Last Updated:
ಮೂರನೇ ಪಂದ್ಯದಲ್ಲಿ ಸೋಲು ಎದುರಾಗಿದ್ದರೂ ಸಹ, ಭಾರತ ತಂಡವು ಮೊದಲ ಎರಡು ಏಕದಿನ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದರಿಂದ ಮೂರು ಪಂದ್ಯಗಳ ಈ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
ಭಾರತ ತಂಡ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶಿಸಿ ಹೀನಾಯ ಸೋಲು ಕಂಡಿದೆ. ನ್ಯೂ ಚಂಡೀಗಢ ಪಿಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ (West Indies) ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ನೀಡಿದ್ದ 352 ರನ್‌ಗಳ ಬೃಹತ್ ಗುರಿಯನ್ನ ಇನ್ನೂ 10 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 351 ರನ್‌ಗಳಿಸಿತ್ತು.
ವಿಂಡೀಸ್ ತಂಡದ ಈ ದಾಖಲೆಯ ಚೇಸಿಂಗ್‌ಗೆ ಪ್ರಮುಖ ಕಾರಣರಾಗಿದ್ದು ನಾಯಕ ಮತ್ತು ವಿಕೆಟ್‌ಕೀಪರ್ ಬ್ಯಾಟರ್ ಶಾಹೀ ಹೋಪ್ ಅವರ ಭರ್ಜರಿ ಶತಕ. ಆರಂಭಿಕ ಆಘಾತದ ಹೊರತಾಗಿಯೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಹೋಪ್, ಭಾರತೀಯ ಬೌಲರ್‌ಗಳ ಬೆವರಿಳಿಸಿದರು. ಕೇವಲ 143 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 162 ರನ್ ಚಚ್ಚಿ ತಂಡವನ್ನು ಗೆಲುವಿನ ದಡದತ್ತ ಮುನ್ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಇವರಿಗೆ ಅಮೂಲ್ಯ ಸಾಥ್ ನೀಡಿದ ಅಮೀರ್ ಜಂಗೂ 67 ರನ್, ಕೀಮೋ ಪಾಲ್ 44, ಗುಡಕೇಶ್ ಮೋತಿ ಅಜೇಯ 19 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಇನ್ನೂ ಭಾರತ ತಂಡ 351 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದ್ದರೂ ಸಹ, ಭಾರತ ತಂಡದ ಬೌಲಿಂಗ್ ವಿಭಾಗ ಸಂಪೂರ್ಣವಾಗಿ ವಿಫಲವಾಯಿತು. ಯುವ ವೇಗಿ ಅನ್ಶುಲ್ ಕಾಂಬೋಜ್ ಅವರು ತಮ್ಮ 9 ಓವರ್‌ಗಳಲ್ಲಿ 82 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು. ಅನುಭವಿಗಳಾದ ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಹಾಗೂ ಗುರ್ನೂರ್ ಬ್ರಾರ್ ಮತ್ತು ನಮನ್ ಧೀರ್ ತಲಾ ಒಂದೊಂದು ವಿಕೆಟ್ ಪಡೆದರಾದರೂ, ವೆಸ್ಟ್ ಇಂಡೀಸ್‌ನ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ಶುಭಮನ್ ಗಿಲ್ (1) ಮತ್ತು ವಿರಾಟ್ ಕೊಹ್ಲಿ (0) ವಿಕೆಟ್ ಕಳೆದುಕೊಂಡಿತು. ಆದರೆ ರೋಹಿತ್ ಶರ್ಮಾ ಕೇವಲ 85 ಎಸೆತಗಳಲ್ಲಿ 92 ರನ್ (10 ಬೌಂಡರಿ, 3 ಸಿಕ್ಸರ್) ಹಾಗೂ ರುತುರಾಜ್ ಗಾಯಕ್ವಾಡ್ 57 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ತದನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕನ್ನಡಿಗ ಕೆ.ಎಲ್. ರಾಹುಲ್ ಕೇವಲ 79 ಎಸೆತಗಳಲ್ಲಿ ಶತಕ ಪೂರೈಸಿ, ಒಟ್ಟಾರೆ 87 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳೊಂದಿಗೆ 129 ರನ್ ಬಾರಿಸಿ ಅಜೇಯರಾಗಿ ಉಳಿದರು. ಇವರಿಗೆ ನಮನ್ ಧೀರ್ 30 ರನ್ ಮತ್ತು ಕೊನೆಯಲ್ಲಿ ಅಂಶುಲ್ ಕಾಂಬೋಜ್ 17 ರನ್ ಗಳಿಸಿ ನೆರವಾದರೆ, ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ 3 ವಿಕೆಟ್ ಪಡೆದು ಮಿಂಚಿದ್ದರು.
ಮೂರನೇ ಪಂದ್ಯದಲ್ಲಿ ಸೋಲು ಎದುರಾಗಿದ್ದರೂ ಸಹ, ಭಾರತ ತಂಡವು ಮೊದಲ ಎರಡು ಏಕದಿನ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದರಿಂದ ಮೂರು ಪಂದ್ಯಗಳ ಈ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.














