Last Updated:
ಹಣಕಾಸು ವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ತಡೆಯಲು, ದಕ್ಷಿಣ ಕೊರಿಯಾವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF), ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಹಲವಾರು ದ್ವಿಪಕ್ಷೀಯ ಸಾಲದಾತರಿಂದ 58.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ತುರ್ತು ರಕ್ಷಣಾ ಪ್ಯಾಕೇಜ್ ಅನ್ನು ಪಡೆದುಕೊಂಡಿತು. ಆ ಸಮಯದಲ್ಲಿ, ಇದು ಐಎಂಎಫ್ ನೇತೃತ್ವದಲ್ಲಿ ಇತಿಹಾಸದಲ್ಲೇ ಒಟ್ಟುಗೂಡಿಸಲಾದ ಅತ್ಯಂತ ಬೃಹತ್ ಬೇಲೌಟ್ (ಹಣಕಾಸು ರಕ್ಷಣೆ) ಪ್ಯಾಕೇಜ್ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿ (Narendra Modi) ಕಳೆದ ತಿಂಗಳು ದೇಶದ ವಿದೇಶಿ ವಿನಿಮಯ ಮೀಸಲು ನಿಧಿ (Foreign exchange Reserves ) ಮತ್ತು ಆರ್ಥಿಕತೆಯನ್ನು ರಕ್ಷಿಸುವ ಉದ್ದೇಶದಿಂದ ಕನಿಷ್ಠ ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ ಎಂದು ದೇಶದ ಜನತೆಗೆ ಕರೆ ನೀಡಿದ್ದರು. ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಹಣಕಾಸು ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಈ ಕರೆಯ ಪ್ರಮುಖ ಕಾರಣವಾಗಿತ್ತು. ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದೆಂಬ ಮುನ್ನೆಚ್ಚರಿಕೆಯ ಕ್ರಮವಾಗಿ ಜನರಿಗೆ ಮೋದಿ ಈ ಕರೆ ನೀಡಿದ್ದರು. ಆದರೆ ಈ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ 90ರ ದಶಕದಲ್ಲಿ ಒಂದು ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗಬಹುದು ಎನ್ನುವ ಸ್ಥಿತಿಗೆ ತಲುಪಿತ್ತು. ಆದರೆ ಆ ದೇಶದ ಜನರು ತೆಗೆದುಕೊಂಡ ಒಂದು ನಿರ್ಧಾರ ಹೇಗೆ ದಿವಾಳಿಯಿಂದ ತಮ್ಮ ರಾಷ್ಟ್ರವನ್ನ ರಕ್ಷಿಸಿತು ಮತ್ತು ಪ್ರಪಂಚದ ಪ್ರಬಲ ಆರ್ಥಿಕ ದೇಶವನ್ನಾಗಿ ಪರಿವರ್ತಿಸಿತು ಎಂಬುದನ್ನ ಈ ಸುದ್ದಿಯಲ್ಲಿ ತಿಳಿಯೋಣ.
