನ ವರ್ಷ ತಮ್ಮ ದೇಶದ ಪರ ಹೆಚ್ಚು ಪಂದ್ಯಗಳನ್ನು ಆಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) 2027ರ ಐಪಿಎಲ್ ಸೀಸನ್‌ನಿಂದ ಹೊರಗುಳಿಯುವ ಸುಳಿವು ನೀಡಿದ್ದಾರೆ. 2026ರ ಐಪಿಎಲ್‌ನಲ್ಲಿ ಹೈದರಾಬಾದ್ ತಂಡವನ್ನು ಪ್ಲೇ ಆಫ್ ವರೆಗೂ ಮುನ್ನಡೆಸಿದ್ದ ಕಮ್ಮಿನ್ಸ್ ಅವರು ಮುಂದಿನ ವರ್ಷ ತಮ್ಮ ದೇಶದ ಪರ ಆಡಲು ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. 2027ರಲ್ಲಿ ಆಸ್ಟ್ರೇಲಿಯಾ ತಂಡವು ಆ್ಯಷಸ್ ಸೇರಿ ಬ್ಯಾಕ್-ಟು-ಬ್ಯಾಕ್ ಪ್ರಮುಖ ಟೂರ್ನಿಗಳನ್ನು ಆಡಬೇಕಿರುವುದರಿಂದ ತಮ್ಮ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
2027ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ವಿಶ್ವಕಪ್ ಅತ್ಯಂತ ಪ್ರಮುಖವಾಗಿವೆ. ಈ ಬಗ್ಗೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯೊಂದಿಗೆ ಮಾತನಾಡಿರುವ ಕಮ್ಮಿನ್ಸ್, “ಮುಂದಿನ ವರ್ಷದ ವೇಳಾಪಟ್ಟಿ ಬ್ಯುಸಿಯಾಗಿದೆ. ನನಗೆ ಯಾವಾಗಲೂ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ವಿಶ್ವಕಪ್‌ಗಳೇ ಮೊದಲ ಆದ್ಯತೆ. ಭಾರತದ ವಿರುದ್ಧದ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಪೂರ್ತಿ ಆಡಿದರೆ, ಆಶಸ್ ಸರಣಿಗೂ ಮುನ್ನ ನನಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಹಾಗಾಗಿ ಐಪಿಎಲ್‌ನಿಂದ ಬ್ರೇಕ್ ತೆಗೆದುಕೊಳ್ಳಬಹುದು” ಎಂದು ಸುಳಿವು ನೀಡಿದ್ದಾರೆ.
ವರ್ಷದ ಆರಂಭದಲ್ಲೇ ಭಾರತದ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೂ ಮುಂಚೆ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ 150ನೇ ವಾರ್ಷಿಕೋತ್ಸವದ ಟೆಸ್ಟ್ ಪಂದ್ಯ ಒಳಗೊಂಡಿರುವ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
“ಐಪಿಎಲ್‌ನಲ್ಲಿ ಆಡುವ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ಮ್ಯಾನೇಜ್‌ಮೆಂಟ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಗಾಯದ ಸಮಸ್ಯೆಗಳೂ ಇರುವುದರಿಂದ ಸದ್ಯಕ್ಕೆ ಯಾವುದು ರೀತಿಯ ನಿರ್ಧಾರ ಕೈಗೊಂಡಿಲ್ಲ, ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುತ್ತೇನೆ” ಎಂದು ಕಮ್ಮಿನ್ಸ್ ಸ್ಪಷ್ಟಪಡಿಸಿದ್ದಾರೆ.
ಕೇವಲ ತಮಗಷ್ಟೇ ಅಲ್ಲದೆ, ಸಹ ಆಟಗಾರರಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜ಼ಲ್‌ಹುಡ್ ಅವರಿಗೂ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಲಸದ ಒತ್ತಡ ನಿರ್ವಹಣೆಯ ಭಾಗವಾಗಿ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಆಸೀಸ್ ನಾಯಕ ಹೇಳಿದ್ದಾರೆ.
ಪ್ಯಾಟ್ ಕಮಿನ್ಸ್ ಐಪಿಎಲ್ 2027 ರಿಂದ ಹೊರಗುಳಿದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ ನಾಯಕತ್ವವನ್ನು ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಐಪಿಎಲ್ 2026 ಋತುವಿನ ಆರಂಭದಲ್ಲಿ ಕಮಿನ್ಸ್ ಲಭ್ಯವಿಲ್ಲದ ಕೆಲವು ಪಂದ್ಯಗಳಲ್ಲಿ ಇಶಾನ್ ಕಿಶನ್ SRH ಅನ್ನು ಮುಂಚೂಣಿಗೆ ಕರೆದೊಯ್ದರು.
ವರದಿ: ಮದನ್ ಮಲ್ಲೇಶ್
Jun 03, 2026 10:51 PM IST













