Last Updated:
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2026ರ 66ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 89 ರನ್ಗಳ ಬೃಹತ್ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ತನ್ನ 2ನೇ ಸ್ಥಾನವನ್ನ ಮತ್ತಷ್ಟು ಭದ್ರಗೊಳಿಸಿಕೊಂಡಿತು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ 2026ರ 66ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 89 ರನ್ಗಳ ಬೃಹತ್ ಜಯ ಸಾಧಿಸಿದೆ. ಇದು ಉಭಯ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯವಾಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ತವರಿನ ಮೈದಾನದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 229 ರನ್ಗಳಿಸಿತ್ತು. 230 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 13.4 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 140 ರನ್ಗಳಿಗೆ ಆಲೌಟ್ ಆಗುವ ಮೂಲಕ 89 ರನ್ಗಳ ಹೀನಾಯ ಸೋಲು ಕಂಡಿತು. ಸಿಎಸ್ಕೆ ಈ ಸೋಲಿನೊಂದಿಗೆ ಟೂರ್ನಿಯಿಂದ 3ನೇ ತಂಡವಾಗಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು. ಇತ್ತ ಜಿಟಿ ಬೃಹತ್ ಜಯದೊಂದಿಗೆ ತನ್ನ 2ನೇ ಸ್ಥಾನವನ್ನ ಮತ್ತಷ್ಟು ಬಲಿಷ್ಠಗೊಳಿಸಿಕೊಂಡಿತು.
230 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಸಿಎಸ್ಕೆ ಕಳಪೆ ಆರಂಭ ಪಡೆಯಿತು. ಪವರ್ ಪ್ಲೇನಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮನ್ಸ್ ಸಿರಾಜ್ ಬೌಲಿಂಗ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಗೋಲ್ಡನ್ ಡಕ್ ಆದರು. ನಾಯಕ ರುತುರಾಜ್ ಗಾಯಕ್ವಾಡ್ 7 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 16 ರನ್ಗಳಿಸಿ ಸಿರಾಜ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಉರ್ವಿಲ್ ಪಟೇಲ್ 2 ಎಸೆತಗಳಲ್ಲಿ ಡಕ್ ಆದರು.
ಆರಂಭಿಕನಾಗಿ ಬಡ್ತಿ ಪಡೆದು ಬಂದಿದ್ದ ಮ್ಯಾಥ್ಯೂ ಶಾರ್ಟ್ 14 ಎಸೆತಗಳಲ್ಲಿ 24 ರನ್ಗಳಿಸಿ ರಬಾಡ ಬೌಲಿಂಗ್ನಲ್ಲಿ 16 ರನ್ಗಳಿಸಿ ಔಟ್ ಆದರು. 5.1 ಓವರ್ಗಳಲ್ಲಿ ಸಿಎಸ್ಕೆ 51ಕ್ಕೆ 4 ವಿಕೆಟ್ ಕಳೆದಿಕೊಂಡಿತು. ನಂತರ 7ನೇ ಓವರ್ನಲ್ಲಿ ಕಾರ್ತಿಕ್ ಶರ್ಮಾ ರನ್ಔಟ್ ಆದರು. ಕಾರ್ತಿಕ್ ಶರ್ಮಾ 15 ಎಸೆತಗಳಲ್ಲಿ 19 ರನ್ಗಳಿಸಿ ರನ್ಔಟ್ ಆದರು.
6ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ದುಬೆ ಹಾಗೂ ಬ್ರೆವಿಸ್ 21 ಎಸೆತಗಳಲ್ಲಿ 53 ರನ್ಗಳ ಜೊತೆಯಾಟ ನೀಡಿದರು. ದುಬೆ ಅಬ್ಬರದ ಬ್ಯಾಟಿಂಗ್ ಮಾಡಿ 17 ಎಸೆತಗಳಲ್ಲಿ ತಲಾ 4 ಬೌಂಡರಿ, 4 ಸಿಕ್ಸರ್ಗಳ ಸಹಿತ 47 ರನ್ಗಳಿಸಿದರು. ದುಬೆ ವಿಕೆಟ್ ಬಳಿಕ ಸಿಎಸ್ಕೆ ದಿಢೀರ್ ಕುಸಿತ ಕಂಡಿತು. ಕಾಂಬೋಜ್ 8 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 19 ರನ್, ಡೆವಾಲ್ಡ್ ಬ್ರೆವಿಸ್ ರನ್ಗಳಿಸಲು ಪರದಾಡಿ 10 ಎಸೆತಗಳಲ್ಲಿ ಕೇವಲ 8 ರನ್ಗಳಿಸಿ ರಶೀದ್ ಖಾನ್ಗೆ ವಿಕೆಟ್ ಒಪ್ಪಿಸಿದರು.
ನೂರ್ ಅಹ್ಮದ್ 1 ಹಾಗೂ ಸ್ಪೆನ್ಸರ್ ಜಾನ್ಸನ್ ಖಾತೆ ತೆರೆಯದೇ ರಬಾಡ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಜಿಟಿ ಬೌಲರ್ಗಳ ದಾಳಿಗೆ ಸಿಲುಕಿದ ಸಿಎಸ್ಕೆ ಕೇವಲ 13.4 ಓವರ್ಗಳಲ್ಲೇ 140 ರನ್ಗಳಿಗೆ ಆಲೌಟ್ ಆಗಿ 89 ರನ್ಗಳ ಸೋಲು ಕಂಡಿತು. ಅಲ್ಲದೆ ಟೂರ್ನಿಯಿಂದ 3ನೇ ಅಧಿಕೃತ ತಂಡವಾಗಿ ಹೊರಬಿದ್ದಿತು.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಸಿರಾಜ್ 26ಕ್ಕೆ3, ಕಗಿಸೋ ರಬಾಡ 32ಕ್ಕೆ3 ಹಾಗೂ ರಶೀದ್ ಖಾನ್ 18ಕ್ಕೆ3 ವಿಕೆಟ್ ಪಡೆದು ಬೃಹತ್ ಜಯಕ್ಕೆ ಕಾರಣರಾದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್ಗಳಲ್ಲಿ 125 ರನ್ಗಳ ಜೊತೆಯಾಟ ನೀಡಿದರು. ಆರಂಭದಿಂದ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 64 ರನ್ಗಳಿಸಿ ಸ್ಪೆನ್ಸರ್ ಜಾನ್ಸನ್ ಬೌಲಿಂಗ್ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಬಂದ ಜೋಸ್ ಬಟ್ಲರ್ 2ನೇ ವಿಕೆಟ್ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 82 ರನ್ಗಳಿಸಿತು. ಆರಂಭದಲ್ಲಿ ಪರದಾಡಿದ ಸುದರ್ಶನ್ ನಂತರ ರಿದಮ್ ಕಂಡುಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಟ್ಟಾರೆ 53 ಎಸೆತಗಳನ್ನಾಡಿದ ಅವರು 7 ಬೌಂಡರಿ, 4 ಸಿಕ್ಸರ್ಗಳ ಸಹಿತ 84 ರನ್ಗಳಿಸಿ ಕಾಂಬೋಜ್ ಬೌಲಿಂಗ್ನಲ್ಲಿ ಮ್ಯಾಥ್ಯೂ ಶಾರ್ಟ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 57 ರನ್ಗಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಅಜೇಯ 7 ರನ್ಗಳಿಸಿದರು. ಸಿಎಸ್ಕೆ ಪರ ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಹಾಗೂ ಸ್ಪೆನ್ಸರ್ ಜಾನ್ಸನ್ ತಲಾ 1 ವಿಕೆಟ್ ಪಡೆದರು.
89 ರನ್ಗಳ ಬೃಹತ್ ಜಯದೊಂದಿಗೆ ಗುಜರಾತ್ ಟೈಟನ್ಸ್ 18 ಅಂಕ ಪಡೆಯಿತಲ್ಲದೆ, ತನ್ನ ನೆಟ್ರನ್ ರೇಟ್ ಉತ್ತಮಗೊಳಿಸಿಕೊಂಡಿತು. ಈ ಪಂದ್ಯಕ್ಕೂ ಮುನ್ನ 0.400 ಇದ್ದ ನೆಟ್ರನ್ ರೇಟ್ ಈ ಪಂದ್ಯದ ಬಳಿಕ 0.695ಗೆ ಏರಿಕೆಯಾಗಿದೆ. ಈ ಮೂಲಕ ತನ್ನ 2ನೇ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಸನ್ರೈಸರ್ಸ್ಗೆ 18 ಅಂಕಗಳಿಸುವ ಅವಕಾಶ ಇದ್ದರೂ, ನೆಟ್ರನ್ ರೇಟ್ ಹೆಚ್ಚಿಸಿಕೊಳ್ಳಲು ಆರ್ಸಿಬಿ ವಿರುದ್ಧ 100ಕ್ಕೂ ಹೆಚ್ಚು ರನ್ಗಳಿಂದ ಸೋಲಿಸಬೇಕು. ಆಗ ಮಾತ್ರ ಮೊದಲ ಅಥವಾ 2ನೇ ಸ್ಥಾನ ಪಡೆಯಲಿದೆ. ಸಣ್ಣ ಅಂತರದ ಗೆದ್ದರೂ 3ನೇ ಸ್ಥಾನದಲ್ಲೇ ಉಳಿಯಲಿದೆ.
May 21, 2026 11:08 PM IST













