Last Updated:
ಧುರ್ಬೆ ಎಂಬ ಆನೆಯೊಂದು ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಬಲಿ ಪಡೆದಿದೆ. ಶಾಕಿಂಗ್ ವಿಚಾರ ಏನಂದ್ರೆ, ಇದೇ ಆನೆ ಸುಮಾರು 14 ವರ್ಷಗಳ ಹಿಂದೆ ಈ ಕುಟುಂಬದ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು.
ಹಾವಿನ (Snake) ದ್ವೇಷ 12 ವರ್ಷ ಅನ್ನೋ ಮಾತಿದೆ. ಆದರೆ, ಆನೆಯ 14 ವರ್ಷಗಳ ದ್ವೇಷದ ಕಿಚ್ಚು ಎಲ್ಲರನ್ನು ಅಚ್ಚರಿಗೊಳಿಸಿದೆ. ನೇಪಾಳದಲ್ಲಿ (Nepal) ಒಂದು ವಿಚಿತ್ರ ಘಟನೆ ನಡೆದಿದೆ. ಧುರ್ಬೆ (Dhurbe) ಎಂಬ ಆನೆಯೊಂದು (Elephant) ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸದಸ್ಯರನ್ನು ಬಲಿ ಪಡೆದಿದೆ. ಶಾಕಿಂಗ್ ವಿಚಾರ ಏನಂದ್ರೆ, ಇದೇ ಆನೆ ಸುಮಾರು 14 ವರ್ಷಗಳ ಹಿಂದೆ ಈ ಕುಟುಂಬದ ಇಬ್ಬರು ಸದಸ್ಯರನ್ನು ಕೊಂದು ಹಾಕಿತ್ತು.
ಸನಿಚರ ಬೋಟೆ ಮತ್ತು ಅವರ ಕುಟುಂಬಸ್ಥರು ನೇಪಾಳದ ರಪ್ತಿ ನದಿಯನ್ನು ದಾಟಿ ಸುಮಾರು ಒಂಬತ್ತು ಮೈಲುಗಳಷ್ಟು ದೂರದಲ್ಲಿರುವ ಜಗತ್ಪುರದಲ್ಲಿ ನೆಲೆಸಿ ಬದುಕು ಕಟ್ಟಿಕೊಂಡಿದ್ದರು. ಆನೆ ದಾಳಿಯ ಭೀತಿಯಿಲ್ಲದೇ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ವಾರ, ಧುರ್ಬೆ ಆನೆ ಬೋಟೆ ಅವರ ಮನೆಗೆ ನುಗ್ಗಿ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು 4 ವರ್ಷದ ಮೊಮ್ಮಗ ಭರತ್ ಬೋಟೆ ಮೇಲೆ ದಾಳಿ ಮಾಡಿ ಕೊಲೆ ಮಾಡಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಇನ್ನು, ಆನೆ ದಾಳಿ ಬಗ್ಗೆ ಮಾತನಾಡಿರುವ ಸನಿಚರ ಬೋಟೆ, 14 ವರ್ಷಗಳ ಹಿಂದೆ ಆನೆ ದಾಳಿ ಮಾಡಿ ಇಬ್ಬರು ಕುಟುಂಬಸ್ಥರು ಬಲಿ ಪಡೆದಿತ್ತು. ಹೀಗಾಗಿ ಸುರಕ್ಷಿತವಾಗಿರಲು ನದಿ ದಾಟಿ ಬಂದು ಇಲ್ಲಿ ನೆಲಸಿದ್ದೆವು, ಆದರೆ 14 ವರ್ಷಗಳ ನಂತರ, ಅದೇ ಆನೆ ಮತ್ತೆ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿದೆ, ನಮ್ಮ ಮನೆಗೆ ದಾಳಿ ಮಾಡಿ ನನ್ನ ಸೊಸೆ ಮತ್ತು ನನ್ನ ಪುಟ್ಟ ಮೊಮ್ಮಗನನ್ನು ಕೊಲೆ ಮಾಡಿದೆ ಎಂದು ಕಣ್ಣೀರು ಹಾಕಿದರು.
ಧುರ್ಬೆ ಆನೆ ವಿಕಿಪೀಡಿಯಾ ಪೇಜ್ ಕೂಡ ಹೊಂದಿದ್ದು, ಆನೆ ಕೊಲೆ ಮಾಡಿದ ಎಲ್ಲಾ 25 ಜನರ ವಿವರಗಳನ್ನು ನಮೂದಿಸಲಾಗಿದೆ. ಧುರ್ಬೆಯನ್ನು ನಿಯಂತ್ರಿಸಲು ಹಲವಾರು ವರ್ಷಗಳಿಂದ ಮೇಲ್ವಿಚಾರಣೆ ಮಾಡಿದ್ದೇವೆ. 2016 ರಲ್ಲಿ, ಆನೆಗೆ ಟ್ರ್ಯಾಕಿಂಗ್ ಕಾಲರ್ ಅಳವಡಿಸಲಾಗಿತ್ತು. ಮೊದಲ ಟ್ರ್ಯಾಕಿಂಗ್ ಕಾಲರ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ, 2020 ರಲ್ಲಿ ಎರಡನೇ ಕಾಲರ್ ಅಳವಡಿಸಲಾಯಿತು ಮತ್ತು ನಂತರ 2023 ರಲ್ಲಿ ಬದಲಾಯಿಸಲಾಯಿತು. ಇಷ್ಟೆಲ್ಲಾ ಇದ್ದರೂ, ಅವನು ಇನ್ನೂ 25 ಜನರ ಪ್ರಾಣವನ್ನು ಬಲಿ ಪಡೆದಿದೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಆನೆಗಳು ಉತ್ತಮ ಸ್ಮರಣಶಕ್ತಿಯನ್ನು ಹೊಂದಿವೆ ಎಂದು ಸಂಶೋಧಕ ಡಾ. ಜಾಯ್ಸ್ ಪೂಲ್ ಅಭಿಪ್ರಾಯಪಟ್ಟಿದ್ದಾರೆ, ವಯಸ್ಸಾದ ಹೆಣ್ಣು ಆನೆಗಳು ಹಲವು ವರ್ಷಗಳ ನೀರಿನ ಮೂಲಗಳನ್ನು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅವು ವಿವಿಧ ಮಾನವ ಗುಂಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಲ್ಲವು ಮತ್ತು ವರ್ಷಗಳ ಬರಗಾಲದ ನಂತರವೂ ನೀರು ಮತ್ತು ಆಹಾರ ಮಾರ್ಗಗಳನ್ನು ಗುರುತಿಸಬಲ್ಲವು ಎಂದು ಸಂಶೋಧಕ ಡಾ. ಜಾಯ್ಸ್ ಪೂಲ್ ಹೇಳಿದ್ದಾರೆ.














