Last Updated:
ಒಮಾನ್ನ ರಾಸ್ ಅಲ್ ಹಡ್ ಕರಾವಳಿಯಲ್ಲಿ ದೋಣಿಯೊಂದು ಇದ್ದಕ್ಕಿದ್ದಂತೆ ಮಗುಚಿ ಬಿದ್ದಿದೆ. ಅದರಲ್ಲಿ ಹದಿನಾಲ್ಕು ಭಾರತೀಯರು ಇದ್ದರು ಎಂಬ ಮಾಹಿತಿ ಇದ್ದು, ಪರಿಸ್ಥಿತಿಯ ಗಂಭೀರತೆ ಅರಿತ ಅಮೆರಿಕ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ.
ಒಮಾನ್ ಕರಾವಳಿಯಲ್ಲಿ (Oman Coast) ದೋಣಿಯೊಂದು (Ship) ಇದ್ದಕ್ಕಿದ್ದಂತೆ ಮಗುಚಿ ಬಿದ್ದು ದೊಡ್ಡ ದುರಂತ ಸಂಭವಿಸಿದೆ. ಈ ದೋಣಿ ಅಪಘಾತದಲ್ಲಿ 14 ಭಾರತೀಯರ ಜೀವಕ್ಕೆ ಅಪಾಯ ಉಂಟಾಗಿದ್ದು, ರಾಸ್ ಅಲ್ ಹಡ್ ಕರಾವಳಿಯ ಸಮುದ್ರ ಪ್ರದೇಶದಲ್ಲಿ ನಡೆದ ಈ ಅವಘಡ ಸಮುದ್ರಯಾನ ಎಷ್ಟು ಅಪಾಯಕಾರಿಯಾಗಿರಬಹುದು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಸದ್ಯ ಪರಿಸ್ಥಿತಿಯ ಗಂಭೀರತೆ ಅರಿತ ಅಮೆರಿಕ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ.
ಜೂನ್ 14ರ ಬೆಳಿಗ್ಗೆ, ಒಮಾನ್ನ ರಾಸ್ ಅಲ್ ಹಡ್ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲು ದೂರದಲ್ಲಿ ಸಾಂಪ್ರದಾಯಿಕ ದೋಣಿಯೊಂದು ಸಮುದ್ರದಲ್ಲಿ ಇದ್ದಕ್ಕಿದ್ದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಘಟನಮೆ ನಡೆದಿದೆ.
ಈ ದೋಣಿಯಲ್ಲಿ 14 ಭಾರತೀಯರು ಇದ್ದರು ಎಂದು ವರದಿಗಳು ತಿಳಿಸಿವೆ. ದೋಣಿ ನೀರು ಒಳಕ್ಕೆ ಪ್ರವೇಶಿಸಿ, ಯಾವ ಕ್ಷಣದಲ್ಲಾದರೂ ಸಂಪೂರ್ಣವಾಗಿ ಮುಳುಗುವ ಪರಿಸ್ಥಿತಿ ಉಂಟಾಯಿತು. ದೋಣಿಯಲ್ಲಿದ್ದವರು ಸಹಾಯಕ್ಕಾಗಿ ಸಂದೇಶ ಕಳುಹಿಸಿದ ನಂತರ, ತುರ್ತು ಪರಿಸ್ಥಿತಿ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಯುಎಸ್ ನೌಕಾಪಡೆಯ ಪಿ-8 ಕಡಲ ಕಣ್ಗಾವಲು ವಿಮಾನ ಪರಿಸ್ಥಿತಿಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತವಾಯಿತು.
ಈ ವಿಮಾನ ತಕ್ಷಣ ಘಟನಾ ಸ್ಥಳದ ಮೇಲೆ ಹಾರಾಟ ನಡೆಸುತ್ತಾ, ದೋಣಿಯ ಸ್ಥಿತಿ ಮತ್ತು ದೋಣಿಯಲ್ಲಿದ್ದವರ ಸುರಕ್ಷತೆಯನ್ನು ಪರಿಶೀಲಿಸಿದ್ದು, ದೋಣಿ ಸಂಪೂರ್ಣವಾಗಿ ಮುಳುಗುವ ಮುನ್ನವೇ, ವಿಮಾನದಿಂದ ಸಮುದ್ರಕ್ಕೆ ಲೈಫ್ ರಾಫ್ಟ್ ಅನ್ನು ಇಳಿಸಲಾಯಿತು. ದೋಣಿಯಲ್ಲಿದ್ದ 14 ಭಾರತೀಯರು ಕೂಡಲೇ ಆ ಲೈಫ್ ರಾಫ್ಟ್ ಕಡೆಗೆ ಸಾಗಿದ್ದು, ಅದನ್ನು ಹತ್ತಿ ತಮ್ಮ ಜೀವವನ್ನು ಉಳಿಸಿಕೊಂಡರು. ಯುಎಸ್ ನೌಕಾಪಡೆಯ ಅಧಿಕಾರಿಗಳು ತಮ್ಮ ಕಣ್ಗಾವಲು ಸಮಯದಲ್ಲೇ ಈ ದೃಶ್ಯವನ್ನು ದೃಢಪಡಿಸಿದ್ದಾರೆ.
ಈ ನಡುವೆ, ಹತ್ತಿರದಲ್ಲಿದ್ದ ಇತರ ಹಡಗುಗಳಿಗೆ ಸಹಾಯಕ್ಕಾಗಿ ಸಂದೇಶ ಕಳುಹಿಸಲಾಯಿತು. ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಧ್ವಜವನ್ನು ಹೊತ್ತಿರುವ ಎಂವಿ ಜಬಲ್ ಅಲಿ 9 ಎಂಬ ವ್ಯಾಪಾರಿ ಹಡಗಿಗೆ ಯುಎಸ್ ಪಿ-8 ವಿಮಾನದಿಂದಲೇ ಸಂಪರ್ಕಿಸಿ, ರಕ್ಷಣಾ ಕಾರ್ಯಕ್ಕೆ ಸೇರಿಕೊಳ್ಳುವಂತೆ ವಿನಂತಿಸಲಾಯಿತು. ಈ ಹಡಗು ಆ ಸಮಯದಲ್ಲಿ ಸೊಹಾರ್ನಿಂದ ಮುಂಬೈ ಕಡೆಗೆ ಹೊರಟಿತ್ತು. ತುರ್ತು ಕರೆಗೆ ಸ್ಪಂದಿಸಿದ ಈ ಹಡಗು ತನ್ನ ಮಾರ್ಗವನ್ನು ಬದಲಿಸಿಕೊಂಡು, ನೇರವಾಗಿ ಅವಘಡ ನಡೆದ ಸ್ಥಳದ ಕಡೆಗೆ ಬಂದಿದೆ.
ಮೂಲಗಳ ಪ್ರಕಾರ, ಎಂವಿ ಜಬಲ್ ಅಲಿ 9 ಈಗ ಘಟನಾ ಸ್ಥಳದ ಹತ್ತಿರದಲ್ಲೇ ನಂಗಿ, ಲೈಫ್ ರಾಫ್ಟ್ನಲ್ಲಿ ಇದ್ದ 14 ಭಾರತೀಯರನ್ನು ಸಂಪೂರ್ಣ ಸುರಕ್ಷಿತವಾಗಿ ಹಡಗಿಗೆ ಏರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಎಲ್ಲಾ ಹಂತಗಳಲ್ಲಿ ಹಡಗಿನ ಸಿಬ್ಬಂದಿ ಮತ್ತು ಯುಎಸ್ ನೌಕಾಪಡೆಯ ತಂಡ ಪರಸ್ಪರ ಸಮನ್ವಯ ಸಾಧಿಸುತ್ತಿದ್ದಾರೆ. ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ನೌಕಾಪಡೆಗೂ ತಕ್ಷಣ ತಿಳಿಸಲಾಗಿದೆ. ಭಾರತೀಯ ಅಧಿಕಾರಿಗಳು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಮುದ್ರದಲ್ಲಿರುವ ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಅವರು ಸ್ಥಳೀಯ ಅಧಿಕಾರಿಗಳು ಮತ್ತು ಅಂತರರಾಷ್ಟ್ರೀಯ ಸಮುದ್ರ ಭದ್ರತಾ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ದೋಣಿಯಲ್ಲಿದ್ದ ಎಲ್ಲಾ 14 ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ನಂಬಲಾಗುತ್ತಿದೆ. ಆದರೆ, ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರಿದಿದ್ದು, ಎಲ್ಲರನ್ನು ಸಂಪೂರ್ಣವಾಗಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸುವವರೆಗೂ ಯಾವುದೇ ನಿರ್ಲಕ್ಷ್ಯ ಮಾಡದೇ ಕಾರ್ಯ ಚುರುಕುಗೊಳಿಸಲಾಗಿದೆ.
ಈ ಘಟನೆ ಸಮುದ್ರಯಾನದಲ್ಲಿ ಸುರಕ್ಷತಾ ಕ್ರಮಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ಸಾಂಪ್ರದಾಯಿಕ ದೋಣಿಗಳಲ್ಲಿ ಪ್ರಯಾಣಿಸುವಾಗ ಹವಾಮಾನ, ಸಮುದ್ರದ ಸ್ಥಿತಿ, ಲೈಫ್ ಜಾಕೆಟ್, ಲೈಫ್ ರಾಫ್ಟ್ ಮುಂತಾದ ಸುರಕ್ಷತಾ ಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬ ಸಂದೇಶವನ್ನು ಈ ಘಟನೆ ನೀಡುತ್ತದೆ. ಅದೃಷ್ಟವಶಾತ್, ಯುಎಸ್ ನೌಕಾಪಡೆ, ಹತ್ತಿರದ ಹಡಗುಗಳು ಮತ್ತು ಭಾರತೀಯ ನೌಕಾಪಡೆಯ ತ್ವರಿತ ಕ್ರಮದಿಂದ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಎಚ್ಚರಿಕೆ ಮತ್ತು ಬಲವಾದ ನಿಯಮಾವಳಿ ಅಗತ್ಯವಿದೆ.













