Last Updated:
ಲಾರ್ಡ್ಸ್‌ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿಜಾಕೋಬ್ ಬೆಥೆಲ್ ಮತ್ತು ಬೆನ್ ಡಕೆಟ್ ಭಾರತದ ವಿರುದ್ಧ 192 ರನ್‌ಗಳ ಅದ್ಭುತ ಜೊತೆಯಾಟ ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಭಾನುವಾರ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅದ್ಭುತ ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ದಾಖಲಿಸಿದೆ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತೀಯ ಬೌಲರ್ಗಳನ್ನ ಇನ್ನಿಂಗ್ಸ್ ಪೂರ್ತಿ ಬೆಂಡೆತ್ತಿದ್ದರು. ಜೇಕಬ್ ಬೆಥೆಲ್ 91, ಬೆನ್ ಡಕೆಟ್ 141, ಜೋ ರೂಟ್ ಅಜೇಯ 74 ಹಾಗೂ ಬಟ್ಲರ್ ಅಜೇಯ 41 ರನ್‌ಗಳ ನೆರವಿನಿಂದ ಅತಿಥೇಯ ತಂಡ 50 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಈಗಾಗಲೇ ಟಿ20 ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಏಕದಿನ ಸರಣಿ ಗೆದ್ದು ಗೌರವ ಉಳಿಸಿಕೊಳ್ಳುವುದಕ್ಕೆ ಈ ಪಂದ್ಯದಲ್ಲಿ ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನಟ್ಟಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರರು ಅತ್ಯುತ್ತಮ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದ 181 ಎಸೆತಗಳಲ್ಲಿ ಮೊದಲ ವಿಕೆಟ್‌ಗೆ 192 ರನ್‌ಗಳನ್ನು ಸೇರಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್‌ನ ಯಾವುದೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ಜೊತೆಯಾಟವಾಗಿದೆ. ಈ ಜೊತೆಯಾಟದ ಮೂಲಕ ಬೆಥೆಲ್ ಮತ್ತು ಡಕೆಟ್ ದಿಗ್ಗಜರಾದ ಜೋ ರೂಟ್ ಮತ್ತು ಇಯಾನ್ ಮಾರ್ಗನ್ ಅವರ ದಾಖಲೆಯನ್ನು ಬ್ರೇಕ್ ಮಾಡಿದರು. 2018 ರಲ್ಲಿ ಲೀಡ್ಸ್‌ನಲ್ಲಿ ಭಾರತದ ವಿರುದ್ಧ ರೂಟ್ ಮತ್ತು ಮಾರ್ಗನ್ 189 ರನ್ ಗಳ ಜೊತೆಯಾಟವಾಡಿದ್ದರು. 2002ರಲ್ಲಿ ಲಾರ್ಡ್ಸ್‌ನಲ್ಲಿ ಭಾರತದ ವಿರುದ್ಧ ಎರಡನೇ ವಿಕೆಟ್ ಗೆ ಮಾರ್ಕಸ್ ಟ್ರೆಸ್ಕೊಥಿಕ್ ಮತ್ತು ನಾಸರ್ ಹುಸೇನ್ 185 ರನ್ ಗಳ ಜೊತೆಯಾಟವಾಡಿದ್ದದ್ದು ಈ ಹಿಂದಿನ ದಾಖಲೆಗಳಾಗಿದ್ದವು.
ಮೊದಲ ಎರಡು ಪಂದ್ಯಗಳಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದ 22 ವರ್ಷದ ಬೆಥೆಲ್, ಅಂತಿಮ ಏಕದಿನ ಪಂದ್ಯದಲ್ಲಿ ಶತಕ ಗಳಿಸುವ ಅವಕಾಶವನ್ನು ಕೇವಲ 9 ರನ್ಗಳಿಂದ ಕಳೆದುಕೊಂಡರು. ಅವರು 92 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಬಾರಿಸಿದರು. ಡಕೆಟ್ 109 ಎಸೆತಗಳಲ್ಲಿ 15 ಬೌಂಡರಿಗಳ ನೆರವಿನಿಂದ ಶತಕ ಪೂರೈಸಿದರು. ಇದು ಅವರ ನಾಲ್ಕನೇ ಏಕದಿನ ಶತಕವಾಗಿದೆ. ಒಟ್ಟಾರೆ 135 ಎಸೆತಗಳಲ್ಲಿ 18 ಬೌಂಡರಿ, 1 ಸಿಕ್ಸರ್ ಸಹಿತ 141 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಗಮನಾರ್ಹವಾಗಿ, ಇಂಗ್ಲೆಂಡ್ ಆರಂಭಿಕರು ಲಾರ್ಡ್ಸ್‌ನಲ್ಲಿ 100 ಕ್ಕೂ ಹೆಚ್ಚು ರನ್ ಗಳ ಜೊತೆಯಾಟವನ್ನು ಹಂಚಿಕೊಂಡಿರುವುದು 16 ವರ್ಷಗಳಲ್ಲಿ ಇದೇ ಮೊದಲು. ಬೆಥೆಲ್ ಮತ್ತು ಡಕೆಟ್ ಗಿಂತ ಮೊದಲು, ಆಂಡ್ರ್ಯೂ ಸ್ಟ್ರಾಸ್ ಮತ್ತು ಸ್ಟೀವನ್ ಡೇವಿಸ್ ಜೋಡಿ ಈ ಸಾಧನೆ ಮಾಡಿತು. 2010ರಲ್ಲಿ ಪಾಕಿಸ್ತಾನ ವಿರುದ್ಧ ಈ ಇಬ್ಬರೂ 113 ರನ್‌ಗಳ ಆರಂಭಿಕ ಜೊತೆಯಾಟ ಹಂಚಿಕೊಂಡಿದ್ದರು. 2023 ರ ODI ವಿಶ್ವಕಪ್‌ನಲ್ಲಿ ಧರ್ಮಶಾಲಾದಲ್ಲಿ ಬಾಂಗ್ಲಾದೇಶ ವಿರುದ್ಧ ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲನ್ ಅವರ ಶತಕದ ಪಾಲುದಾರಿಕೆಯ ನಂತರ ಇದು ಇಂಗ್ಲೆಂಡ್‌ನ ODIಗಳಲ್ಲಿ ಬಂದ 100 ಕ್ಕೂ ಹೆಚ್ಚು ರನ್‌ಗಳ ಮೊದಲ ಆರಂಭಿಕ ಜೊತೆಯಾಟವಾಗಿದೆ. ಲಾರ್ಡ್ಸ್‌ನಲ್ಲಿ ನಡೆದ ODI ಪಂದ್ಯದಲ್ಲಿ ಬೆಥೆಲ್ ಮತ್ತು ಡಕೆಟ್ ಯಾವುದೇ ವಿಕೆಟ್‌ಗೆ ನಾಲ್ಕನೇ ಅತ್ಯಧಿಕ ಜೊತೆಯಾಟ ದಾಖಲಿಸಿದ್ದಾರೆ.
226 ಆಂಡ್ರ್ಯೂ ಸ್ಟ್ರಾಸ್ – ಆಂಡ್ರ್ಯೂ ಫ್ಲಿಂಟಾಫ್ vs ವೆಸ್ಟ್ ಇಂಡೀಸ್ 2004 (4ನೇ ವಿಕೆಟ್)
213 ಗ್ರೇಮ್ ಹಿಕ್ – ನೀಲ್ ಫೇರ್‌ಬ್ರದರ್ vs ವೆಸ್ಟ್ ಇಂಡೀಸ್ 1991 (3ನೇ ವಿಕೆಟ್)
202 ಗ್ರಹಾಂ ಗೂಚ್ – ಡೇವಿಡ್ ಗೋವರ್ vs ಆಸ್ಟ್ರೇಲಿಯಾ 1985 (2ನೇ ವಿಕೆಟ್)
192 ಬೆನ್ ಡಕೆಟ್ – ಜೇಕಬ್ ಬೆಥೆಲ್ vs ಭಾರತ 2026 (1ನೇ ವಿಕೆಟ್)
IND vs ENG ODIಗಳಲ್ಲಿ ಅತ್ಯಧಿಕ ಮೊದಲ ವಿಕೆಟ್ ಜೊತೆಯಾಟ
192* ಬೆನ್ ಡಕೆಟ್ – ಜಾಕೋಬ್ ಬೆಥೆಲ್, ಲಾರ್ಡ್ಸ್ 2026
160 ಜೇಸನ್ ರಾಯ್ – ಜಾನಿ ಬೈರ್‌ಸ್ಟೋವ್, ಎಡ್ಜ್‌ಬಾಸ್ಟನ್ 2019
158 ಅಲಾಸ್ಟೇರ್ ಕುಕ್ – ಇಯಾನ್ ಬೆಲ್, ರಾಜ್‌ಕೋಟ್ 2013
135 ಜೇಸನ್ ರಾಯ್ – ಜಾನಿ ಬೈರ್‌ಸ್ಟೋವ್, ಪುಣೆ 2021














