Last Updated:
ದೆಹಲಿಯ ಹೋಟೆಲ್‌ನಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಅನೇಕರ ಬದುಕನ್ನು ಕಸಿದುಕೊಂಡಿದೆ. ಅದರಲ್ಲಿ ಮಗು ಕನಸು ಹೊತ್ತು ಐವಿಎಫ್ ಚಿಕಿತ್ಸೆಗಾಗಿ ದೆಹಲಿಗೆ ಬಂದಿದ್ದ ಆಫ್ರಿಕನ್ ದಂಪತಿಗಳು ಕೂಡ ಕೊನೆಯುಸಿರೆಳೆದಿದ್ದಾರೆ. ಪರಸ್ಪರ ಒಬ್ಬರನೊಬ್ಬರು ತಬ್ಬಿಕೊಂಡೇ ದುರ್ಮರಣಕ್ಕೀಡಾಗಿದ್ದಾರೆ.
ದೆಹಲಿಯ (Delhi) ಹೌಜ್ ರಾಣಿ ಪ್ರದೇಶದಲ್ಲಿರುವ ಫ್ಲೋರಿಶ್ ಸ್ಟೇ ಬಿ & ಬಿ ಎಂಬ ಹೋಟೆಲ್‌ನಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ್ದ ಭಾರೀ ಬೆಂಕಿ ಅವಘಡ (Fire Accident) ಅನೇಕರ ಬದುಕನ್ನು ಕಸಿದುಕೊಂಡಿದೆ. 5 ಅಂತಸ್ತಿನ ಈ ಕಟ್ಟಡದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ 21 ಜನರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡರು. ಸಾವನ್ನಪ್ಪಿದವರಲ್ಲಿ 12 ಮಂದಿ ವಿದೇಶಿ ಪ್ರಜೆಗಳು, ಅವರಲ್ಲೂ ಆಫ್ರಿಕನ್ ದಂಪತಿಯೋರ್ವರು (African Couple) ಸೇರಿದ್ದರು. ಈ ದಂಪತಿಗಳು ದೆಹಲಿಯಲ್ಲಿರುವ ಮ್ಯಾಕ್ಸ್ ಸ್ಮಾರ್ಟ್ ಆಸ್ಪತ್ರೆಗೆ ಐವಿಎಫ್ ಫಲವತ್ತತೆ ಚಿಕಿತ್ಸೆಗೆ ಬಂದಿದ್ದರು.
ಹೌದು, ಆಫ್ರಿಕನ್ ದಂಪತಿಯೊಬ್ಬರು ದೆಹಲಿಯಲ್ಲಿರುವ ಮ್ಯಾಕ್ಸ್ ಸ್ಮಾರ್ಟ್ ಆಸ್ಪತ್ರೆಗೆ ಐವಿಎಫ್ ಫಲವತ್ತತೆ ಚಿಕಿತ್ಸೆಗೆ ಬಂದಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದ ಸಮಯದಲ್ಲಿ ದಂಪತಿಗಳು ಹೋಟೆಲ್‌ನ ನೆಲ ಮಹಡಿಯಲ್ಲಿ ಇದ್ದರು. ಆದರೆ ಐವಿಎಫ್ ಕನಸು ವೀಧಿಯಾಟವಾಗಿ ಬದಲಾಯಿತು.
ಹೋಟೆಲ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬೆಂಕಿ ಮತ್ತು ಹೊಗೆ ಹೆಚ್ಚಾದಾಗ ದಂಪತಿ ಸ್ನಾನಗೃಹದೊಳಗೆ ಆಶ್ರಯ ಪಡೆದಿದ್ದರು. ರಕ್ಷಣಾ ತಂಡ ಕಟ್ಟಡದೊಳಗೆ ಪ್ರವೇಶಿಸಿ ಹುಡುಕಾಟ ನಡೆಸಿದಾಗ, ಸ್ನಾನಗೃಹದೊಳಗೆ ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಇದನ್ನು ಕಂಡ ಸಿಬ್ಬಂದಿ ಬೆಚ್ಚಿಬಿದ್ದರು. ಮಹಿಳೆ ಶೌಚಾಲಯದ ಸೀಟಿನ ಮೇಲೆ ಕುಳಿತಿದ್ದಳು, ಅವರ ತಲೆಯ ಮೇಲೆ ಇತ್ತೀಚಿನ ಶಸ್ತ್ರಚಿಕಿತ್ಸೆಯ ಗುರುತು ಸ್ಪಷ್ಟವಾಗಿತ್ತು. ಪತಿ ಅವರ ಪಕ್ಕದಲ್ಲಿರುವ ಕುರ್ಚಿಯಲ್ಲಿ ಕುಳಿತಿದ್ದರು. ಇಬ್ಬರ ತೋಳುಗಳು ಒಂದಕ್ಕೊಂದು ಸುತ್ತಿಕೊಂಡಿದ್ದವು, ಮಹಿಳೆಯ ತಲೆ ಪತಿಯ ಭುಜದ ಮೇಲಿತ್ತು. ಅವರ ಕೊನೆಯ ಕ್ಷಣಗಳಲ್ಲಿಯೂ ಪರಸ್ಪರರ ಸಾನ್ನಿಧ್ಯದಲ್ಲಿ ಸಾಂತ್ವನ ಹುಡುಕಿದಂತೆ ಈ ದೃಶ್ಯ ಕಂಡು ಬಂತು.
ಮ್ಯಾಕ್ಸ್ ಸ್ಮಾರ್ಟ್ ಆಸ್ಪತ್ರೆಯ ಕರ್ತವ್ಯ ಅಧಿಕಾರಿ ವಾಸಿಂ ರಾಜ ಅವರು ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬರು. ಅವರು ಸ್ನಾನಗೃಹದ ಬಾಗಿಲು ಬಲವಂತವಾಗಿ ತೆರೆಯುವಾಗ ಈ ಹೃದಯವಿದ್ರಾವಕ ದೃಶ್ಯ ಕಣ್ಣಿಗೆ ಬಿದ್ದುದಾಗಿ ಹೇಳಿದರು. ತಮ್ಮ ವೃತ್ತಿಜೀವನದಲ್ಲಿ ಅನೇಕ ಮೃತದೇಹಗಳನ್ನು ಕಂಡಿದ್ದರೂ, ಈ ದೃಶ್ಯ ತನ್ನ ಮೇಲೆ ಶಾಶ್ವತ ಪ್ರಭಾವ ಬೀರಿದೆ ಎಂದು ಅವರು ಹೇಳಿದರು. ರಾಜ ಮತ್ತು ಅವರ ತಂಡ ತಕ್ಷಣವೇ ದಂಪತಿಗಳ ನಾಡಿ, ಉಸಿರಾಟ ಪರಿಶೀಲಿಸಿ, ಸಿಪಿಆರ್ ಸೇರಿದಂತೆ ಎಲ್ಲಾ ಜೀವ ಉಳಿಸುವ ಕ್ರಮಗಳನ್ನು ಪ್ರಯತ್ನಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅವರಿಬ್ಬರೂ ಹೆಚ್ಚಾಗಿ ಹೊಗೆಯನ್ನು ಉಸಿರಾಡಿದ್ದರಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದರು.
ಹೋಟೆಲ್ ಬಳಿ ವಾಸಿಸುವ ಸ್ಥಳೀಯ ಕ್ಯಾಬ್ ಚಾಲಕ ಇಕ್ರಾರ್ ಅವರ ಪ್ರಕಾರ, ಈ ದಂಪತಿಯನ್ನು ಪ್ರದೇಶದ ಹಲವಾರು ಚಾಲಕರು ಗುರುತಿಸುತ್ತಿದ್ದರು. ಅವರು ಆಸ್ಪತ್ರೆಯ ಐವಿಎಫ್ ಚಿಕಿತ್ಸೆಗೆ ಆಗಾಗ್ಗೆ ಹೋಗುತ್ತಿದ್ದರಿಂದ, ಚಾಲಕರು ಅವರನ್ನು ಹೋಟೆಲ್‌ನಿಂದ ಆಸ್ಪತ್ರೆಗೆ, ಅಲ್ಲಿಂದ ಹೋಟೆಲ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಅವರು ಕುಟುಂಬವನ್ನು ಆರಂಭಿಸುವ ಭರವಸೆಯೊಂದಿಗೆ ಇಲ್ಲಿ ಬಂದಿದ್ದರು ಎಂದು ಇಕ್ರಾರ್ ವಿಷಾದ ವ್ಯಕ್ತಪಡಿಸಿದರು.
ಈ ಬೆಂಕಿ ಅವಘಡದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ವೈದ್ಯಕೀಯ ಪ್ರವಾಸಿಗರು ಅಥವಾ ಸಾಕೇತ್ ಮತ್ತು ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆಗಿದ್ದ ಸಹಾಯಕರು. ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ನಡೆಸುತ್ತಿರುವ ತನಿಖೆಯಲ್ಲಿ ಹೋಟೆಲ್‌ನಲ್ಲಿದ್ದ ಅನೇಕ ಸುರಕ್ಷತಾ ಉಲ್ಲಂಘನೆಗಳು ಬಹಿರಂಗವಾಗಿವೆ. ಕಟ್ಟಡದ ಮೇಲ್ಛಾವಣಿಯ ನಿರ್ಗಮನ ದ್ವಾರವನ್ನು ಮುಚ್ಚಲಾಗಿತ್ತು, ತುರ್ತು ಪರಿಸ್ಥಿತಿಯಲ್ಲಿ ಜನರು ಹೊರಬರದಂತೆ ಅಡ್ಡಿ ಉಂಟಾಗಿತ್ತು ಎಂದು ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಈ ಸಂಸ್ಥೆಗೆ ಕೇವಲ 6 ಕೊಠಡಿಗಳನ್ನು ನಿರ್ವಹಿಸಲು ಮಾತ್ರ ಪರವಾನಗಿ ಇದ್ದರೂ, ಸುಮಾರು 25 ಕೊಠಡಿಗಳನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸದೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೊಠಡಿಗಳನ್ನು ಬಳಸಿಕೊಂಡು ಹೋಟೆಲ್ ಅನ್ನು ನಡೆಸಲಾಗುತ್ತಿದ್ದುದು ಈ ದುರಂತಕ್ಕೆ ಮುಖ್ಯ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಘಟನೆ ದೆಹಲಿಯಲ್ಲಿನ ಹೋಟೆಲ್‌ಗಳ ಸುರಕ್ಷತೆ, ಅಗ್ನಿ ನಿಯಂತ್ರಣ ನಿಯಮಗಳ ಪಾಲನೆ, ಮತ್ತು ವೈದ್ಯಕೀಯ ಪ್ರವಾಸಿಗರ ಭದ್ರತೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಆಫ್ರಿಕನ್ ದಂಪತಿಗಳು ತಮ್ಮ ಮಗುವಿನ ಕನಸಿನೊಂದಿಗೆ ದೆಹಲಿಗೆ ಬಂದಿದ್ದರೆ, ಅಸುರಕ್ಷಿತ ಹೋಟೆಲ್ ವ್ಯವಸ್ಥೆಯ ಕಾರಣದಿಂದ ಅವರ ಜೀವನವೇ ನಾಶವಾಗಿದೆ. ಅವರ ಕೊನೆಯ ಕ್ಷಣದಲ್ಲಿ ಪರಸ್ಪರ ತಬ್ಬಿಕೊಂಡಿರುವ ಚಿತ್ರ, ಮಾನವ ಸಂಬಂಧದ ಮೌಲ್ಯವನ್ನು ಹಾಗೆಯೇ ನಮ್ಮ ವ್ಯವಸ್ಥೆಯ ದೌರ್ಬಲ್ಯವನ್ನು ಒಂದೇ ಸಮಯದಲ್ಲಿ ನೆನಪಿಸುತ್ತದೆ.













