Last Updated:
ಮೊದಲ ಏಕದಿನ ಪಂದ್ಯದ ವೇಳೆ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಗಾಯಗೊಂಡಿ ನಿವೃತ್ತಿ ತೆಗೆದುಕೊಂಡಿದ್ದರು. ಅವರ ಬಗ್ಗೆ ಯಾವುದೇ ಅಪ್ಡೇಟ್ ಬಂದಿಲ್ಲದ ಕಾರಣ 2ನೇ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆಯಬಹುದು ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (Team India) ಸತತ 6 ಸೋಲುಗಳ ನಂತರ ಕೊನೆಗೂ ತನ್ನ ಮೊದಲ ಗೆಲುವಿನ ರುಚಿ ಕಂಡಿದೆ. ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ 0-4 ಅಂತರದ ಹೀನಾಯ ಸೋಲನ್ನು ಅನುಭವಿಸಿದ ನಂತರ, ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಅದ್ಭುತ ಕಮ್‌ಬ್ಯಾಕ್ ಮಾಡಿದೆ. ಮಂಗಳವಾರ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು ಆತಿಥೇಯ ಇಂಗ್ಲೆಂಡ್ (India vs England) ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ, ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಏಕದಿನ ತಂಡಕ್ಕೆ ಮರಳಿದ್ದರು.
2023ರ ಏಕದಿನ ವಿಶ್ವಕಪ್ ಫೈನಲ್ ನಂತರ ಜಸ್ಪ್ರೀತ್ ಬುಮ್ರಾ ಆಡಿದ ಮೊದಲ 50 ಓವರ್‌ಗಳ ಪಂದ್ಯ ಇದಾಗಿತ್ತು. ಅವರು ಮೈದಾನಕ್ಕೆ ಇಳಿದ ಕ್ಷಣದಿಂದಲೇ, ಬುಮ್ರಾ ಅವರ ತೀಕ್ಷ್ಣ ಬೌಲಿಂಗ್ ಅವರು ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದರು. ಒಂಬತ್ತು ಓವರ್‌ಗಳನ್ನು ಬೌಲಿಂಗ್ ಮಾಡಿ ಬುಮ್ರಾ, ಕೇವಲ 31 ರನ್‌ಗಳನ್ನು ನೀಡಿದರು. ಬುಮ್ರಾ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರನ್ನು ಕೇವಲ ಒಂದು ರನ್‌ಗೆ ಔಟ್ ಮಾಡುವ ಮೂಲಕ ಆತಿಥೇಯರಿಗೆ ಬಿಗ್ ಶಾಕ್ ನೀಡಿದ್ದರು.
ಆದರೆ, ಬುಮ್ರಾ ಪಂದ್ಯದಲ್ಲಿ ಪ್ರಭಾವ ಬೀರಿದರೂ, ಅನುಭವಿ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ನಿರಾಶೆಯನ್ನುಂಟು ಮಾಡಿದರು. 2027 ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ರೋಹಿತ್ ಶರ್ಮಾ ಅವರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂಬ ವರದಿಗಳ ನಡುವೆ, ಮಾಜಿ ನಾಯಕ ಕೇವಲ 11 ರನ್ (21 ಎಸೆತಗಳು) ಗಳಿಸಿ ಪೆವಿಲಿಯನ್‌ಗೆ ಮರಳಿದರು. ಗಾಯದಿಂದಾಗಿ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದ ವಿರಾಟ್ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಅವರು ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಕೇವಲ ಐದು ರನ್‌ಗಳಿಗೆ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ಆದರೂ ಎರಡನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.
