Hong Kong Sixes: ಭಾರತ ತಂಡವನ್ನ ಮುನ್ನಡೆಸಲಿದ್ದಾರೆ ಭುವನೇಶ್ವರ್ ಕುಮಾರ್! ಕೃನಾಲ್, ಶಶಾಂಕ್ ಸಿಂಗ್‌ಗೂ ಸಿಕ್ತು ಚಾನ್ಸ್ | ಕ್ರೀಡಾ ಸುದ್ದಿ | ACTPnews

ಭುವನೇಶ್ವರ್ ಕುಮಾರ್ (AP)


Last Updated:

ಹಾಂಗ್ ಕಾಂಗ್ ಸಿಕ್ಸಸ್ 2026ರ ಟೂರ್ನಿಗೆ ಭಾರತ ತಂಡವನ್ನ ಆಯ್ಕೆ ಮಾಡಲಾಗಿದ್ದು, ಆರ್​ಸಿಬಿ ಸ್ಟಾರ್ ಭುವನೇಶ್ವರ್ ಕುಮಾರ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಭುವನೇಶ್ವರ್ ಕುಮಾರ್ (AP)
ಭುವನೇಶ್ವರ್ ಕುಮಾರ್ (AP)

ಕಳೆದ ಮೂರು ವರ್ಷಗಳಿಂದ ಭಾರತ ತಂಡದಿಂದ (Team India) ಹೊರಗುಳಿದಿರುವ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ (Bhuvneshwar Kumar) ಮತ್ತು ಆಲ್‌ರೌಂಡರ್ ಕೃನಾಲ್ ಪಾಂಡ್ಯ ಮುಂಬರುವ ಹಾಂಗ್ ಕಾಂಗ್ ಸಿಕ್ಸಸ್ (Hong Kong Sixes) ಕ್ರಿಕೆಟ್ ಟೂರ್ನಿಯ 2026 ರ ಆವೃತ್ತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ವಿಶೇಷ ಟೂರ್ನಿಯು ರವರೆಗೆ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್‌ನಲ್ಲಿ ಜರುಗಲಿದೆ. ಈ ವರ್ಷದ ಆವೃತ್ತಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸುತ್ತಿದ್ದು, ಭಾರತ ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡಗಳೊಂದಿಗೆ ‘ಸಿ’ ಗ್ರೂಪ್‌ನಲ್ಲಿ ಸ್ಥಾನ ಪಡೆದಿದೆ.

2012 ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ, ಭಾರತದ ಪರ ಮೂರೂ ಮಾದರಿಯ ಕ್ರಿಕೆಟ್ ಆಡಿರುವ ಭುವನೇಶ್ವರ್ ಕುಮಾರ್ ಅವರನ್ನು ಈ ಟೂರ್ನಿಗೆ ಭಾರತ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಭುವನೇಶ್ವರ್ ಅವರಿಗೆ ದೇಶಿ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಹಾಗೂ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹಂಗಾಮಿ ನಾಯಕರಾಗಿ ಮುನ್ನಡೆಸಿದ ಉತ್ತಮ ಅನುಭವವಿದೆ.

ಸಕ್ರಿಯ ಕ್ರಿಕೆಟಿಗರೇ ಭಾಗಿ

ಈ ಟೂರ್ನಿಯ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಕೃಣಾಲ್ ಪಾಂಡ್ಯ ಅವರಲ್ಲದೆ, ನಿತೀಶ್ ರಾಣಾ, ಶಶಾಂಕ್ ಸಿಂಗ್, ಟಿ. ನಟರಾಜನ್, ರಾಹುಲ್ ತೆವಾಟಿಯಾ ಮತ್ತು ರಾಹುಲ್ ತ್ರಿಪಾಠಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಈ ವರ್ಷ ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಏಳು ಆಟಗಾರರೂ ಪ್ರಸ್ತುತ ಸಕ್ರಿಯ ಕ್ರಿಕೆಟರ್ಸ್ ಆಗಿದ್ದು, ಯಾರೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿಲ್ಲ ಎಂಬುದು ವಿಶೇಷವಾಗಿದೆ. ವಾಸ್ತವವಾಗಿ, ಈ ಎಲ್ಲಾ ಏಳು ಆಟಗಾರರು ಐಪಿಎಲ್ 2026 ರ ಸೀಸನ್‌ನಲ್ಲೂ ಆಡಿದ್ದು, ಇವರಲ್ಲಿ ಮೂವರು ಆಟಗಾರರು ಫೈನಲ್ ಪಂದ್ಯದಲ್ಲೂ ಕಣಕ್ಕಿಳಿದಿದ್ದರು.

ಐಪಿಎಲ್​​ನಲ್ಲಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಆಗಿದ್ದ ಭುವಿ

ಭುವನೇಶ್ವರ್ ಕುಮಾರ್ ಅವರು 2022 ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದ ನಂತರ ಭಾರತದ ಪರ ಯಾವುದೇ ಪಂದ್ಯವನ್ನು ಆಡಿಲ್ಲ. ಐಪಿಎಲ್ 2026 ರ ಸೀಸನ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಗಿಸಿದ ನಂತರ ಅವರನ್ನು ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಆಯ್ಕೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತಾದರೂ, ಅವರಿಗೆ ಇನ್ನು ಭಾರತ ತಂಡದಿಂದ ಕರೆ ಬಂದಿಲ್ಲ.

ಇಬ್ಬರು ಅನ್​ಕ್ಯಾಪ್ಡ್ ಪ್ಲೇಯರ್

ಹಾಂಗ್ ಕಾಂಗ್ ಸಿಕ್ಸಸ್ 2026 ಕ್ಕೆ ಆಯ್ಕೆಯಾಗಿರುವ ಏಳು ಆಟಗಾರರ ಪೈಕಿ ರಾಹುಲ್ ತೆವಾಟಿಯಾ ಮತ್ತು ಶಶಾಂಕ್ ಸಿಂಗ್ ಮಾತ್ರ ಭಾರತದ ಹಿರಿಯ ಪುರುಷರ ರಾಷ್ಟ್ರೀಯ ತಂಡದ ಪರ ಇನ್ನು ಅಧಿಕೃತವಾಗಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ತೆವಾಟಿಯಾ ಅವರು 2021 ರ ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರೂ, ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. ಇನ್ನೊಂದೆಡೆ ಶಶಾಂಕ್ ಸಿಂಗ್ ಅವರಿಗೆ ಇನ್ನು ಒಮ್ಮೆಯೂ ಟೀಮ್ ಇಂಡಿಯಾದಿಂದ ಕರೆ ಬಂದಿಲ್ಲ. ಐಪಿಎಲ್‌ನಲ್ಲಿ ಶಶಾಂಕ್ ಸಿಂಗ್ ಕಳೆದ ಮೂರು ಸೀಸನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದು, ಸದ್ಯ ಶ್ರೇಯಸ್ ಅಯ್ಯರ್ ಅವರ ಉಪನಾಯಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. 2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪಂಜಾಬ್ ಫ್ರಾಂಚೈಸಿಯು ಇವರನ್ನು 5 ಕೋಟಿ ರೂಪಾಯಿ ನೀಡಿ ತಂಡದಲ್ಲೇ ಉಳಿಸಿಕೊಂಡಿತ್ತು.

ಕಳಪೆ ಪ್ರದರ್ಶನ ತೋರಿದ್ದ ಭಾರತ

ಕಳೆದ 2025 ರ ಹಾಂಗ್ ಕಾಂಗ್ ಸಿಕ್ಸಸ್ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಡಿಎಲ್‌ಎಸ್ ನಿಯಮದನ್ವಯ 2 ರನ್‌ಗಳ ರೋಚಕ ಜಯ ಸಾಧಿಸಿದ್ದ ಭಾರತ ತಂಡವು, ಆ ನಂತರದ ಪಂದ್ಯಗಳಲ್ಲಿ ಸತತ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗಾಗಿ ಈ ಬಾರಿ ಟೀಮ್ ಇಂಡಿಯಾ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಇರಾದೆಯೊಂದಿಗೆ ಕಣಕ್ಕಿಳಿಯುತ್ತಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಹಾಲಿ ಚಾಂಪಿಯನ್ ಆಗಿ ಈ ಟೂರ್ನಿಗೆ ಪ್ರವೇಶಿಸುತ್ತಿದೆ. ಕಳೆದ ವರ್ಷ ನಡೆದ ಫೈನಲ್ ಪಂದ್ಯದಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಕುವೈತ್ ತಂಡವನ್ನು ಸೋಲಿಸಿದ್ದ ಪಾಕಿಸ್ತಾನ, ದಾಖಲೆಯ ಆರನೇ ಬಾರಿಗೆ ಹಾಂಗ್ ಕಾಂಗ್ ಸಿಕ್ಸಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed