Darshan: ಪ್ರದೋಷ್‌ ಮೇಲೆ ಪ್ರಭಾವ ಬೀರ್ತಿದ್ದಾರಾ ಪೊಲೀಸ್ರು? ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ! | | ACTPnews

Darshan: ಪ್ರದೋಷ್‌ ಮೇಲೆ ಪ್ರಭಾವ ಬೀರ್ತಿದ್ದಾರಾ ಪೊಲೀಸ್ರು? ದರ್ಶನ್ ಪರ ವಕೀಲರಿಂದ ಗಂಭೀರ ಆರೋಪ! |


ಪ್ರದೋಷ್ ಗೆ ಪೊಲೀಸರು ಏನು ಹೇಳಬೇಕು ಎಂಬುದನ್ನು ಮುಂಚಿತವಾಗಿಯೇ ಹೇಳಿಕೊಡುತ್ತಿದ್ದಾರೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಮಾಡಿದ್ದಾರೆ. ಈ ಸಂಬಂಧ 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಲಾಗಿದೆ.

ಪ್ರದೋಷ್ ನ ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ನೀಡುತ್ತಿರುವ ವಿಚಾರವನ್ನೂ ದರ್ಶನ್ ಪರ ವಕೀಲರು ಪ್ರಶ್ನಿಸಿದ್ದಾರೆ.ಅಲ್ಲದೆ, ಪ್ರದೋಷ್ ನ ನ್ಯಾಯಾಲಯಕ್ಕೆ ಕರೆತರುವ ಸಂದರ್ಭದಲ್ಲಿ ಊಟದ ವಿರಾಮದ ಸಮಯದಲ್ಲೂ ಅವರ ಹೇಳಿಕೆ ಬಗ್ಗೆ ಮಾತನಾಡಲಾಗುತ್ತಿದೆ ಮತ್ತು ಅವರ ಸಾಕ್ಷ್ಯದ ಮೇಲೆ ಪೊಲೀಸರು ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ಮಾಡಿದ್ದಾರೆ. ಈ ಆರೋಪಗಳ ಆಧಾರದ ಮೇಲೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಎಸ್‌ಪಿಪಿ ಪ್ರಸನ್ನ ಕುಮಾರ್ ನೀಡಿದ ಪ್ರತಿವಾದ

ದರ್ಶನ್ ಪರ ವಕೀಲರ ಆರೋಪಗಳಿಗೆ ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಸೂಚನೆಯಂತೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರದೋಷ್ ನ ಹಿಂಬಾಲಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸರು ಪ್ರದೋಷ್‌ಗೆ ಎಸ್ಕಾರ್ಟ್ ನೀಡುತ್ತಿರುವುದು ನ್ಯಾಯಾಲಯದ ಆದೇಶದಂತೆ ಭದ್ರತೆ ಒದಗಿಸುವ ಉದ್ದೇಶದಿಂದ ಮಾತ್ರ ಎಂದು ಎಸ್‌ಪಿಪಿ ಹೇಳಿದ್ದಾರೆ. ಅವರು ಪೈಲಟ್ ವಾಹನದ ರೀತಿಯಲ್ಲಿ ಮಾತ್ರ ಎಸ್ಕಾರ್ಟ್ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿದೆ.

ಪ್ರದೋಷ್‌ಗೆ ಭದ್ರತೆ ಏಕೆ ಬೇಕು?

ಪ್ರದೋಷ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಭದ್ರತೆ ಅಗತ್ಯವಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಗೆ ದೊಡ್ಡ ಅಭಿಮಾನಿ ಬಳಗವಿರುವುದರಿಂದ ಸಾಕ್ಷಿಯ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಭದ್ರತೆ ನೀಡಲಾಗುತ್ತಿದೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಪ್ರದೋಷ್ ನ ಕರೆತರುವಾಗ ಕಾಮಾಕ್ಷಿಪಾಳ್ಯ ಪೊಲೀಸರ ಎಸ್ಕಾರ್ಟ್ ನೀಡುವಂತೆ ಪ್ರಾಸಿಕ್ಯೂಷನ್ ಸ್ವತಃ ಮನವಿ ಮಾಡಿಲ್ಲ ಎಂದು ಎಸ್‌ಪಿಪಿ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಈ ಎಸ್ಕಾರ್ಟ್ ವ್ಯವಸ್ಥೆ ಅಗತ್ಯವಿಲ್ಲ ಎಂದು ಅನಿಸಿದರೆ, ಕಾಮಾಕ್ಷಿಪಾಳ್ಯ ಪೊಲೀಸರಿಗೆ ಪ್ರದೋಷ್ ಜೊತೆ ಎಸ್ಕಾರ್ಟ್ ನೀಡುವ ಅಗತ್ಯವಿರುವುದಿಲ್ಲ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ಹಾಗೆಯೇ ಪ್ರದೋಷ್ ನ ನ್ಯಾಯಾಲಯಕ್ಕೆ ಕರೆತರುವ ಸಿಆರ್ ಬಸ್‌ನಲ್ಲಿರುವ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮೆರಾ ಧರಿಸಿಕೊಂಡಿರುತ್ತಾರೆ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಚಲನವಲನ ಸೇರಿದಂತೆ ಅಗತ್ಯ ಮಾಹಿತಿಗಳು ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ದಾಖಲಾಗುತ್ತಿವೆ ಎಂದು ಹೇಳಿದ್ದಾರೆ.

ಹೀಗಾಗಿ ಪ್ರದೋಷ್ ಜೊತೆ ಪೊಲೀಸರು ಹೇಗೆ ವರ್ತಿಸುತ್ತಿದ್ದಾರೆ, ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಮತ್ತು ಪೊಲೀಸ್ ಸಿಬ್ಬಂದಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ದಾಖಲೆಗಳು ಲಭ್ಯವಿವೆ ಎಂದು ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಒಟ್ಟಿನಲ್ಲಿ ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರದೋಷ್ ಅವರ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆಯ ನಡುವೆಯೇ ಪೊಲೀಸ್ ಎಸ್ಕಾರ್ಟ್ ಮತ್ತು ಸಾಕ್ಷಿಯ ಮೇಲೆ ಪ್ರಭಾವ ಬೀರಲಾಗಿದೆ ಎಂಬ ಆರೋಪ ಹೊಸ ಚರ್ಚೆಗೆ ಕಾರಣವಾಗಿದೆ. ದರ್ಶನ್ ಪರ ವಕೀಲರು ಪೊಲೀಸ್ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೆ, ಪ್ರಾಸಿಕ್ಯೂಷನ್ ಮಾತ್ರ ಭದ್ರತೆಗಾಗಿ ಮತ್ತು ನ್ಯಾಯಾಲಯದ ಸೂಚನೆಯಂತೆ ಪೊಲೀಸರು ಜೊತೆಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಪ್ರದೋಷ್ ಅವರ ಸಾಕ್ಷ್ಯ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದು ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಬೇಕಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed