Last Updated:
107 ವರ್ಷಗಳ ನಂತರ, ಫ್ರಾನ್ಸ್‌ನ ಐತಿಹಾಸಿಕ ವರ್ಸೈಲ್ಸ್ ಅರಮನೆಯಲ್ಲಿ ಒಂದು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ ಸ್ಥಳದಲ್ಲಿ ಅಮೆರಿಕ-ಇರಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇತಿಹಾಸಗಳು (History) ಕೆಲುವೊಮ್ಮೆ ಮರುಕಳಿಸುತ್ತದೆ. ಕೆಲವೊಮ್ಮೆ ಅದೇ ಸ್ಥಳದಲ್ಲಿ, ಬೇರೆ ಪಾತ್ರಗಳೊಂದಿಗೆ ಪುನಃ ಬರೆಯುವಂತಾಗುತ್ತೆ. ಫ್ರಾನ್ಸ್‌ನ (France) ವರ್ಸೈಲ್ಸ್ ಅರಮನೆ ಇದಕ್ಕೆ ಒಳ್ಳೆಯ ಉದಾಹರಣೆ. ಈ ಅರಮನೆ 100 ಕ್ಕೂ ಹೆಚ್ಚು ವರ್ಷಗಳ ಹಿಂದೆ, ಲೋಕದ ಪ್ರಸಿದ್ಧ ಶಾಂತಿ ಒಪ್ಪಂದಗಳಲ್ಲಿ ಒಂದಾದ ‘ವರ್ಸೈಲ್ಸ್ ಒಪ್ಪಂದ’ಕ್ಕೆ ಸಾಕ್ಷಿಯಾಗಿತ್ತು. ಆ ಒಪ್ಪಂದವು ಮೊದಲನೆಯ ಮಹಾಯುದ್ಧವನ್ನು ಅಂತ್ಯಗೊಳಿಸಿತು, ಆದರೆ ಕೆಲವೇ ದಶಕಗಳಲ್ಲಿ ಎರಡನೇ ಮಹಾಯುದ್ಧಕ್ಕೆ ದಾರಿಯನ್ನೂ ತೆರೆದಿತ್ತು.
ಈಗ, ಇದೇ ಅರಮನೆ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧಕ್ಕೆ ತೆರೆ ಎಳೆಯುವ ಒಪ್ಪಂದದ ಕಾರಣದಿಂದ ಆಗಿದೆ. ಇದೇ ಜಾಗದಲ್ಲಿ ಇದೀಗ ಇರಾನ್ ಅಮೆರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಜೂನ್ 28, 1919 ರಂದು ಆಗಿನ ಯುಎಸ್ ಅಧ್ಯಕ್ಷ ವುಡ್ರೋ ವಿಲ್ಸನ್ ವರ್ಸೈಲ್ಸ್ ಒಪ್ಪಂದಕ್ಕೆ ಇಲ್ಲಿ ಸಹಿ ಹಾಕಿದರು. ಇದರ ಮೂಲಕ ಮೊದಲನೆಯ ಮಹಾಯುದ್ಧ ಅಧಿಕೃತವಾಗಿ ಕೊನೆಗೊಂಡಿತ್ತು. ಜೂನ್ 18, 2026 ರಂದು, ಇದೇ ಅರಮನೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ ಯುದ್ಧ ಅಂತ್ಯಗೊಳಿಸುವ ಹೊಸ ಒಪ್ಪಂದಕ್ಕೆ ಸಾಕ್ಷಿಯಾಯಿತು. ಎರಡೂ ಸಂದರ್ಭಗಳಲ್ಲಿ ಸ್ಥಳ ಒಂದೇ, ಆದರೆ ಒಪ್ಪಂದಗಳ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ಪ್ರಶ್ನೆಗಳು ಇಂದಿಗೂ ಚರ್ಚೆಯಲ್ಲಿವೆ.
1919 ರ ವರ್ಸೈಲ್ಸ್ ಒಪ್ಪಂದದಲ್ಲಿ ಜರ್ಮನಿಯ ಮೇಲೆ ಕಠಿಣ ಷರತ್ತುಗಳನ್ನು ಹೇರಲಾಯಿತು. ಯುದ್ಧವನ್ನು ಪ್ರಾರಂಭಿಸಿದ್ದಕ್ಕಾಗಿ ಸಂಪೂರ್ಣ ಹೊಣೆಗಾರಿಕೆಯನ್ನು ಜರ್ಮನಿಯ ಮೇಲೇ ಹಾಕಲಾಯಿತು. 26,000 ಚದರ ಮೈಲಿಗಿಂತ ಹೆಚ್ಚು ಭೂಮಿಯನ್ನು ಕಸಿದುಕೊಂಡರು. ಭಾರೀ ಯುದ್ಧ ಪರಿಹಾರ (reparations) ಪಾವತಿಸುವಂತೆ ಆದೇಶಿಸಿದರು. ಜರ್ಮನಿ ತನ್ನ ವಿದೇಶಿ ವಸಾಹತುಗಳನ್ನು ಮತ್ತು ದೊಡ್ಡ ಸೇನೆ, ನೌಕಾಪಡೆ ನಿರ್ಮಿಸುವ ಹಕ್ಕನ್ನೂ ಬಹುತೇಕ ಕಳೆದುಕೊಂಡಿತು. ಜರ್ಮನ್ ಪ್ರತಿನಿಧಿಗಳು ಈ ಷರತ್ತುಗಳಿಗೆ ವಿರೋಧ ವ್ಯಕ್ತಪಡಿಸಿದರೂ, ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತೆ ಯುದ್ಧ ಪ್ರಾರಂಭವಾಗಬಹುದು ಎಂಬ ಬೆದರಿಕೆಯ ನಡುವೆ ಕೊನೆಗೆ ಒತ್ತಾಯದಡಿ ಸಹಿ ಹಾಕಬೇಕಾಯಿತು.
ಇತಿಹಾಸಕಾರರ ಅಭಿಪ್ರಾಯದಲ್ಲಿ, ಈ ಒಪ್ಪಂದ ಜರ್ಮನಿಯನ್ನು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ಮನೋಭಾವದ ಮಟ್ಟದಲ್ಲೂ ಕುಗ್ಗಿಸಿತು. ದೇಶದೊಳಗೆ ಕೋಪ, ಅವಮಾನ, ಅಸಮಾಧಾನಗಳು ತುಂಬಿ ಹರಿದವು. ನಂತರ ಅಡಾಲ್ಫ್ ಹಿಟ್ಲರ್ ಈ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಂಡರು. ವರ್ಸೈಲ್ಸ್ ಒಪ್ಪಂದವನ್ನು ಜರ್ಮನಿಗೆ ಮಾಡಿದ ಅನ್ಯಾಯ ಎಂದು ಬಣ್ಣಿಸಿ ಜನರ ಬೆಂಬಲ ಗಳಿಸಿದರು. ಅಧಿಕಾರಕ್ಕೆ ಬಂದ ಮೇಲೆ, ಒಪ್ಪಂದದ ಷರತ್ತುಗಳನ್ನು ಧಿಕ್ಕರಿಸಿ, ಜರ್ಮನಿಯನ್ನು ಪುನಃ ಮಿಲಿಟರಿ ಶಕ್ತಿಯಾಗಿ ಕಟ್ಟಲು ಆರಂಭಿಸಿದರು. ಇದರ ಪರಿಣಾಮವಾಗಿ ಎರಡನೇ ಮಹಾಯುದ್ಧ ಪ್ರಾರಂಭವಾಗಿ, ಸುಮಾರು 70 ರಿಂದ 80 ಮಿಲಿಯನ್ ಜನರು ಪ್ರಾಣ ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ವರ್ಸೈಲ್ಸ್ ಅರಮನೆ “ಶಾಂತಿ ಒಪ್ಪಂದ”ದ ಸ್ಥಳವಾಗಿದ್ದರೂ, ಇನ್ನೂ ದೊಡ್ಡ ಯುದ್ಧಕ್ಕೆ ವೇದಿಕೆಯಾದ ಸ್ಥಳವೆಂದು ಕುಖ್ಯಾತಿಯಲ್ಲಿದೆ.
ಆದರೆ 2026 ರ ಅಮೆರಿಕಾ–ಇರಾನ್ ಒಪ್ಪಂದದ ಕಥೆ ಬೇರೆ. 1919 ರಂತೆ ಇಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಷರತ್ತುಗಳನ್ನು ಹೇರಿದಿಲ್ಲ. ಈ ಬಾರಿ, ಎರಡೂ ಪಕ್ಷಗಳು ಮಾತುಕತೆ ಮೂಲಕ, ಪರಸ್ಪರ ಒಪ್ಪಿಗೆ ಮೂಲಕ ಒಪ್ಪಂದಕ್ಕೆ ಬಂದಿವೆ. ವರ್ಸೈಲ್ಸ್ ಒಪ್ಪಂದದ ಗುರಿ ಜರ್ಮನಿಯನ್ನು ದುರ್ಬಲಗೊಳಿಸುವುದಾಗಿದ್ದರೆ, 2026 ರ ಒಪ್ಪಂದದ ಗುರಿ ಯುದ್ಧವನ್ನು ತಡೆಗಟ್ಟುವುದು, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸುರಕ್ಷಿತವಾಗಿ ತೆರೆಯುವುದು ಮತ್ತು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವುದು. ಜರ್ಮನಿಯು ತನ್ನ ಭೂಭಾಗ ಕಳೆದುಕೊಂಡಿದ್ದರೆ, ಇರಾನ್‌ಗಾಗಿ ಈ ಒಪ್ಪಂದದಲ್ಲಿ ತೈಲ ರಫ್ತಿಗೆ ಅವಕಾಶ, ಕೆಲವು ನಿರ್ಬಂಧಗಳಲ್ಲಿ ಸಡಿಲಿಕೆ ಸೇರಿದಂತೆ ಆರ್ಥಿಕ ಪರಿಹಾರಗಳಿವೆ.
ವರ್ಸೈಲ್ಸ್ ಅರಮನೆಯನ್ನು ಆಯ್ಕೆ ಮಾಡುವ ಮೂಲಕ, ಟ್ರಂಪ್ ತಮ್ಮ ಒಪ್ಪಂದವನ್ನು ನೇರವಾಗಿ ಇತಿಹಾಸದ ಹಳೆಯ ಅಧ್ಯಾಯದ ಜೊತೆಗೆ ಜೋಡಿಸಿದ್ದಾರೆ. ಆದರೆ ಮುಖ್ಯ ಪ್ರಶ್ನೆ ಇನ್ನೂ ಉಳಿದಿದೆ. 1919 ರ ಒಪ್ಪಂದವು ಜಗತ್ತಿಗೆ ಶಾಶ್ವತ ಶಾಂತಿಯನ್ನು ನೀಡಲಿಲ್ಲ. ಅದರ ಪರಿಣಾಮವಾಗಿ ಮತ್ತೊಂದು ಮಹಾಯುದ್ಧ ಸಂಭವಿಸಿತು. ಹಾಗಾದರೆ 2026 ರ ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ನಿಜವಾದ ಶಾಶ್ವತ ಶಾಂತಿಯ ಆರಂಭವಾಗಲಿದ್ಯಾ? ಅಥವಾ ಇತಿಹಾಸ ಮತ್ತೊಂದು ತಿರುವು ಪಡೆದು, ಹೊಸ ಸಂಘರ್ಷಗಳ ದಾರಿಯನ್ನು ತೆರೆದುಕೊಳ್ಳಲಿದ್ಯಾ? ಈ ಪ್ರಶ್ನೆಯ ಉತ್ತರವನ್ನು ಮಾತ್ರ ಮುಂದಿನ ವರ್ಷಗಳು ತೋರಿಸಬೇಕು.













