Bike Racing: 8ರ ಬಾಲಕನ ಕೈಯಲ್ಲಿ 65 ಸಿಸಿ ರೇಸಿಂಗ್ ಬೈಕ್; 40ಕ್ಕೂ ಹೆಚ್ಚು ಬಹುಮಾನ ಗೆದ್ದ ಅಯಾನ್ ರಾಫಿ! | ಕ್ರೀಡಾ ಸುದ್ದಿ | ACTPnews

ಅಯಾನ್ ರಾಫಿ


Last Updated:

ಬೆಳ್ತಂಗಡಿಯ 8 ವರ್ಷದ ಅಯಾನ್ ರಾಫಿ 65 ಸಿಸಿ ರೇಸಿಂಗ್‌ ಬೈಕ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಕಳೆದ 9 ತಿಂಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಸ್ಪರ್ಧೆಗಳಲ್ಲಿ 40ಕ್ಕೂ ಹೆಚ್ಚು ಬಾರಿ ಬಹುಮಾನ ಗೆದ್ದಿದ್ದಾನೆ.

 ಅಯಾನ್ ರಾಫಿ
ಅಯಾನ್ ರಾಫಿ

ದಕ್ಷಿಣ ಕನ್ನಡ: ಎಂಟರ ಹರೆಯ… ಈ ವಯಸ್ಸಿನಲ್ಲಿ (Age) ಬಹುತೇಕ ಮಕ್ಕಳು ಮೊಬೈಲ್‌ ಆಟ, ಆಟಿಕೆ ಕಾರು-ಬೈಕ್‌ಗಳ ಜೊತೆ ಕಾಲ ಕಳೆಯುತ್ತಾರೆ. ಆದರೆ ಬೆಳ್ತಂಗಡಿಯ ಮದ್ದಡ್ಕದ 8 ವರ್ಷದ ಅಯಾನ್‌ ರಾಫಿ ಕಥೆ ಮಾತ್ರ ವಿಭಿನ್ನ. ಈ ಬಾಲಕ ಈಗಾಗಲೇ 65 ಸಿಸಿ ರೇಸಿಂಗ್‌ ಬೈಕ್‌ ಮೇಲೆ ತರಬೇತಿ (Training) ಪಡೆಯುತ್ತಿದ್ದು, ಕಳೆದ 9 ತಿಂಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ರೇಸಿಂಗ್‌ ಸ್ಪರ್ಧೆಗಳಲ್ಲಿ 40ಕ್ಕೂ ಹೆಚ್ಚು ಬಾರಿ ಬಹುಮಾನ ಗೆದ್ದಿದ್ದಾನೆ. ಇತ್ತೀಚೆಗೆ ಕೊಯಮತ್ತೂರಿನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಅಂಡರ್‌-10 ಓವರ್‌ಆಲ್‌ ವಿನ್ನರ್‌ ಹಾಗೂ ಬೆಸ್ಟ್‌ ರೈಡರ್‌ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದ್ದಾನೆ.

ಚಿಕ್ಕಂದಿನಿಂದಲೇ ರೇಸಿಂಗ್‌ ಆಸಕ್ತಿ

ಅಯಾನ್‌ಗೆ ಚಿಕ್ಕಂದಿನಿಂದಲೇ ವೇಗದ ಮೇಲೆ ವಿಶೇಷ ಆಸಕ್ತಿ. ರೇಸಿಂಗ್‌ ಬಗ್ಗೆ ಕುತೂಹಲವಿದ್ದ ಬಾಲಕ ಸೈಕಲ್‌ನಲ್ಲೇ ವೇಗವಾಗಿ ಸವಾರಿ ಮಾಡುತ್ತಿದ್ದ. ಮುಂದೆ ಮೋಟಾರ್‌ಬೈಕ್‌ಗಳತ್ತವೂ ಆಕರ್ಷಣೆ ಹೆಚ್ಚಾಗಿತ್ತು. ಮಗನ ಆಸಕ್ತಿಯನ್ನು ಗಮನಿಸಿದ ತಂದೆ ಮೊಹಮ್ಮದ್‌ ರಫೀಕ್, ಆತನಿಗೆ ಅನುಭವ ಸಿಗಲಿ ಎಂದು ಕೊಯಮತ್ತೂರಿನ ಮೋಟಾರ್‌ರೇಸ್‌ ತರಬೇತಿ ಟ್ರ್ಯಾಕ್‌ಗೆ ಕರೆದೊಯ್ದಿದ್ದರು. ಅಲ್ಲಿ ಬೈಕ್‌ ಓಡಿಸಿದ ಅಯಾನ್‌ನ ಸಾಮರ್ಥ್ಯ ಗಮನಿಸಿದ ತರಬೇತುದಾರರು, ಸರಿಯಾದ ತರಬೇತಿ ನೀಡಿದರೆ ಬಾಲಕ ರೇಸಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ಒಂದರ ಮೇಲೊಂದು ರೇಸ್

ಆ ಸಲಹೆಯ ಬಳಿಕ ಅಯಾನ್‌ನ ರೇಸಿಂಗ್‌ ಪಯಣ ನಿಜವಾಗಿಯೂ ಆರಂಭವಾಯಿತು. ಮಗನಿಗಾಗಿ ರಫೀಕ್‌ 50 ಸಿಸಿ ಸಾಮರ್ಥ್ಯದ ಪುಟ್ಟ ಬೈಕ್‌ ಖರೀದಿಸಿದರು. ಅದರಲ್ಲಿ ಅಯಾನ್‌ ತರಬೇತಿ ಆರಂಭಿಸಿದ. ಆದರೆ ಕೆಲವು ತಿಂಗಳಲ್ಲಿ ಆ ಬೈಕ್‌ ಕೆಟ್ಟುಹೋಯಿತು. ಬಳಿಕ ಸುಮಾರು 8 ತಿಂಗಳ ಹಿಂದೆ 65 ಸಿಸಿ GasGas ಮಿನಿ ರೇಸಿಂಗ್‌ ಬೈಕ್‌ ತರಿಸಲಾಯಿತು. ಅದರಲ್ಲಿ ತರಬೇತಿ ಪಡೆಯುತ್ತಿರುವ ಅಯಾನ್‌ ಇದೀಗ ಸ್ಪರ್ಧೆಗಳಲ್ಲೂ ಒಂದಾದ ಮೇಲೊಂದರಂತೆ ಗಮನ ಸೆಳೆಯುತ್ತಿದ್ದಾರೆ.

ಇದು ಕೇವಲ ಅಭ್ಯಾಸ ಮಾತ್ರವಲ್ಲ!

ಹೆಚ್ಚು ಗಮನ ಸೆಳೆಯುವ ಅಂಶವೆಂದರೆ, ಇದು ಕೇವಲ ಅಭ್ಯಾಸಕ್ಕೆ ಸೀಮಿತವಾಗಿಲ್ಲ. ಕಳೆದ ಒಂಬತ್ತು ತಿಂಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಅಯಾನ್‌ 40ಕ್ಕೂ ಹೆಚ್ಚು ಬಾರಿ ಬಹುಮಾನ ಗೆದ್ದಿದ್ದಾನೆ ಎಂದು ಕುಟುಂಬ ತಿಳಿಸಿದೆ. ಇತ್ತೀಚಿನ ಕೊಯಮತ್ತೂರು ಸ್ಪರ್ಧೆಯಲ್ಲಿನ ಅಂಡರ್‌-10 ಓವರ್‌ಆಲ್‌ ವಿನ್ನರ್‌ ಮತ್ತು ಬೆಸ್ಟ್‌ ರೈಡರ್‌ ಪ್ರಶಸ್ತಿಗಳು ಬಾಲಕನ ಪಯಣಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡಿವೆ. ಅಯಾನ್‌ಗೆ ಮಾರ್ಗದರ್ಶನ ನೀಡುತ್ತಿರುವವರಲ್ಲಿ ಮಂಗಳೂರಿನ ಎಸ್‌ಎ ಮೋಟೊ ಡಿಸೈನ್‌ನ ಸುನಿಲ್‌ ಆಚಾರ್ಯ ಪ್ರಮುಖರು. ಈಗ ಅಯಾನ್‌ನ ತರಬೇತಿ ಇನ್ನಷ್ಟು ಗಂಭೀರ ಹಂತಕ್ಕೆ ಸಾಗುತ್ತಿದೆ. ವಾರಾಂತ್ಯಗಳಲ್ಲಿ ವಿಶೇಷವಾಗಿ ಅಭ್ಯಾಸ ನೀಡಲಾಗುತ್ತಿದ್ದು, ಮುಂದಿನ ಹಂತದ ಸ್ಪರ್ಧೆಗಳಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಅಯಾನ್‌ ಕಣ್ಣಲ್ಲಿ ಕಾಣಿಸುತ್ತಿದೆ ರೇಸಿಂಗ್‌ ಟ್ರೋಫಿ!

ಅಯಾನ್‌ನ ಮುಂದಿನ ಗುರಿಯೂ ದೊಡ್ಡದೇ. MRF Moto National Racing Championshipನಲ್ಲಿ ಸ್ಪರ್ಧಿಸುವ ಕನಸು ಬಾಲಕನದ್ದಾಗಿದೆ. ಆದರೆ ಅದಕ್ಕಾಗಿ ಆತ 9 ವರ್ಷ ಪೂರೈಸಿ 10ನೇ ವರ್ಷಕ್ಕೆ ಕಾಲಿಡಬೇಕು ಎಂದು ತಂದೆ ರಫೀಕ್‌ ಹೇಳಿದ್ದಾರೆ. ಹೀಗಾಗಿ ಸದ್ಯ ಸ್ಪರ್ಧೆಗಿಂತ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಗನ ಆಸಕ್ತಿಯನ್ನು ಗಮನಿಸಿದ ರಫೀಕ್‌ ಇದೀಗ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ, ಅಯಾನ್‌ಗೆ ಹೆಚ್ಚಿನ ಮಟ್ಟದ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಅಯಾನ್‌ ರಾಷ್ಟ್ರೀಯ ರೇಸಿಂಗ್‌ ಚಾಂಪಿಯನ್‌ ಸುಹೇಲ್‌ ಅಹಮದ್‌ ಅವರಿಂದ ತರಬೇತಿ ಪಡೆಯುತ್ತಿದ್ದಾನೆ ಎಂದು ಕುಟುಂಬ ತಿಳಿಸಿದೆ. ಸ್ಥಳೀಯ ಸ್ಪರ್ಧೆಗಳಿಂದ ರಾಷ್ಟ್ರೀಯ ಮಟ್ಟದ ರೇಸಿಂಗ್‌ ಕಡೆಗೆ ಹೆಜ್ಜೆ ಇಡುವ ಸಿದ್ಧತೆ ಈಗಲೇ ಆರಂಭವಾಗಿದೆ.

ವೃತ್ತಿಪರ ರೇಸರ್‌ ಆಗೋ ಕನಸು

ಇದನ್ನೂ ಓದಿ: Bappanadu Temple: ಒಡೆಯಲಿಲ್ಲ, ಕೆಡವಲಿಲ್ಲ; 20 ಅಡಿ ಹಿಂದಕ್ಕೆ ಸರಿದ ಬಪ್ಪನಾಡು ದೇಗುಲದ ಸ್ವಾಗತ ಗೋಪುರ! ಇದು ಹರಿಯಾಣ ಟೆಕ್ನಿಕ್

ಅಯಾನ್‌ನ ಕನಸು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲೇ ನಿಲ್ಲುವುದಿಲ್ಲ. ಮುಂದೆ ವೃತ್ತಿಪರ ರೇಸರ್‌ ಆಗಬೇಕು ಎಂಬ ಆಸೆ ಬಾಲಕನಿಗಿದೆ. ಜಗತ್ತಿನ ಕಠಿಣ ಆಫ್‌ರೋಡ್‌ ಮೋಟಾರ್‌ಸೈಕಲ್‌ ಸ್ಪರ್ಧೆಗಳಲ್ಲಿ ಒಂದಾದ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸುವುದು ತನ್ನ ಕನಸು ಎಂದು ಅಯಾನ್‌ ತಂದೆಯ ಮೂಲಕ ಹೇಳಿಕೊಂಡಿದ್ದಾನೆ. ಎಂಟರ ಹರೆಯದಲ್ಲೇ 65 ಸಿಸಿ ರೇಸಿಂಗ್‌ ಬೈಕ್‌, ಕಳೆದ ಒಂಬತ್ತು ತಿಂಗಳಲ್ಲಿ 40ಕ್ಕೂ ಹೆಚ್ಚು ಪ್ರಶಸ್ತಿಗಳು, ಈಗ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ತರಬೇತಿ… ಅಯಾನ್‌ ರಾಫಿಯ ಪಯಣ ವೇಗವಾಗಿ ಸಾಗುತ್ತಿದೆ. ಮುಂದೆ ಈ ಬಾಲಕನ ಹೆಸರು ರಾಷ್ಟ್ರೀಯ ರೇಸಿಂಗ್‌ ಟ್ರ್ಯಾಕ್‌ನಲ್ಲಿ ಎಷ್ಟು ದೂರ ಮೊಳಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಮದ್ದಡ್ಕದ ಈ ಪುಟ್ಟ ರೇಸರ್‌ನ ಕಣ್ಣಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಿಂದ ಡಕಾರ್‌ ರ‍್ಯಾಲಿವರೆಗಿನ ದೊಡ್ಡ ಕನಸು ಕಾಣುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed