Last Updated:
ಕೆ ರೈಡ್ ಬೆಂಗಳೂರು Suburban Rail ಯೋಜನೆಯಲ್ಲಿ CBTC ಬಿಟ್ಟು ETCS ಅಳವಡಿಸಲು ನಿರ್ಧರಿಸಿದೆ, 148 ಕಿಮೀ ಜಾಲದಲ್ಲಿ ಸುರಕ್ಷತೆ, ವೇಗ ಹೆಚ್ಚಿಸಿ 2028ರೊಳಗೆ ಕಾಮಗಾರಿ ಮುಗಿಸುವ ಗುರಿಯನ್ನು ಬೆಂಗಳೂರು ಉಪ ರೈಲು ಯೋಜನೆ ಹೊಂದಿದೆ
ಬೆಂಗಳೂರು: ನಗರದ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡಲಿರುವ 148 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು (Suburban Rail) ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಮೊದಲು ಯೋಜಿಸಲಾಗಿದ್ದ ಕಮ್ಯುನಿಕೇಷನ್-ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ವ್ಯವಸ್ಥೆಯನ್ನು ಕೈಬಿಟ್ಟು, ಅದರ ಬದಲು ಯುರೋಪಿಯನ್ ಟ್ರೈನ್ ಕಂಟ್ರೋಲ್ ಸಿಸ್ಟಮ್ (ETCS) ಅಳವಡಿಸಲು ಕೆ-ರೈಡ್ (K-RIDE) ಮುಂದಾಗಿದೆ. ಈ ಹೊಸ ವ್ಯವಸ್ಥೆಯು ಬೆಂಗಳೂರಿನ ಹೊರವಲಯ ಹಾಗೂ ನೆರೆಯ ಜಿಲ್ಲೆಗಳಿಗೆ ವೇಗದ ಮತ್ತು ಅಡೆತಡೆಯಿಲ್ಲದ ರೈಲು ಸಂಚಾರಕ್ಕೆ ದಾರಿ ಮಾಡಿಕೊಡಲಿದೆ.
ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ‘ಉಪನಗರ ರೈಲಿನ ಎಲ್ಲಾ ನಾಲ್ಕು ಕಾರಿಡಾರ್ಗಳಿಗೆ ETCS ಅನ್ನು ಪ್ರಸ್ತಾಪಿಸಿದ್ದೇವೆ. ಭವಿಷ್ಯದಲ್ಲಿ ನೆಟ್ವರ್ಕ್ ವಿಸ್ತರಣೆ ಮತ್ತು 200-250 ಕಿ.ಮೀ ವೇಗದಲ್ಲಿ ರೈಲು ಕಾರ್ಯಾಚರಣೆ ಮಾಡಲು ಇದು ಸೂಕ್ತವಾಗಿದೆ. ಸಿಬಿಟಿಸಿ ವ್ಯವಸ್ಥೆ ದೂರದ ಮತ್ತು ಅತಿ ವೇಗದ ಕಾರಿಡಾರ್ಗಳಿಗೆ ಅಷ್ಟು ಸೂಕ್ತವಲ್ಲ, ಆದ್ದರಿಂದ ಈ ಬದಲಾವಣೆ ತರಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಮೂಲ ಡಿಪಿಆರ್ನಲ್ಲಿ ನಮ್ಮ ಮೆಟ್ರೋದ ಹಳದಿ, ಗುಲಾಬಿ ಮತ್ತು ನೀಲಿ ಮಾರ್ಗಗಳಲ್ಲಿರುವಂತೆ ಸಿಬಿಟಿಸಿ ಸಿಗ್ನಲಿಂಗ್ ಪ್ರಸ್ತಾಪಿಸಲಾಗಿತ್ತು. ಆದರೆ, ನಗರದೊಳಗಿನ ಸಂಚಾರಕ್ಕೆ ಇದು ಸೂಕ್ತವಾದರೂ, ಹೊರವಲಯ ಮತ್ತು ನೆರೆಯ ಜಿಲ್ಲೆಗಳಿಗೆ ಜಾಲ ವಿಸ್ತರಣೆಯಾದಾಗ ವೇಗದ ಸಂಚಾರಕ್ಕೆ ಇಟಿಸಿಎಸ್ ಅತ್ಯಗತ್ಯ. ದೆಹಲಿ-ಗಾಜಿಯಾಬಾದ್-ಮೀರತ್ನ 82-ಕಿಮೀ ನಮೋ ಭಾರತ್ ಕಾರಿಡಾರ್ನಲ್ಲಿ ಪ್ರಸ್ತುತ ETCS ಲೆವೆಲ್ 2 ಕಾರ್ಯನಿರ್ವಹಿಸುತ್ತಿದ್ದು, 508 ಕಿಮೀ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೂ ಇದರದೇ ರೀತಿಯ ಕವಚ್ ತಂತ್ರಾಂಶ ಬಳಸಲಾಗುತ್ತಿದೆ. ಇದು ಸ್ವಯಂಚಾಲಿತ ರೈಲು ರಕ್ಷಣೆ (ATP), ಕಾರ್ಯಾಚರಣೆ (ATO) ಮತ್ತು ಮೇಲ್ವಿಚಾರಣೆ (ATS) ವ್ಯವಸ್ಥೆಗಳನ್ನು ಒಳಗೊಂಡಿದ್ದು, ಸುರಕ್ಷತೆ ಹೆಚ್ಚಿಸುವ ಜೊತೆಗೆ ರೈಲುಗಳ ನಡುವಿನ ಅಂತರ ಕಡಿತಗೊಳಿಸಿ ವೇಗದ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಎಂದು ́Money Control ವರದಿ ಮಾಡಿದೆ
