Last Updated:
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ ಕೋರ್ಟ್ ಕೈಸೇರಿದೆ. ದರ್ಶನ್ ಹಾಗೂ ಪವಿತ್ರಾ ಗೌಡಗೆ ಢವಢವ.
ಬೆಂಗಳೂರು (ಜೂ.18): ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನಲ್ಲಿ ನಟ ದರ್ಶನ್ (Actor Darshan) ಜೈಲು ಸೇರಿದ್ದು, ಬೇಲ್ ಮೂಲಕವೂ ಹೊರಬರೋಕೆ ಆಗದೆ ಪರದಾಡ್ತಿದ್ದಾರೆ. 1 ವರ್ಷದೊಳಗೆ 60 ಸಾಕ್ಷ್ಯಗಳ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ (Supreme Court) ಸೂಚನೆ ಮೇರಿಗೆ ಸೆಷನ್ ಕೋರ್ಟ್ನಲ್ಲಿ ವಾರ 4 ದಿನ ಟ್ರಯಲ್ ನಡೆದಿದ್ದು, ದಿನ-ದಿನವೂ ದರ್ಶನ್ ಆ್ಯಂಡ್ ಗ್ಯಾಂಗ್ಗೆ ಟೆನ್ಷನ್ ಶುರುವಾಗಿದೆ. ತನಿಖಾಧಿಕಾರಿಗಳು ನೀಡಿದ ಪೆನ್ ಡ್ರೈವ್ ಅನ್ನು ಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಪೊಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿ ಮನಬಂದಂತೆ ಹಲ್ಲೆ ನಡೆಸಿದ್ದ ದರ್ಶನ್ ಆ್ಯಂಡ್ ಗ್ಯಾಂಗ್ ಇದೀಗ ಜೈಲು ಸೇರಿದೆ. ದರ್ಶನ್ ಹಾಗೂ ಸಹಚರ ಏಟಿಗೆ ರೇಣುಕಾಸ್ವಾಮಿ ಜೀವ ಬಿಟ್ಟ ಎನ್ನುವ ಆರೋಪವಿದ್ದು, ಈ ಕೇಸ್ಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳೇ ಪ್ರಮುಖ ಸಾಕ್ಷ್ಯವಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಾಷಿಕ್ಯೂಷನ್ (ತನಿಖಾಧಿಕಾರಿಗಳು) ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ ಅನ್ನು ಸಾಕ್ಷ್ಯವಾಗಿ ನಗರದ 19ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಪರಿಗಣಿಸಿದೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಟ್ರಯಲ್ ಮುಂದುವರಿಸಿದ್ದು, ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು ಪೆನ್ ಡ್ರೈವ್ ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು ಜೊತೆಗೆ ಸುಮನಹಳ್ಳಿಯ ಬಳಿಯ ಅಪಾರ್ಟ್ಮೆಂಟ್ ವೊಂದರ ಮಹಿಳಾ ನಿವಾಸಿ ದೃಢೀಕರಿಸಿದ ಪ್ರಮಾಣ ಪತ್ರವನ್ನ ಕೂಡ ಕೋರ್ಟ್ಗೆ ಸಲ್ಲಿಸಿದ್ದಾರೆ.
ಇದರಿಂದ ಪೆನ್ ಡ್ರೈವ್ ಅನ್ನು ಸಾಕ್ಷ್ಯಾಧಾರವಾಗಿ ನ್ಯಾಯಾಲಯ ಪರಿಗಣಿಸಿ, ಪ್ರಕರಣದ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿದೆ ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ತನಿಖಾಧಿಕಾರಿಗಳು ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಒಳಗೊಂಡ ಪೆನ್ ಡ್ರೈವ್ (ಡಿಜಿಟಲ್ ಸಾಕ್ಷ್ಯ.) ಅನ್ನು ಮುಚ್ಚಿದ ಲಕೋಟೆಯಿಂದ ಹೊರಗೆ ತೆಗೆದಿದ್ದ ನ್ಯಾಯಾಲಯವು ಪೆನ್ ಡ್ರೈವ್ ಅನ್ನು ಪ್ಲೇ ಮಾಡಲು ( ವೀಕ್ಷಿಸಲು) ಬಯಸಿದೆ.
ಸುಪ್ರೀಂಕೋರ್ಟ್‌ನ ನಿರ್ದೇಶನದ ಬೆನ್ನಲ್ಲೇ, ಪ್ರಕರಣವನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ನ್ಯಾಯಾಲಯ ಉಭಯ ವಕೀಲರಿಗೆ ಖಡಕ್ ಸೂಚನೆ ನೀಡಿದೆ. ಹೀಗಾಗಿ ವಾರದಲ್ಲಿ 4 ದಿನ ವಿಚಾರಣೆ ನಡೆಯಲಿದ್ದು, ಅಗತ್ಯಬಿದ್ದರೇ 5 ದಿನ ಕೂಡ ವಿಚಾರಣೆ ನಡೆಯಲ್ಲಿದೆ.
ಒಂದು ವರ್ಷದೊಳಗೆ 60 ಸಾಕ್ಷಿಗಳ ವಿಚಾರಣೆ ಹಾಗೂ ಕ್ರಾಸ್ ಎಕ್ಸಾಮಿನೇಷನ್ ಕೂಡ ನಡೆಬೇಕಿದೆ. ನಿನ್ನೆ (ಜೂ.15) ನಡೆದ ವಿಚಾರಣೆ ವೇಳೆ ಸರ್ಕಾರದ ವಿಶೇಷ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು, ಸುಪ್ರೀಂ ಕೋರ್ಟ್ ಸೂಚನೆಯಂತೆ ಒಂದು ವರ್ಷದೊಳಗೆ ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಬೇಕಿದೆ ಎಂದು ಕೋರ್ಟ್ ಗಮನಕ್ಕೆ ತಂದ್ರು. ಹೀಗಾಗಿ ಪ್ರತಿದಿನವೂ ವಿಚಾರಣೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಪ್ರಕ್ರಿಯೆಯನ್ನು ಮುಂದೂಡಬಾರದು ಎಂದು ಮನವಿ ಮಾಡಿದ್ದಾರೆ.