ಈ ಅದ್ಭುತ ಗೆಲುವಿನ ಹೊರತಾಗಿಯೂ, ಭಾರತೀಯ ಶಿಬಿರಕ್ಕೆ ಒಂದು ಪ್ರಮುಖ ಕಳವಳ ಉಂಟಾಗಿದೆ. ಇನ್ನಿಂಗ್ಸ್‌ನ 26 ನೇ ಓವರ್‌ನಲ್ಲಿ, ನಾಯಕ ಶುಭ್ಮನ್ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾಗಿ 80 ರನ್ ಗಳಿಸಿದ್ದಾಗಲೇ ನಿವೃತ್ತರಾದರು. ಗಿಲ್‌ಗೂ ಮೊದಲು, ವೇಗದ ಬೌಲರ್ ಗುರ್ನೂರ್ ಬ್ರಾರ್ ಕೂಡ ಪಂದ್ಯದ ಮಧ್ಯದಲ್ಲಿ ಗಾಯಗೊಂಡಿದ್ದರು. ಇಂಗ್ಲೆಂಡ್ ಇನ್ನಿಂಗ್ಸ್‌ನ 48 ನೇ ಓವರ್‌ನಲ್ಲಿ, ಗುರ್ನೂರ್ ತಮ್ಮ ಬೌಲಿಂಗ್ ರನ್-ಅಪ್ ತೆಗೆದುಕೊಳ್ಳುತ್ತಿದ್ದಾಗ ಇದ್ದಕ್ಕಿದ್ದಂತೆ ನಿಲ್ಲಿಸಿದರು. ಫಿಸಿಯೋ ಪರೀಕ್ಷಿಸಿದ ನಂತರ ಗುರ್ನೂರ್ ಮೈದಾನದಿಂದ ಹೊರ ನಡೆದರು. ನಂತರ ಶುಭಮನ್ ಗಿಲ್ ಓವರ್‌ನ ಉಳಿದ ಎಸೆತಗಳನ್ನು ಬೌಲ್ ಮಾಡಲು ಚೆಂಡನ್ನು ಅಕ್ಷರ್ ಪಟೇಲ್‌ಗೆ ಹಸ್ತಾಂತರಿಸಿದರು. ಹಾಗಾಗಿ ಈ ಇಬ್ಬರು ನಾಳಿನ ಪಂದ್ಯದಲ್ಲಿ ಆಡ್ತಾರಾ ಇಲ್ಲವೋ ಎಂಬುದು ಇನ್ನೂ ನಿಗೂಢವಾಗಿದೆ.
ಗಾಯಗೊಂಡ ಆಟಗಾರರ ಫಿಟ್ನೆಸ್ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಎರಡೂ ಪಂದ್ಯಗಳ ನಡುವೆ ಕೇವಲ ಒಂದು ದಿನದ ಅಂತರವಿರುವುದರಿಂದ, ಗಿಲ್ ಮತ್ತು ಗುರ್ನೂರ್ ಸಮಯಕ್ಕೆ ಸರಿಯಾಗಿ ಫಿಟ್ ಆಗದಿದ್ದರೆ ಭಾರತ ಎರಡನೇ ಏಕದಿನ ಪಂದ್ಯಕ್ಕೆ ಆಡುವ ಹನ್ನೊಂದರ ತಂಡದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಬಹುದು. ಎರಡನೇ ಪಂದ್ಯದಿಂದ ಶುಭ್ಮನ್ ಗಿಲ್ ಹೊರಗುಳಿದರೆ, ರೋಹಿತ್ ಶರ್ಮಾ ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು. ಅಂತಹ ಸನ್ನಿವೇಶದಲ್ಲಿ, ನಾಯಕತ್ವವನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರಿಗೆ ಹಸ್ತಾಂತರಿಸಬಹುದು. ಮತ್ತೊಂದೆಡೆ, ವೇಗದ ಬೌಲರ್ ಗುರ್ನೂರ್ ಬ್ರಾರ್ ಫಿಟ್ ಆಗಿಲ್ಲದಿದ್ದರೆ, ಎಡಗೈ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಅಥವಾ ಯುವ ಪ್ರಿನ್ಸ್ ಯಾದವ್‌ಗೆ ಬಾಗಿಲು ತೆರೆಯಬಹುದು.
ರೋಹಿತ್ ಶರ್ಮಾ, ಶುಭಮನ್ ಗಿಲ್/ ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್ (ವಿಕೀ), ಅಕ್ಷರ್ ಪಟೇಲ್, ಶಿವಂ ದುಬೆ, ಗುರ್ನೂರ್ ಬ್ರಾರ್/ಅರ್ಷ್‌ದೀಪ್ ಸಿಂಗ್, ಜಸ್ಪ್ರಿತ್ ಕೃಷ್ಣ ಮತ್ತು ಪ್ರಸಿದ್ಧ್ ಕೃಷ್ಣ
IND vs ENG: ಗಿಲ್ ಔಟ್, ಇಶಾನ್ ಇನ್? ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮಹತ್ವದ ಬದಲಾವಣೆ! ಪ್ಲೇಯಿಂಗ್ XI ಹೀಗಿರಲಿದೆ












