Last Updated:
Darshan Case: ಒಂದು ಕಡೆ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸೋಕೆ ಯಾವಾಗ ದಿನಾಂಕ ನಿಗದಿಯಾಗುತ್ತೆ ಅಂತ ಕಾಯ್ತಾ ಇದ್ರೆ ಇತ್ತ ದರ್ಶನ್ ಲಾಯರ್ ಮಾಫಿ ಸಾಕ್ಷಿ ವಿರೋಧಿಸಿ ಖಡಕ್ ವಾದ ಮಂಡಿಸಿದ್ದಾರೆ. ಅಪ್ರೂವರ್ ಪ್ರದೋಷ್ ಸುತ್ತ ಬಿಸಿ ಬಿಸಿ ವಾದ ನಡೆದಿದ್ದು ಕೋರ್ಟ್ ಬೆಳವಣಿಗೆ ಕುತೂಹಲ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಆರೋಪದ (Renukaswamy Case) ಕೇಸ್ನಲ್ಲಿ ಹತ್ತು ಹಲವು ಬೆಳವಣಿಗೆಗಳು ಆಗುತ್ತಲೇ ಇವೆ. ಈ ಒಂದು ಕೇಸ್ಗೆ ಸಂಬಂಧಿಸಿದಂತೆ ಇದೀಗ ಪ್ರದೋಷ್ )(Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ದಿನಾಂಕ ಇಂದು ನಿಗದಿಯಾಗುತ್ತದೆ ಎನ್ನಲಾಗಿತ್ತು. ಆದರೆ ಈಗ ಇದಕ್ಕೆ ದರ್ಶನ್ ಕಡೆಯಿಂದ ಆಕ್ಷೇಪಣೆ ಸಲ್ಲಿಕೆಯಾಗಿದ್ದು ಹೆಚ್ಚಿನ ಬೆಳವಣಿಗೆಗೆ ಕೋರ್ಟ್ (Court) ಸಾಕ್ಷಿಯಾಗಿದೆ.
ಮಾಫಿ ಸಾಕ್ಷಿ ವಿಚಾರದಲ್ಲಿ ಸಹ ಆರೋಪಿಗೆ ಪ್ರಶ್ನಿಸುವ ಹಕ್ಕಿಲ್ಲ. ನೈಜ ಆರೋಪಿಗೆ ಅನುಕೂಲವಾಗಲು ಮಾಫಿ ಸಾಕ್ಷಿಯಾಗುತ್ತಿದ್ದಾರಾ? ಈ ಅಂಶವನ್ನು ಮಾಫಿ ಸಾಕ್ಷಿ ಪರಿಗಣಿಸುವಾಗ ಕೋರ್ಟ್ ಪರಿಶೀಲಿಸಬೇಕು. ಇಂದು ಒಂದು ತರ ಪಕ್ಷಾಂತರ ಇದ್ದಂತೆ ಅಂತಾ ಸುಪ್ರೀಂಕೋರ್ಟ್ ಒಂದು ತೀರ್ಪಿನಲ್ಲಿ ನಲ್ಲಿ ಹೇಳಿದೆ. ಕೋರ್ಟ್ ಹಾಗೂ ಆರೋಪಿ ನಡುವೆ ನಡೆಯುವ ಕಾಂಟ್ರಾಕ್ಟ್ ಎಂದು ನ್ಯಾ.ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದಾರೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಾಡಿದ್ದು ಆಗಸ್ಟ್ 5 ರಂದು ಪ್ರದೂಷ್ ಮಾಫಿ ಸಾಕ್ಷಿ ಅರ್ಜಿ ಸಲ್ಲಿಸಿದ್ದ. ಮರುದಿನ ಪ್ರಾಸಿಕ್ಯೂಷನ್ ಮಾಫಿ ಸಾಕ್ಷಿಗೆ ಒಪ್ಪಿಗೆ ನೀಡಿದೆ. ಮಾಫಿ ಸಾಕ್ಷಿ ಏಕೆ ಅಗತ್ಯವೆಂದು ಪ್ರಾಸಿಕ್ಯೂಷನ್ ಹೇಳಿಕೆ ಸಲ್ಲಿಸಿಲ್ಲ. ಪ್ರೊಬೇಷನರಿ ಅಧಿಕಾರಿ ವರದಿ ಪರಿಗಣಿಸಿದ್ದಕ್ಕೆ ಮಾಫಿ ಸಾಕ್ಷಿ ರದ್ದಾಗಿದೆ ಎಂದಿದ್ದಾರೆ.
