Last Updated:
ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ .
ಹಾಲಿವುಡ್ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಜಾರ್ಜ್ ರಿಚ್ಮಂಡ್ (Hollywood Cinematographer George Richmond) ಭಾರತ ಪ್ರವಾಸದ ವೇಳೆ ಗಂಭೀರ ಅಪಘಾತಕ್ಕೀಡಾಗಿರುವ ಘಟನೆಯೊಂದು ಇದೀಗ ಎಲ್ಲರನ್ನು ಬೆಚ್ಚಿಬೀಳಿಸಿದೆ . ಹಿಮಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತಿದ್ದ ವೇಳೆಯೇ ಅಪಘಾತಕ್ಕೀಡಾಗಿ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ತಕ್ಷಣದ ರಕ್ಷಣಾ ಕಾರ್ಯಾಚರಣೆ, ವೈದ್ಯಕೀಯ ನೆರವು ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯ ಪರಿಣಾಮ ಇದೀಗ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜಾರ್ಜ್ ರಿಚ್ಮಂಡ್ ವಿಶ್ವದ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಡೆಡ್‌ಪೂಲ್ ಅಂಡ್ ವೊಲ್ವೆರಿನ್, ರಾಕೆಟ್‌ಮ್ಯಾನ್, ಫ್ರೀ ಗೈ ಮತ್ತು ಕಿಂಗ್ಸ್‌ಮನ್ ಸೇರಿದಂತೆ ಹಲವು ದೊಡ್ಡ ಬಜೆಟ್ ಹಾಲಿವುಡ್ ಚಿತ್ರಗಳಿಗೆ ಅವರು ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ತಮ್ಮ ವಿಶಿಷ್ಟ ಕ್ಯಾಮೆರಾ ತಂತ್ರಜ್ಞಾನದಿಂದ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಗಳಿಸಿರುವ ರಿಚ್ಮಂಡ್, ಸಾಹಸ ಕ್ರೀಡೆಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ.
ಮಾಹಿತಿಯ ಪ್ರಕಾರ, 54 ವರ್ಷದ ಜಾರ್ಜ್ ರಿಚ್ಮಂಡ್ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿದ್ದ ಕ್ರಾಸ್-ಕಂಟ್ರಿ ಪ್ಯಾರಾಗ್ಲೈಡಿಂಗ್ ನಲ್ಲಿ ಭಾಗವಹಿಸಿದ್ದರು. ಈ ತಂಡದಲ್ಲಿ ಒಟ್ಟು ಐವರು ಇದ್ದರು. ಕಾಂಗ್ರಾ ಜಿಲ್ಲೆಯ ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್ ಬಿಲ್ಲಿಂಗ್‌ನಿಂದ ಡಿಯೋ ಟಿಬ್ಬಾ ಪ್ರದೇಶದವರೆಗೆ ಹಾರಾಟ ನಡೆಸುವ ಪ್ಲ್ಯಾನ್ ಮಾಡಲಾಗಿತ್ತು.
ಅಪಘಾತ ಸಂಭವಿಸಿದ ತಕ್ಷಣ ಅವರೊಂದಿಗೆ ಇದ್ದ ಇತರ ಪ್ಯಾರಾಗ್ಲೈಡರ್‌ಗಳು ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳೀಯ ಆಡಳಿತ, ಹಿಮಾಚಲ ಪ್ರದೇಶದ ಅಧಿಕಾರಿಗಳು ಹಾಗೂ ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ಸಮನ್ವಯಿತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಕೆಲವೇ ಗಂಟೆಗಳಲ್ಲಿ ರಿಚ್ಮಂಡ್ ಅವರನ್ನು ಪತ್ತೆಹಚ್ಚಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಗಾಯಗಳ ತೀವ್ರತೆಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ತಿಳಿಸಿದ್ದಾರೆ. ಹೀಗಾಗಿ ಮರುದಿನ ಅವರನ್ನು ಚಂಡೀಗಢದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.ಚಂಡೀಗಢ ತಲುಪಿದ ಬಳಿಕ ಮೂಳೆ ಚಿಕಿತ್ಸಾ ತಜ್ಞರು ಹಾಗೂ ಟ್ರಾಮಾ ವೈದ್ಯರ ತಂಡ ರಿಚ್ಮಂಡ್ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅಪಘಾತದಿಂದ ಕುತ್ತಿಗೆಯ ಭಾಗಕ್ಕೆ ತೀವ್ರ ಹಾನಿಯಾಗಿರುವುದಾಗಿ ತಿಳಿಸಿದ್ದರು. ಜೂನ್ 11ರಂದು ಜಾರ್ಜ್ ರಿಚ್ಮಂಡ್ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಒಟ್ಟಾರೆಯಾಗಿ ಜಾಗತಿಕ ಮಟ್ಟದ ಖ್ಯಾತ ಛಾಯಾಗ್ರಾಹಕನೊಬ್ಬ ಅಪಘಾತಕ್ಕೀಡಾಗಿರುವ ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದು, ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕ ಗಣ್ಯರು ಶೀಘ್ರ ಚೇತರಿಕೆಗೆ ಶುಭ ಹಾರೈಸುತ್ತಿದ್ದಾರೆ. ಸದ್ಯ ಜಾರ್ಜ್ ರಿಚ್ಮಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
Bangalore [Bangalore],Bangalore,Karnataka