ಯಾವುದೇ ಒಂದು ದೇಶ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಸಾಮಾನ್ಯ ನಾಗರಿಕರು ಏನು ಮಾಡಬಹುದು? ಬೆಲೆ ಹೆಚ್ಚಳ, ತೆರಿಗೆ ಹೆಚ್ಚಳದ ವಿರುದ್ಧ ಪ್ರತಿಭಟಿಸಬಹುದು ಅಥವಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಬಹುದು. ಈಗಾಗಲೇ ನಮ್ಮ ಸುತ್ತ ಮುತ್ತಲಿನ ದೇಶಗಳಲ್ಲಿ ನಡೆದಿದೆ. ಕೆಲವು ದೇಶಗಳಲ್ಲಿ ಪ್ರತಿಭಟನೆ ಈಗಲೂ ನಡೆಯುತ್ತಿದೆ. ಆದರೆ, 1998ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಘಟನೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತ್ತು. ದೇಶದ ಸಾಲ ತೀರಿಸಲು ಅಲ್ಲಿನ ಸುಮಾರು 35 ಲಕ್ಷಕ್ಕೂ ಅಧಿಕ ನಾಗರಿಕರು ತಮ್ಮ ಮನೆಯಲ್ಲಿದ್ದ ತಮ್ಮ ಸ್ವಂತ ಚಿನ್ನವನ್ನ ಸ್ವಯಂಪ್ರೇರಿತವಾಗಿ ದೇಣಿಗೆ ನೀಡಿದ್ದರು. ಇದರ ಒಟ್ಟು ಮೌಲ್ಯ ಬರೋಬ್ಬರಿ 227 ಟನ್. ಅಲ್ಲಿನ ಜನರ ಉದಾರತೆಯಿಂದ ದಿವಾಳಿಯಾಗೋದು ತಪ್ಪಿತು. ಅಲ್ಲಿಂದ ಹಿಂದಿರುಗಿ ನೋಡದ ದಕ್ಷಿಣ ಕೊರಿಯಾ ಜಗತ್ತಿನ ಪ್ರಬಲ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದು ನಿಂತಿದೆ.
ಏಷ್ಯಾ ಪ್ರಾದೇಶಿಕ ಏಕೀಕರಣ ಕೇಂದ್ರದ (Asia Regional Integration Centre) ವರದಿ ಪ್ರಕಾರ, 1997ರ ಕೊನೆಯ ಭಾಗದಲ್ಲಿ ಇಡೀ ಆಗ್ನೇಯ ಏಷ್ಯಾ ವಲಯ ತೀವ್ರ ಆರ್ಥಿಕ ಬಿಕ್ಕಟ್ಟಿಗೆ (Asian Financial Crisis) ಸಿಲುಕಿತ್ತು. ಥಾಯ್ಲೆಂಡ್ನಿಂದ ಆರಂಭವಾದ ಈ ಆರ್ಥಿಕ ಸುನಾಮಿ ದಕ್ಷಿಣ ಕೊರಿಯಾವನ್ನು ಧ್ವಂಸಗೊಳಿಸಿತ್ತು. ದೇಶದ ವಿದೇಶಿ ವಿನಿಮಯ ಮೀಸಲು ನಿಧಿ (Foreign Exchange Reserves) ಸಂಪೂರ್ಣವಾಗಿ ಖಾಲಿಯಾಗಿತ್ತು. ಕೊರಿಯಾದ ಕರೆನ್ಸಿ ‘ವನ್’ (Won) ಮೌಲ್ಯ ಪಾತಾಳಕ್ಕೆ ಕುಸಿಯಿತು. ಬೃಹತ್ ಕಂಪನಿಗಳು ದಿವಾಳಿಯಾದವು, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಬೇರೆ ದಾರಿಯಿಲ್ಲದೆ ದಕ್ಷಿಣ ಕೊರಿಯಾ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಯಿಂದ 58 ಬಿಲಿಯನ್ ಅಮೆರಿಕನ್ ಡಾಲರ್ ಸಾಲದ ತುರ್ತು ಪ್ಯಾಕೇಜ್ ಪಡೆಯಲು ಒಪ್ಪಂದ ಮಾಡಿಕೊಂಡಿತು.
ಹಣಕಾಸು ವ್ಯವಸ್ಥೆಯ ಸಂಪೂರ್ಣ ಕುಸಿತವನ್ನು ತಡೆಯಲು, ದಕ್ಷಿಣ ಕೊರಿಯಾವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF), ವಿಶ್ವ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ಹಲವಾರು ದ್ವಿಪಕ್ಷೀಯ ಸಾಲದಾತರಿಂದ 58.4 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ತುರ್ತು ರಕ್ಷಣಾ ಪ್ಯಾಕೇಜ್ ಅನ್ನು ಪಡೆದುಕೊಂಡಿತು. ಆ ಸಮಯದಲ್ಲಿ, ಇದು ಐಎಂಎಫ್ ನೇತೃತ್ವದಲ್ಲಿ ಇತಿಹಾಸದಲ್ಲೇ ಒಟ್ಟುಗೂಡಿಸಲಾದ ಅತ್ಯಂತ ಬೃಹತ್ ಬೇಲೌಟ್ (ಹಣಕಾಸು ರಕ್ಷಣೆ) ಪ್ಯಾಕೇಜ್ ಆಗಿತ್ತು.
ದೇಶದ ಸಾಲವನ್ನು ಬ್ಯಾಂಕಿನಲ್ಲಿರುವ ಹಣದಿಂದ ಮಾತ್ರ ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ದಕ್ಷಿಣ ಕೊರಿಯಾದ ಪ್ರಮುಖ ಸಂಸ್ಥೆಗಳು ಮತ್ತು ಮಾಧ್ಯಮಗಳು ಜಂಟಿಯಾಗಿ ಜನವರಿ 5, 1998 ರಂದು ರಾಷ್ಟ್ರಮಟ್ಟದ “ಚಿನ್ನ ಸಂಗ್ರಹಣೆ ಅಭಿಯಾನ”ಕ್ಕೆ ಚಾಲನೆ ನೀಡಿದವು. ದೇಶದ ಸಾಲವನ್ನು ವಿದೇಶಿ ವಿನಿಮಯ ರೂಪದಲ್ಲಿ ತೀರಿಸಬೇಕಾಗಿದ್ದರಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಲಭವಾಗಿ ನಗದೀಕರಿಸಬಹುದಾದ ಚಿನ್ನವನ್ನು ಒಟ್ಟುಗೂಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಚಿನ್ನದ ಅಭಿಯಾನದ ಕರೆಗೆ ಸ್ಪಂದಿಸಿದ ದಕ್ಷಿಣ ಕೊರಿಯಾದ ನಾಗರಿಕರು, ದೇಶಭಕ್ತಿ ಅಂದರೆ ಏನು ಎಂಬುದನ್ನ ಜಗತ್ತಿಗೆ ತೋರಿಸಿಕೊಟ್ಟರು. ಶ್ರೀಮಂತರಿಂದ ಹಿಡಿದು ತೀರಾ ಸಾಮಾನ್ಯ ಕುಟುಂಬಗಳವರೆಗೆ ಪ್ರತಿಯೊಬ್ಬರೂ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು, ಮದುವೆಯ ಉಂಗುರಗಳನ್ನ ದೇಣಿಗೆ ನೀಡಿದರು. ಲಕ್ಷಾಂತರ ತಾಯಂದಿರು ತಮ್ಮ ಮಕ್ಕಳ ಮೊದಲ ಹುಟ್ಟುಹಬ್ಬದಂದು ಉಡುಗೊರೆಯಾಗಿ ಬಂದ ಉಂಗುರವನ್ನ ದೇಶಕ್ಕಾಗಿ ಧಾರೆ ಎರೆದರು. ದಕ್ಷಿಣ ಕೊರಿಯಾದಲ್ಲಿ ಮಗುವಿನ ಮೊದಲ ಹುಟ್ಟುಹಬ್ಬಕ್ಕೆ (Doljanchi) ಚಿನ್ನದ ಉಂಗುರಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವಿದೆ. ದೇಶದ ಪ್ರಸಿದ್ಧ ಕ್ರೀಡಾಪಟುಗಳು ತಾವು ರಕ್ತ ಬೆವರು ಸುರಿಸಿ ಗೆದ್ದಿದ್ದ ಒಲಿಂಪಿಕ್ ಚಿನ್ನದ ಪದಕಗಳನ್ನು ದೇಶದ ನಿಧಿಗೆ ಅರ್ಪಿಸಿದರು.
ಜನರಷ್ಟೇ ಅಲ್ಲ, ಪ್ರಸಿದ್ಧ ಸಾಮ್ಸಂಗ್, ಹ್ಯುಂಡಯ್ ಮತ್ತು ಎಲ್ಜಿ ಸಂಸ್ಥೆಗಳ ಉದ್ಯೋಗಿಗಳು ಮತ್ತು ಮುಖ್ಯಸ್ಥರು ತಮ್ತಮ್ಮ ಮನೆಯಲ್ಲಿದ್ದ ಹೂಡಿಕೆಯ ಚಿನ್ನದ ಬಾರ್ಗಳನ್ನು ತಂದುಕೊಟ್ಟರು.
Bank Of Korea ಪ್ರಕಾರ ಈ ಅಭಿಯಾನದಲ್ಲಿ ಕೇವಲ ನಾಲ್ಕೇ ತಿಂಗಳುಗಳಲ್ಲಿ (ಜನವರಿಯಿಂದ ಏಪ್ರಿಲ್ 1998) 35 ಲಕ್ಷಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದರು. ಇದು ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 23 ಕ್ಕಿಂತ ಹೆಚ್ಚು ಕುಟುಂಬಗಳನ್ನು ಪ್ರತಿನಿಧಿಸಿತ್ತು. ಈ ಅಭಿಯಾನದಲ್ಲಿ 227 ಮೆಟ್ರಿಕ್ ಟನ್ ಚಿನ್ನ ಸಂಗ್ರಹವಾಗಿತ್ತು. ಅಂದಿನ ಮಾರುಕಟ್ಟೆ ಮೌಲ್ಯದಲ್ಲಿ ಅದು ಸುಮಾರು 2.13 ಶತಕೋಟಿ ಡಾಲರ್ ($2.13 Billion). ಈ ಚಿನ್ನವನ್ನು ಸರ್ಕಾರವು ದೊಡ್ಡ ಬಾರ್ಗಳನ್ನಾಗಿ ಕರಗಿಸಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಿ ದೇಶದ ಐಎಂಎಫ್ ಸಾಲದ ಮೊದಲ ಕಂತುಗಳನ್ನು ಯಶಸ್ವಿಯಾಗಿ ಪಾವತಿಸಿತ್ತು.
ಚಿನ್ನದ ಅಭಿಯಾನವು ಕೇವಲ ಹಣವನ್ನು ಮಾತ್ರ ತರಲಿಲ್ಲ, ಬದಲಿಗೆ ಜಾಗತಿಕ ಹೂಡಿಕೆದಾರರಿಗೆ ದಕ್ಷಿಣ ಕೊರಿಯಾದ ನಾಗರಿಕರ ಒಗ್ಗಟ್ಟು ಮತ್ತು ಸಂಕಲ್ಪದ ಬಲವಾದ ಸಂದೇಶವನ್ನು ರವಾನಿಸಿತ್ತು. ಇದರಿಂದ ಪ್ರಭಾವಿತರಾದ ವಿದೇಶಿ ಕಂಪನಿಗಳು ಮತ್ತೆ ಕೊರಿಯಾದಲ್ಲಿ ಹೂಡಿಕೆ ಮಾಡಲು ಆರಂಭಿಸಿದವು. ಇದರ ಫಲವಾಗಿ, ದಕ್ಷಿಣ ಕೊರಿಯಾವು ಅತಿ ವೇಗವಾಗಿ ಆರ್ಥಿಕ ಸುಧಾರಣೆ ಕಂಡು, ಐಎಂಎಫ್ ನೀಡಿದ್ದ ಗಡುವು ಮುಗಿಯುವುದಕ್ಕಿಂತ ಮೂರು ವರ್ಷ ಮುಂಚಿತವಾಗಿ ಅಂದರೆ ಆಗಸ್ಟ್ 2001 ರಲ್ಲೇ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿತು.













