Last Updated:
ತಲೆ ಕತ್ತರಿಸಿದ ಮೇಕೆಯನ್ನು ಹತ್ತಿರದ ಕೋಳಿ ಕೇಂದ್ರದಲ್ಲಿ ಕ್ಲೀನ್ ಮಾಡಿಸಿ ನಂತರ ಬಿರಿಯಾನಿ ಮಾಡಿ ಠಾಣೆಯ ಎಲ್ಲಾ ಸಿಬ್ಬಂದಿಗೆ ಅದ್ದೂರಿ ಔತಣಕೂಟ ಏರ್ಪಡಿಸಲಾಗಿತ್ತು. ಪೊಲೀಸರೆಲ್ಲ ಸೇರಿ ಭರ್ಜರಿ ಪಾರ್ಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸೇಲಂ: ಹಳ್ಳಿ ಕಡೆಗಳಲ್ಲಿ ಮಾಟ ಮಂತ್ರ, ವಾಮಾಚಾರ ಮಾಡೋದನ್ನು ಕೇಳಿದ್ದೀವಿ. ಇಂದಿಗೂ ಅನೇಕ ಮಂದಿ ಇಂತಹ ಆಚರಣೆಗಳನ್ನು ನಂಬುತ್ತಾರೆ. ಆದರೆ ಪೊಲೀಸರೇ ಇಂತಹ ಒಂದು (Goat Sacrifice) ಆಚರಣೆಯನ್ನು ಮಾಡಿದ್ದಾರೆ ಅಂದ್ರೆ ನಂಬ್ತೀರಾ? ನಂಬಲೇಬೇಕು.
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಆಡಿನ ತಲೆ ಕತ್ತರಿಸಿ ವಾಮಾಚಾರ ಮಾಡಿದ ವಿಚಿತ್ರ ಘಟನೆ ಸೇಲಂ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಾಧಗಳು ಕಡಿಮೆ ಮಾಡಲು ಆಡಿನ ತಲೆ ಕತ್ತರಿಸಿ ವಿಚಿತ್ರ ಪೂಜೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನ ದೀವಟ್ಟಿಪಟ್ಟಿ ಪೊಲೀಸ್ ಠಾಣೆ ಸೇಲಂ ಜಿಲ್ಲೆಯ ಓಮಲೂರು ಬಳಿ ಇದೆ. ಇಲ್ಲಿ ಇನ್ಸ್‌ಪೆಕ್ಟರ್ ಇಲ್ಲದ ಕಾರಣ, ಠಾಣೆಯನ್ನು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ, ತಮ್ಮ ಪ್ರದೇಶದಲ್ಲಿ ಅಪರಾಧವನ್ನು ಕಡಿಮೆ ಮಾಡಲು, ಪೊಲೀಸ್ ಅಧಿಕಾರಿಗಳು ಮುಂಜಾನೆ 4 ಗಂಟೆಗೆ ಪೊಲೀಸ್ ಠಾಣೆಯ ಗೇಟ್‌ನ ಮುಂದುಗಡೆ ಮೇಕೆಯ ತಲೆಯನ್ನು ಕತ್ತರಿಸಿ, ಪೊಲೀಸ್ ಠಾಣೆಗೆ ಬಲಿ ನೀಡಿ, ಅಪರಾಧ ಕಡಿಮೆಯಾಗುವಂತೆ ಪ್ರಾರ್ಥಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಪರಾಧ ಕಡಿಮೆಯಾಗುವಂತೆ ಮಾಡಲು ಈ ರೀತಿ ಮೇಕೆಯ ತಲೆ ಕಡಿದು ವಾಮಾಚಾರ ಮಾಡಿರುವ ಪೊಲೀಸರ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಲ್ಲದೆ, ಪೊಲೀಸ್ ಠಾಣೆ ಕಟ್ಟಡದ ನಾಲ್ಕು ಮೂಲೆಗಳಲ್ಲಿ ಕತ್ತರಿಸಿದ ಮೇಕೆಯ ರಕ್ತವನ್ನು ಲೇಪಿಸಿ ವಿಚಿತ್ರ ಪೂಜೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸದ್ಯ, ವಾಮಾಚಾರದ ದೂರುಗಳ ತನಿಖೆ ನಡೆಸಬೇಕಾದ ಪೊಲೀಸರು ಠಾಣೆಯೊಳಗೆ ಮೇಕೆಯನ್ನು ಕತ್ತರಿಸಿ ವಾಮಾಚಾರ ಪೂಜೆ ಮಾಡಿದ ಘಟನೆ ಓಮಲೂರು ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
Salem,Salem,Tamil Nadu
Jun 23, 2026 12:05 PM IST