ಹೈಕೋರ್ಟ್ ಮರು ಆದೇಶ ನೀಡುವಂತೆ ಸೂಚಿಸಿತ್ತು. ಪ್ರದೂಷ್ ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿದ್ದಾನೆ. ಆರೋಪಿ ಜುಲೈನಿಂದ ಮೊಬೈಲ್ ಬಳಕೆ ಮಾಡಿದ್ದಾನೆ. ಅನಧಿಕೃತವಾಗಿ ಬೇರೊಬ್ಬನ ಹೆಸರಲ್ಲಿ ಮಾತಾಡಿದ್ದಾನೆ ಎಂದಿದ್ದಾರೆ.
ಅನಧಿಕೃತವಾಗಿ ಮಾತಾಡಿ ನಂತರ ಅಪ್ರೂವರ್ ಆಗಲು ಮುಂದಾಗಿದ್ದಾನೆ. ವಿಷ್ಣುವರ್ಧನ್ ಎಂಬ ಬಂಧಿ ಹೆಸರಿನಲ್ಲಿ ಬಳಕೆ ಮಾಡಿದ್ದಾನೆ. ವಿಷ್ಣುವರ್ಧನ ಬಿಡುಗಡೆಯಾಗಿರುವ ಬಂಧಿ. ಪತ್ನಿಯ ಪೋನ್ ಸಂಖ್ಯೆಯನ್ನ ಸಂತೋಷ್ ಎಂದು ನೋಂದಾಯಿಸಿ ಮಾತಾಡಿದ್ದಾನೆ ಎಂದು ಹಷ್ಮತ್ ಪಾಷ ವಾದ ಮಾಡಿದ್ದಾರೆ.
ನೀವು ಇದೆಲ್ಲವನ್ನೂ ಕ್ರಾಸ್ ಎಕ್ಸಾಮಿನೇಷನ್ ನಲ್ಲೇ ಪ್ರಶ್ನಿಸಬಹುದಲ್ಲವೇ ಎಂದು ಜಡ್ಜ್ ಪ್ರಶ್ನೆ ಮಾಡಿದ್ದು, ಎಲ್ಲ ಬಂಧಿತರಿಗೆ ಮೂವರೊಂದಿಗೆ ಮಾತನಾಡಲು ಅವಕಾಶವಿರುತ್ತದೆ. ವಕೀಲರ ನಂಬರ್ ಎಂದು ಪತ್ನಿಯೊಂದಿಗೆ ಮಾತಾಡಿದ್ದಾನೆ ಅಷ್ಟೇ. ಮೇಲ್ನೋಟಕ್ಕೆ ನನಗೆ ಹೀಗನ್ನಿಸುತ್ತಿದೆ ಎಂದು ನ್ಯಾ.ವಿ. ಶ್ರೀಶಾನಂದ ಹೇಳಿದ್ದಾರೆ.
ಮಾಫಿ ಸಾಕ್ಷಿಯ ವಿಶ್ವಾಸಾರ್ಹತೆಯನ್ನೂ ನೀವು ಪ್ರಶ್ನಿಸಬಹುದು. ಈತ ಸಾಕ್ಷಿ ಹೇಳಲು ಬಂದಾಗ ನಿಮ್ಮ ಕಕ್ಷಿದಾರರೂ ಹಾಜರಿರಬಹುದು. ಈಗಾಗಲೇ ನಾನು ಈ ಬಗ್ಗೆ ಆದೇಶ ಮಾಡಿದ್ದೇನೆ ಎಂದು ಜಡ್ಜ್ ಹೇಳಿದ್ದಾರೆ.
ನಿಮಗೆ ಮಾಫಿ ಸಾಕ್ಷಿಯನ್ನು ಪಾಟೀಸವಾಲಿಗೊಳಪಡಿಸುವ ಪೂರ್ಣ ಹಕ್ಕಿದೆ. ಯಾವ ಪ್ರಶ್ನೆ ಕೇಳಿ ಅವನ ಸ್ಥಿತಿ ತೋರಿಸಬೇಕೆಂಬುದು ನಿಮಗೆ ಗೊತ್ತಿದೆ. ಇಲ್ಲಿವರೆಗೂ ಏನು ಮಾಡುತ್ತಿದ್ದ ಎಂಬುದನ್ನು ಪ್ರಶ್ನಿಸಬಹುದು. ಆತ ಕಿವಿ ಮೇಲೆ ಹೂ ಮುಡಿಸುತ್ತಿದ್ದಾನಾ ಎಂಬುದನ್ನೆಲ್ಲಾ ನೋಡಬೇಕು ಎಂದು ಜಡ್ಜ್ ಹೇಳಿದ್ದಾರೆ.
ವರದಿ: ಮುನಿರಾಜು ಕೆ.ಜಿ ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು














