ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್?
ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್‌ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು.
ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ, ಯಾರ ಭೇಟಿಗು ಅವಕಾಶ ಕೊಡ್ತಿಲ್ಲ. ಜೈಲಿನಲ್ಲಿ ಬೆದರಿಕೆ ಇದೆ ಅಂತೆಲ್ಲಾ ಜಾಮೀನು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ದರ್ಶನ್ ಜೈಲು ವಾಸದ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳು ಸುಪ್ರೀಂಕೋರ್ಟ್ ವರದಿ ನೀಡಿದ್ದರು. ಅಧಿಕಾರಿಗಳ ವರದಿಯಲ್ಲಿ ದರ್ಶನ್ ಲೈಫ್ ಸ್ಟೈಲ್ ಕಂಪ್ಲೀಟ್ ಡಿಟೈಲ್ ಉಲ್ಲೇಖವಾಗಿದೆ.
ನಟ ದರ್ಶನ್ ಜೈಲು ಸೇರಿದ ಬಳಿಕ ಆಗಸ್ಟ್ 2025 ರಿಂದ 2026 ಮೇ ವರೆಗೆ ಸುಮಾರು 70 ಬಾರಿ ಕುಟುಂಬಸ್ಥರು, 28 ಬಾರಿ ವಕೀಲರನ್ನು ಭೇಟಿ ಮಾಡಿದ್ದಾರೆ. 73 ಬಾರಿ ಜೈಲಿನಿಂದ ಪೋನ್ ಕರೆ ಮಾಡಿದ್ದಾರೆ. ದರ್ಶನ್ ಬ್ಯಾರಕ್ ನಲ್ಲಿದೆ ಕಾರ್ಪೆಟ್, ಕಂಬಳಿ, ಬೆಡ್ ಶೀಟ್, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್, ಚಾದರ್/ಕಂಬಳಿ ವ್ಯವಸ್ಥೆ ಮಾಡಲಾಗಿದೆ.
ಇನ್ನು ನಟ ದರ್ಶನ್ ಇರುವ ಬ್ಯಾರಕ್ ನಲ್ಲಿ 24/7 ಭದ್ರತೆ. ಹಗಲು ವೇಳೆ ಒಬ್ಬ ಸಹಾಯಕ ಜೈಲರ್ ಹಾಗೂ ಒಬ್ಬ ವಾರ್ಡರ್, ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್ ಗಳ ನಿಯೋಜನೆ ಮಾಡಲಾಗಿದೆ. ಇತರ ಖೈದಿಗಳು ಕಾರಿಡಾರ್ ಗೆ ಬರದಂತೆ ಭದ್ರತೆ ಹಾಗೂ ಬ್ಯಾರಕ್ ಮುಂಬಾಗದ ಕಾರಿಡಾರ್ ನಲ್ಲಿ ಸಿಸಿಟಿವಿಗಳ ಅಳವಡಿಕೆ ಮಾಡಿ ಕಮಾಂಡ್ ಸೆಂಟರ್ ನಲ್ಲಿ ಸಿಸಿಟಿವಿಗಳ ನಿರಂತರ ಪರಿಶೀಲನೆ ನಡೆಸಲಾಗಿದೆ.
ದರ್ಶನ್ ಗೆ ಮೂಲಭೂತ ಸೌಕರ್ಯ ಮತ್ತು ಉತ್ತಮ ಸೌಲಭ್ಯ ಇರುವ ಬ್ಯಾರಕ್ ನಲ್ಲಿ ಗಾಳಿ, ಬೆಳಕು, ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಪರದೆ ಅಳವಡಿಕೆ. ವಿಶಾಲವಾದ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ಭಾರತೀಯ ಮತ್ತು ವೆಸ್ಟರ್ನ್ ಶೌಚಾಲಯ ಸೌಲಭ್ಯ, ಫಿಸಿಯೋಥೆರಪಿಸ್ಟ್ ಸಲಹೆ ಮೇರೆಗೆ ಕುರ್ಚಿ ವ್ಯವಸ್ಥೆ ಮಾಡಲಾಗಿದೆ.
ಜೈಲಿನ ವೈದ್ಯರ ಸಲಹೆಯಂತೆ ಮೊಟ್ಟೆ, ಬ್ರೆಡ್ ಮತ್ತು ಹಾಲಿನಂತಹ ಹೆಚ್ಚುವರಿ ಆಹಾರ ವ್ಯವಸ್ಥೆ ನೀಡಲಾಗಿದೆ. ಸಂದರ್ಶನ ಸಮಯದಲ್ಲಿ ತರುವ ಹಣ್ಣುಗಳು, ಡ್ರೈ ಫ್ರೂಟ್ಸ್, ಬೇಕರಿ ಮತ್ತು ಸಿಹಿತಿಂಡಿ ಪದಾರ್ಥಗಳು ನೀಡಲಾಗುತ್ತಿದೆ. ಕೋರ್ಟ್ ಸೂಚನೆ ಮೇರೆಗೆ ಟಿವಿ , ಕ್ಯಾರಂ, ದಿನಪತ್ರಿಕೆ, ಮಾಸಿಕ ಪತ್ರಿಕೆಗಳು ಮತ್ತು ಪುಸ್ತಕಗಳು, ಸ್ನಾನದ ಸೋಪು, ಬಟ್ಟೆ ತೊಳೆಯುವ ಸೋಪು, ತೆಂಗಿನ ಎಣ್ಣೆ, ಟೂತ್ ಪೇಸ್ಟ್, ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್ ಸೇರಿದಂತೆ ಸೂಕ್ತ ವ್ಯವಸ್ಥೆ ನೀಡಲಾಗಿದೆ ಎಂದಿದ್ದಾರೆ.
ವರದಿ: ಮುನಿರಾಜು, ಕ್ರೈಮ್ ಬ್ಯೂರೋ ನ್ಯೂಸ್ 18 ಬೆಂಗಳೂರು












