Last Updated:
ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯದ ಕಲಾಪದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ಮಹತ್ವದ ಕ್ರಮ ಕೈಗೊಂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಮಾಫಿ ಸಾಕ್ಷಿಯಾಗಿರುವ ಪ್ರದೋಷ್ (Pradosh) ರಾವ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದೆ. ಪ್ರಕರಣದಲ್ಲಿ ಈ ಹಿಂದೆ 14ನೇ ಆರೋಪಿಯಾಗಿದ್ದ ಪ್ರದೋಷ್ ನ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ಹೇಳಿಕೆ ರೂಪದಲ್ಲಿ ದಾಖಲಿಸುತ್ತಿದ್ದಾರೆ.
ಆದರೆ, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯದ ಕಲಾಪದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್ ಮಹತ್ವದ ಕ್ರಮ ಕೈಗೊಂಡಿದೆ. ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಯ ದೃಶ್ಯಗಳು ಅಥವಾ ಕಲಾಪದ ವಿವರಗಳನ್ನು ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತಿರುವ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ಪ್ರದೋಷ್ ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಪ್ರದೋಷ್ ಹೇಳಿಕೆ ಇದೀಗ ಪ್ರಕರಣದ ಪ್ರಮುಖ ಬೆಳವಣಿಗೆಗಳಲ್ಲಿ ಒಂದಾಗಿದೆ. ನ್ಯಾಯಾಲಯದ ಮುಂದೆ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ಕೆಲವು ಯೂಟ್ಯೂಬ್ ಚಾನೆಲ್‌ಗಳು ಮತ್ತು ಸಾಮಾಜಿಕ ಜಾಲತಾಣ ಖಾತೆಗಳು ವಿಡಿಯೋ ಹಾಗೂ ಪೋಸ್ಟ್‌ಗಳ ಮೂಲಕ ವರದಿ ಮಾಡುತ್ತಿವೆ ಎಂಬ ಆರೋಪಗಳಿವೆ. ಕೆಲವರು ವಿಚಾರಣೆಯ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಎಚ್ಚರಿಕೆಯ ನಡುವೆಯೂ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ವಿಶೇಷವಾಗಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವಂತಹ ಸೂಕ್ಷ್ಮ ಹಂತದಲ್ಲಿ ಕಲಾಪದ ದೃಶ್ಯಗಳು ಹೊರಗೆ ಹರಿದಾಡುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ.
ಈ ಬೆಳವಣಿಗೆಯ ಬೆನ್ನಲ್ಲೇ 59ನೇ ಸಿಸಿಎಚ್ ನ್ಯಾಯಾಲಯದ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಆರೋಪಿಗಳು ಈವರೆಗೆ ವಿಚಾರಣೆಗೆ ವಿಸಿ ಮೂಲಕ ಹಾಜರಾಗುತ್ತಿದ್ದರು. ಸೆಪ್ಟೆಂಬರ್ 28ರಂದು ಪ್ರದೋಷ್ ಹೇಳಿಕೆ ದಾಖಲಿಸುವಾಗಲೂ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ಆನ್‌ಲೈನ್ ಮೂಲಕ ವಿಚಾರಣೆಯಲ್ಲಿ ಹಾಜರಾಗಿದ್ದರು ಎಂದು ವರದಿಯಾಗಿದೆ.
ಆದರೆ, ವಿಚಾರಣೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ದುರ್ಬಳಕೆಯಾಗುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ವಿಸಿ ಸಂಪರ್ಕವನ್ನು ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಲಾಪದ ವಿಡಿಯೋ ರೆಕಾರ್ಡಿಂಗ್ ಅಥವಾ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ನ್ಯಾಯಾಲಯ ಈ ಹಿಂದೆ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ನ್ಯಾಯಾಲಯದ ಎಚ್ಚರಿಕೆಯ ಹೊರತಾಗಿಯೂ ವಿಚಾರಣೆಯ ವಿಡಿಯೋಗಳು ಅಥವಾ ಪ್ರದೋಷ್ ಹೇಳಿಕೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದ್ದರೆ, ಅಂತಹ ಖಾತೆಗಳ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ. ವಿಡಿಯೋ ಹಂಚಿಕೊಂಡಿರುವ ಕೆಲವು ಯೂಟ್ಯೂಬ್ ಚಾನೆಲ್‌ಗಳು ಹಾಗೂ ಸಾರ್ವಜನಿಕ ಸಾಮಾಜಿಕ ಜಾಲತಾಣ ಖಾತೆಗಳಿಗೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಇದೀಗ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯುತ್ತಿರುವ ಬೆನ್ನಲ್ಲೇ ಕಲಾಪದ ವಿಡಿಯೋಗಳ ದುರ್ಬಳಕೆ ಆರೋಪ ಹೊಸ ಬೆಳವಣಿಗೆಯಾಗಿದೆ. ನ್ಯಾಯಾಲಯದ ವಿಚಾರಣೆಯ ಗೌಪ್ಯತೆ ಮತ್ತು ನಿಯಮಗಳನ್ನು ಕಾಪಾಡುವ ನಿಟ್ಟಿನಲ್ಲಿ ವಿಸಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕ್ರಮ ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ವರದಿ- ಮಾದೇಶ್, ಪ್ರತಿನಿಧಿ, ನ್ಯೂಸ್ 18 ಕನ್ನಡ ಬೆಂಗಳೂರು