ಬೆಂಗಳೂರು ಉಪನಗರ ರೈಲು ಯೋಜನೆಯು 148 ಕಿ.ಮೀ ವ್ಯಾಪ್ತಿಯಲ್ಲಿ 4 ಕಾರಿಡಾರ್ಗಳನ್ನು ಹೊಂದಿದೆ. 41.4 ಕಿ.ಮೀ ಉದ್ದದ ‘ಸಂಪಿಗೆ ಲೈನ್’ ಕೆಎಸ್ಆರ್ ಬೆಂಗಳೂರು ಸಿಟಿಯಿಂದ ದೇವನಹಳ್ಳಿ ಏರ್ಪೋರ್ಟ್ಗೆ ಸಂಪರ್ಕ ಕಲ್ಪಿಸುತ್ತದೆ. 25 ಕಿ.ಮೀ ಉದ್ದದ ‘ಮಲ್ಲಿಗೆ ಲೈನ್’ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ, 35.5 ಕಿ.ಮೀ ಉದ್ದದ ‘ಪಾರಿಜಾತ ಲೈನ್’ ಕೆಂಗೇರಿಯಿಂದ ವೈಟ್ಫೀಲ್ಡ್, ಮತ್ತು 46.25 ಕಿ.ಮೀ ಉದ್ದದ ‘ಕನಕ ಲೈನ್’ ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕ ಕಲ್ಪಿಸುತ್ತದೆ. ಭವಿಷ್ಯದಲ್ಲಿ ಇನ್ನೂ 146 ಕಿ.ಮೀ ಕಾರಿಡಾರ್ ವಿಸ್ತರಿಸುವ ಪ್ರಸ್ತಾಪವಿತ್ತು, ಆದರೆ ನೈಋತ್ಯ ರೈಲ್ವೆ ಇದನ್ನು ತಿರಸ್ಕರಿಸಿದೆ.
ಏನಿದು ETCS? ಹೇಗೆ ಕಾರ್ಯ ನಿರ್ವಹಿಸುತ್ತದೆ?
ಚಾಲಕರು ಸಿಗ್ನಲ್ ನೋಡದೆ ಹೋಗುವುದು, ವೇಗ ಹೆಚ್ಚಿಸುವುದು ಅಥವಾ ಇತರ ರೈಲುಗಳೊಂದಿಗೆ ಡಿಕ್ಕಿ ಆಗುವ ಸಾಧ್ಯತೆ ಇರುತ್ತದೆ. ETCS ಈ ತಪ್ಪುಗಳನ್ನು ಸ್ವಯಂಚಾಲಿತವಾಗಿ ಗುರುತಿಸಿ ರೈಲನ್ನು ಸ್ವಯಂ ಬ್ರೇಕ್ ಹಾಕುತ್ತದೆ, ವೇಗವನ್ನು ನಿಯಂತ್ರಿಸುತ್ತದೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತದೆ. ಇದರಿಂದ ರೈಲು ಅಪಘಾತಗಳು ಬಹಳ ಕಡಿಮೆಯಾಗುತ್ತವೆ, ಪ್ರಯಾಣ ಸುರಕ್ಷಿತವಾಗುತ್ತದೆ, ವೇಗ ಹೆಚ್ಚಾಗುತ್ತದೆ ಮತ್ತು ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತವೆ. ಸಾಮಾನ್ಯ ಪ್ರಯಾಣಿಕರಿಗೆ ಇದು ಜೀವ ಉಳಿಸುವಂತಹ ಸುರಕ್ಷತೆ, ಕಡಿಮೆ ತಡವುಗಳು ಮತ್ತು ಹೆಚ್ಚು ವಿಶ್ವಾಸಾರ್ಹ ರೈಲು ಸಾರಿಗೆಯನ್ನು ನೀಡುತ್ತದೆ. ಭಾರತದಲ್ಲಿ ಕವಚ್ ಮತ್ತು ಹೈ-ಸ್ಪೀಡ್ ರೈಲುಗಳಲ್ಲಿ ಇದೇ ತಂತ್ರಜ್ಞಾನ ಬಳಕೆಯಾಗುತ್ತಿರುವುದು ನಮ್ಮ ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತ ಮತ್ತು ಆಧುನಿಕಗೊಳಿಸುತ್ತಿದೆ. ಈ ರೀತಿಯ ತಂತ್ರಾಂಶದಲ್ಲಿ ಚೀನಾ ಪ್ರಥಮ ಸ್ಥಾನ ಕಾಯ್ದುಕೊಂಡು ಅತ್ಯಂತ ಸುರಕ್ಷಿತ ರೈಲು ವ್ಯವಸ್ಥೆ ಹೊಂದಿದ್ದರೆ ಎರಡನೆಯದೇ ಈ ETCS ಅನ್ನೋದು ಗಮನಾರ್ಹ!
Bangalore [Bangalore],Bangalore,Karnataka













