Last Updated:
Cockroach Janata Party: ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್‌ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ ಅಭಿಯಾನವೇ ಲಕ್ಷಾಂತರ ಯುವಕರ ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಭಾರತದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕಾಕ್‌ರೋಚ್ ಜನತಾ ಪಾರ್ಟಿ (CJP) ಎಂಬ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಹಾಸ್ಯಾತ್ಮಕ ಮೀಮ್ ಪೇಜ್‌ಗಳು ಟ್ರೆಂಡ್ ಆಗುವುದು ಹೊಸದಲ್ಲ. ಆದರೆ ಈ ಬಾರಿ ಒಂದು ವ್ಯಂಗ್ಯಾತ್ಮಕ ರಾಜಕೀಯ (Politics) ಅಭಿಯಾನವೇ ಲಕ್ಷಾಂತರ ಯುವಕರ (Youth) ಗಮನ ಸೆಳೆದಿದೆ. ಇದರ ಹಿಂದೆ ಇರುವ ಆ ಪತ್ರಕರ್ತ ಯಾರು ಗೊತ್ತಾ? ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ.
30 ವರ್ಷದ ಅಭಿಜೀತ್ ದೀಪ್ಕೆ ಮಹಾರಾಷ್ಟ್ರದ ಯುವ ರಾಜಕೀಯ ಸಂವಹನ ತಜ್ಞ. ಭಾರತದಲ್ಲಿ ಪತ್ರಿಕೋದ್ಯಮ ಅಭ್ಯಾಸ ಮಾಡಿದ ಬಳಿಕ ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ರಿಲೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಭಾರತಕ್ಕೆ ಮರಳಿ ಡಿಜಿಟಲ್ ರಾಜಕೀಯ ಅಭಿಯಾನಗಳಲ್ಲಿ ಕೆಲಸ ಮಾಡಿದರು. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನ್ಯಾರೇಟಿವ್ ಕಟ್ಟುವಲ್ಲಿ ಅವರಿಗೆ ಅನುಭವವಿದೆ. ಈ ಹಿಂದೆ ಅವರು ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣ ತಂಡದೊಂದಿಗೆ ಕೆಲಸ ಮಾಡಿದ್ದರ ಬಗ್ಗೆ ವರದಿಗಳು ಹೇಳುತ್ತವೆ.
ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಲು ಕಾರಣವೂ ಆಸಕ್ತಿದಾಯಕ. ಇತ್ತೀಚೆಗೆ ಉದ್ಯೋಗವಿಲ್ಲದ ಯುವಕರ ಕುರಿತು ನಡೆದ ವಿವಾದಾತ್ಮಕ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಇದರಿಂದ ಬೇಸತ್ತ ಯುವಜನರ ಭಾವನೆಗಳನ್ನು ವ್ಯಂಗ್ಯದ ಮೂಲಕ ವ್ಯಕ್ತಪಡಿಸಲು ಅಭಿಜೀತ್ ಈ ಡಿಜಿಟಲ್ ರಾಜಕೀಯ ವೇದಿಕೆಯನ್ನು ಆರಂಭಿಸಿದರು. ಸಿಸ್ಟಮ್ ಮರೆತವರ ಧ್ವನಿ ಎಂಬ ಟ್ಯಾಗ್‌ಲೈನ್‌ನೊಂದಿಗೆ ಆರಂಭವಾದ ಈ ಅಭಿಯಾನ ಕೆಲವೇ ದಿನಗಳಲ್ಲಿ ಭಾರೀ ವೈರಲ್ ಆಯಿತು.
ಈ ಪಾರ್ಟಿಯ ವಿಶೇಷತೆ ಅದರ ಹಾಸ್ಯಭರಿತ ರಾಜಕೀಯ ಶೈಲಿ. ನಿರುದ್ಯೋಗ, ಪರೀಕ್ಷಾ ಅಕ್ರಮ, ಶಿಕ್ಷಣ ವ್ಯವಸ್ಥೆ, ಬೆಲೆ ಏರಿಕೆ, ಮಾಧ್ಯಮಗಳ ಪಾತ್ರ ಸೇರಿದಂತೆ ಯುವಕರ ಸಮಸ್ಯೆಗಳನ್ನು ಮೀಮ್‌ಗಳ ಮೂಲಕ ಹೇಳಲಾಗುತ್ತಿದೆ. ಇದರಿಂದಲೇ ಜನ್ Z ಪೀಳಿಗೆಯವರು ಇದಕ್ಕೆ ಸೆಳೆಯಲ್ಪಟ್ಟಿದ್ದಾರೆ. ವರದಿಗಳ ಪ್ರಕಾರ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ಇನ್‌ಸ್ಟಾಗ್ರಾಂನಲ್ಲಿ ಇದನ್ನು ಫಾಲೋ ಮಾಡಿದ್ದು, ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚಿನ ಡಿಜಿಟಲ್ ರೀಚ್ ಪಡೆದಿದೆ.
ಅಭಿಜೀತ್ ದೀಪ್ಕೆ ಹೇಳುವಂತೆ, ಇದು ಕೇವಲ ಹಾಸ್ಯವಲ್ಲ, ಯುವಕರ ಅಸಮಾಧಾನವನ್ನು ಶಾಂತಿಯುತವಾಗಿ ವ್ಯಕ್ತಪಡಿಸುವ ಡಿಜಿಟಲ್ ಚಳವಳಿಯಾಗಿದೆ. ಭಾರತದಲ್ಲಿ ದೊಡ್ಡ ಸಂಖ್ಯೆಯ ಯುವಕರು ಉದ್ಯೋಗ, ಶಿಕ್ಷಣ ಹಾಗೂ ಭವಿಷ್ಯದ ಅನಿಶ್ಚಿತತೆಯಿಂದ ಬಳಲುತ್ತಿದ್ದಾರೆ. ಆ ಅಸಮಾಧಾನಕ್ಕೆ “ಕಾಕ್‌ರೋಚ್” ಎಂಬ ರೂಪಕದ ಮೂಲಕ ಧ್ವನಿ ನೀಡಲಾಗಿದೆ.
ಆದರೆ ಇದರ ರಾಜಕೀಯ ನಂಟುಗಳ ಬಗ್ಗೆ ಪ್ರಶ್ನೆಗಳೂ ಎದ್ದಿವೆ. ಕೆಲವರು ಇದನ್ನು ವ್ಯಂಗ್ಯ ಚಳವಳಿ ಎನ್ನುತ್ತಿದ್ದರೆ, ಇನ್ನೂ ಕೆಲವರು ಇದನ್ನು ಪರೋಕ್ಷ ರಾಜಕೀಯ ಅಭಿಯಾನವೆಂದು ಟೀಕಿಸುತ್ತಿದ್ದಾರೆ. ಆದರೂ ಅಭಿಜೀತ್ ದೀಪ್ಕೆ ಮಾತ್ರ “ಇದು ಜನರ ಅಸಮಾಧಾನಕ್ಕೆ ಸೃಜನಾತ್ಮಕ ಪ್ರತಿಕ್ರಿಯೆ” ಎಂದು ಹೇಳುತ್ತಿದ್ದಾರೆ. ಅಭಿಜೀತ್ ದೀಪ್ಕೆ ಆರಂಭಿಸಿದ “ಕಾಕ್‌ರೋಚ್ ಜನತಾ ಪಾರ್ಟಿ” ಈಗ ಮೀಮ್ ಮೀರಿದ ಸಾಮಾಜಿಕ ಚರ್ಚೆಯ ಕೇಂದ್ರವಾಗಿದೆ. ಇದು ಕೇವಲ ಇಂಟರ್‌ನೆಟ್ ಟ್ರೆಂಡ್ ಆಗಿಯೇ ಉಳಿಯುತ್ತದೆಯೋ ಅಥವಾ ಯುವಜನರ ರಾಜಕೀಯ ಧ್ವನಿಯಾಗುತ್ತದೆಯೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
May 21, 2026 10:38 PM IST













