Last Updated:
ಅಭಿಷೇಕ್ ಶರ್ಮಾ 43, ಶ್ರೇಯಸ್ ಅಯ್ಯರ್ 37 ಹಾಗೂ ಇಶಾನ್ ಕಿಶನ್ ಅವರ 49 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 190 ರನ್ಗಳ ಸವಾಲಿನ ಮೊತ್ತ ದಾಖಲಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಸ್ಫೋಟಕ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ರನ್ ಬಾರದ ಕಾರಣ 200ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಭಿಷೇಕ್ ಶರ್ಮಾ 43, ಶ್ರೇಯಸ್ ಅಯ್ಯರ್ 37 ಹಾಗೂ ಇಶಾನ್ ಕಿಶನ್ ಅವರ 49 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 190 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಟಾಸ್ ಗೆದ್ದ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ನೀಡಿದರು. 4.5 ಓವರ್ ಇಬ್ಬರೂ 50 ರನ್ಗಳ ಜೊತೆಯಾಟ ನೀಡಿದರು. ಆದರೆ ಈ ಇಬ್ಬರೂ ಬ್ಯಾಟ್ಸ್ ಮನ್ ಗಳು ಪವರ್ ಪ್ಲೇ ಒಳಗೆ ಪೆವಿಲಿಯನ್ ಗೆ ಮರಳಿದರು. ವೈಭವ್ ಸೂರ್ಯವಂಶಿ 10 ಎಸೆತಗಳಲ್ಲಿ 14 ರನ್ ಗಳಿಸಿ ವಿಲ್ ಜಾಕ್ಸ್ಗೆ ವಿಕೆಟ್ ಒಪ್ಪಿಸಿದರೆ, ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 43 ರನ್ ಗಳಿಸಿ ಸ್ಯಾಮ್ ಕರ್ರನ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಒಂದಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ 3ನೇ ವಿಕೆಟ್ ಜೊತೆಯಾಟದಲ್ಲಿ 65 ರನ್ಗಳಿಸಿ ಚೇತರಿಕೆ ನೀಡಿದರು. ಅಯ್ಯರ್ 22 ಎಸೆತಗಳಲ್ಲಿ 37 ರನ್ ಗಳಿಸಿ ಲಿಯಾಮ್ ಡಾಸೆನ್ಗೆ ವಿಕೆಟ್ ಒಪ್ಪಿಸಿದರು. ಅಯ್ಯರ್ ವಿಕೆಟ್ ಬೀಳುತ್ತಿದ್ದಂತೆ ಭಾರತದ ರನ್ಗತಿಗೆ ಕಡಿವಾಣ ಬಿದ್ದಿತು. ಅಷ್ಟೇ ಅಲ್ಲ, ಸತತ ವಿಕೆಟ್ ಕೂಡ ಕಳೆದುಕೊಂಡಿತು. 5ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ 7 ಎಸೆತಗಳಲ್ಲಿ 5 ರನ್ಗಳಿಸಿ ಔಟ್ ಆದರೆ, ಇಶಾನ್ ಕಿಶನ್ 40 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಕೇವಲ 49 ರನ್ಗಳಿಸಿ ಸ್ಯಾಮ್ ಕರ್ರನ್ಗೆ 3ನೇ ಬಲಿಯಾದರು.
ಕೊನೆಯ ಓವರ್ನಲ್ಲಿ ಅಬ್ಬರಿಸಿದ ತಿಲಕ್ ವರ್ಮಾ 11 ಎಸೆತಗಳಲ್ಲಿ ಅಜೇಯ 24 ರನ್ಗಳಿಸಿ ತಂಡದ ಮೊತ್ತವನ್ನ 190ಕ್ಕೆ ತಂದು ನಿಲ್ಲಿಸಿದರು. ಹರ್ಷಿತ್ ರಾಣಾ 3 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 6 ರನ್ ಗಳಿಸಿ ಕೊನೆಯ ಎಸೆತದಲ್ಲಿ ಔಟ್ ಆದರು.
ಇಂಗ್ಲೆಂಡ್ ಪರ 32ಕ್ಕೆ3, ಸ್ಯಾಮ್ ಕರ್ರನ್ 29ಕ್ಕೆ3, ಲಿಯಾಮ್ ಡಾಸೆನ್ 27ಕ್ಕೆ1, ವಿಲ್ ಜಾಕ್ಸ್ 22ಕ್ಕೆ1, ಜೋಫ್ರಾ ಆರ್ಚರ್ 40ಕ್ಕೆ1 ವಿಕೆಟ್ ಪಡೆದರು.













