Last Updated:
ಹಂಬಂಟೋಟದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 47.2 ಓವರ್ಗಳಲ್ಲಿ 285 ರನ್ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸರಣಿಯನ್ನ 1-1ರಲ್ಲಿ ಸಮಬಲ ಸಾಧಿಸಿತು.
ಭಾರತದ ಲೆಜೆಂಡರಿ ಬ್ಯಾಟರ್ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಅನ್ವಯ್ ದ್ರಾವಿಡ್ (Anvay Dravid), ಸೋಮವಾರ ಶ್ರೀಲಂಕಾ ಅಂಡರ್ -19 ವಿರುದ್ಧ (India U19 vs Sri Lanka U9) ನಡೆದ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ಭಾರತ ಅಂಡರ್ -19 ತಂಡದ ಪರ ಕಣಕ್ಕಿಳಿದು ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 67 ಎಸೆತಗಳನ್ನೆದುರಿಸಿದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ತಮ್ಮ ಒಂದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳ ನೆರವಿನೊಂದಿಗೆ 87 ರನ್ ಗಳಿಸಿದರು. ಆದರೂ ಇವರ ಹೋರಾಟದ ಆಟ ಭಾರತಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 285 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತು. ಆದರೆ ಶ್ರೀಲಂಕಾ ಎಂಟು ವಿಕೆಟ್ಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು.
ಹಂಬಂಟೋಟದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 47.2 ಓವರ್ಗಳಲ್ಲಿ 285 ರನ್ಗಳಿಗೆ ಆಲೌಟ್ ಆಯಿತು. ಪ್ರವಾಸಿ ತಂಡ ಇನ್ನಿಂಗ್ಸ್ ಆರಂಭಿಸಿ 11 ರನ್ಗಳಿಸುವಷ್ಟರಲ್ಲೇ ಇಬ್ಬರು ಆರಂಭಿಕರನ್ನು ಕಳೆದುಕೊಂಡಿತು. ನಂತರ ಕುಶಾಗ್ರ ಓಜಾ ಹಾಗೂ ವಿ.ಕೆ. ವಿನೀತ್ ಮೂರನೇ ವಿಕೆಟ್ಗೆ 81 ಎಸೆತಗಳಲ್ಲಿ 67 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು.
ವಿನೀತ್ 45 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 24 ರನ್ ಗಳಿಸಿ ಔಟಾದರು. ನಂತರ ಅನ್ವಯ್ ದ್ರಾವಿಡ್ ಬ್ಯಾಟಿಂಗ್ಗೆ ಇಳಿದರು. ಅರ್ಜುನ್ ರಜಪೂತ್ ಜೊತೆ ಸೇರಿ 5ನೇ ವಿಕೆಟ್ಗೆ 126 ಎಸೆತಗಳಲ್ಲಿ 144 ರನ್ ಗಳಿಸಿ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಅರ್ಜುನ್ 81 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 76 ರನ್ ಗಳಿಸಿ ಔಟಾದರು. ಅನ್ವಯ್ 87 ರನ್ ಗಳಿಸಿ 13 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ದ್ರಾವಿಡ್ 44ನೇ ಓವರ್ನಲ್ಲಿ ಔಟ್ ಆದರು. ಆದರೆ ಮುಂದಿನ 3 ವಿಕೆಟ್ ಕೇವಲ 22 ರನ್ಗಳಾಗುವಷ್ಟರಲ್ಲಿ ಕಳೆದುಕೊಂಡಿತು.
ಶ್ರೀಲಂಕಾ ತಂಡದ ಪರ ಗಿಮಾನ್ ಮೆಂಡಿಸ್ 8.2 ಓವರ್ಗಳಲ್ಲಿ 41 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದರೆ, ಕವಿಜಾ ಗಮಾಗೆ 2 ವಿಕೆಟ್ ಪಡೆದರು. ಸೇಥ್ಮಿಕಾ ಸೆನೆವಿರತ್ನೆ ಒಂದು ವಿಕೆಟ್ ಪಡೆದರು.
286 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 48 ಓವರ್ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ತಂಡವು 25 ರನ್ಗಳಿಗೆ ದುಲ್ನಿತ್ ಸಿಗೇರಾ (14) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತ್ತು. ಆದರೆ ಆರಂಭಿಕ ದಿಮಂತ ಮಹಾವಿಥಾನ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೆನುಜಾ ವೆಕುನಗೋಡ ಅವರೊಂದಿಗೆ ಎರಡನೇ ವಿಕೆಟ್ಗೆ 103 ರನ್ಗಳ ಜೊತೆಯಾಟ ನೀಡಿ ಗೆಲುವಿಗೆ ಅಡಿಪಾಯ ಹಾಕಿದರು. ಸೆನುಜಾ 64 ಎಸೆತಗಳಲ್ಲಿ 2 ಸಿಕ್ಸರ್ಗಳು ಮತ್ತು 4 ಬೌಂಡರಿಗಳೊಂದಿಗೆ 60 ರನ್ ಗಳಿಸಿದ ಪೆವಿಲಿಯನ್ ಸೇರಿಕೊಂಡರು.
ಆದರೆ ನಂತರ ನಂದ ನಾಯಕ ವಿಮತ್ ದಿನಸಾರ ಅವರೊಂದಿಗೆ ದಿಮಂತ ಜೊತೆಗೆ ಮೂರನೇ ವಿಕೆಟ್ಗೆ 135 ಎಸೆತಗಳಲ್ಲಿ ಮುರಿಯದ 163 ರನ್ಗಳನ್ನು ಕಲೆಹಾಕಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ನಾಯಕ ದಿನಸಾರ 60 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 56 ರನ್ಗಳೊಂದಿಗೆ ಅಜೇಯರಾಗಿ ಉಳಿದರೆ, ದಿಮಂತ 153 ಎಸೆತಗಳಲ್ಲಿ 5 ಬೌಂಡರಿಗಳು ಮತ್ತು 12 ಸಿಕ್ಸರ್ಗಳೊಂದಿಗೆ 155 ರನ್ಗಳ ಅಜೇಯ ಇನ್ನಿಂಗ್ಸ್ ಆಡಿ ಗೆಲುವಿನ ರೂವಾರಿಯಾದರು. ಭಾರತೀಯ ಪಾಳಯದಿಂದ ಇಶಾನ್ ಸೂದ್ ಮತ್ತು ನಾಯಕ ಯಶವರ್ಧನ್ ಚೌಹಾಣ್ ತಲಾ 1 ವಿಕೆಟ್ ಪಡೆದರು.
2ನೇ ಪಂದ್ಯವನ್ನ ಶ್ರೀಲಂಕಾ ಗೆಲ್ಲುತ್ತಿದ್ದಂತೆ ಮೂರು ಪಂದ್ಯಗಳ ಸರಣಿ ಈಗ 1-1 ರಲ್ಲಿ ಸಮಬಲಗೊಂಡಿದೆ. ಸರಣಿಯ ಅಂತಿಮ ಪಂದ್ಯವು ಜುಲೈ 9 ರಂದು ಇದೇ ಸ್ಥಳದಲ್ಲಿ ನಡೆಯಲಿದೆ. ಇದರ ನಂತರ ಜುಲೈ 13 ರಿಂದ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ನಡೆಯಲಿವೆ.
Jul 06, 2026 10:48 PM IST













